Tuesday, September 23, 2014

ವಲಸೆ


ಚಿಕ್ಕಂದಿನಲ್ಲಿ ಬಡತನದ ಬೇಗುದಿಯನ್ನು ತಾಳಲಾಗದೆ ರಾತ್ರೋ ರಾತ್ರಿ ಹಳ್ಳಿ ಬಿಟ್ಟು ಪಟ್ಟಣ ಸೇರಿ ಅದೂ ಇದೂ ಕೆಲಸ ಮಾಡಿ ಸ್ವಲ್ಪ ಮಟ್ಟಿಗೆ ಹಣ ಸಂಪಾದಿಸಿ ೧೫ ವರ್ಷಗಳ ನಂತರ ಹಳ್ಳಿಯ ನೆನಪಾಗಿ, ಮತ್ತೆ ತನ್ನ ಹಳ್ಳಿಯನ್ನು ತನ್ನವರನ್ನು ನೋಡಲು ಹಳ್ಳಿಗೆ ವಾಪಸಾಗುತ್ತಿದ್ದ ಮುನಿಯನ ಮನಸಿನಲ್ಲಿ ನೂರಾರು ಯೋಚನೆಗಳು ಓಡುತ್ತಿದ್ದವು. ಬಸ್ಸಿನ ಕಿಟಕಿಗೆ ತಲೆ ಆನಿಸಿಕೊಂಡು ಬಸ್ಸನ್ನು ಹಿಂದಿಕ್ಕಿ ಸಾಗುತ್ತಿದ್ದ ಮರಗಳು, ಬೆಟ್ಟಗಳು ಮುನಿಯನ ನೆನಪುಗಳು ಹಿಂದಕ್ಕೆ ಓದುವಂತೆ ಮಾಡಿದ್ದವು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದ್ದ ಮುನಿಯನ ಕುಟುಂಬ ತೀರಾ ಕಡು ಬಡವರ ಅಲ್ಲದಿದ್ದರೂ ಶ್ರೀಮಂತರಂತೂ ಆಗಿರಲಿಲ್ಲ. ಮುನಿಯನ ತಂದೆ ಊರಿನ ಶಾನುಭೋಗರ ಹೊಲದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ. ಅವತ್ತು ದುಡಿದದ್ದು ಅವತ್ತಿಗೆ ಸರಿಹೋಗುತ್ತಿತ್ತು. ಸಣ್ಣ ವಯಸಿನ ಮುನಿಯನಿಗೆ ಇದೆಲ್ಲ ತಿಳಿಯುತ್ತಿರಲಿಲ್ಲ, ಕಾಲ ಕಳೆದು ಮುನಿಯನಿಗೆ ಬುದ್ಧಿ ಬೆಳೆಯುತ್ತಿದ್ದಂತೆ ಊರಿನ ಪರಿಸ್ಥಿತಿಯೂ ಬದಲಾಗುತ್ತಿತ್ತು.

ಕಾಲಕ್ಕೆ ತಕ್ಕಂತೆ ಮಳೆಯಾಗದ ಕಾರಣ ಕೆರೆಗಳಲ್ಲಿ ನೀರು ಕಡಿಮೆಯಾಗತೊಡಗಿತು, ಯಾವಾಗ ಕೆರೆಗಳಲ್ಲಿ ನೀರು ಕಡಿಮೆಯಾಗತೊಡಗಿತೋ ಸಮೃದ್ಧವಾಗಿ ಬೆಳೆಯುತ್ತಿದ್ದ ಹೊಲಗದ್ದೆಗಳು ಬರಡಾಗುತ್ತಾ ಹೋದವು. ಬೋರ್ ವೆಲ್ ಗಳು ಇದ್ದ ಹೊಲಗದ್ದೆಗಳಲ್ಲಿ ಮಾತ್ರ ಬೆಳೆ ಬೆಳೆಯುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಮುನಿಯನಿಗೆ ಹದಿನೆಂಟು ವರ್ಷ, ಹತ್ತನೇ ತರಗತಿ ಮುಗಿಸಿ ಮುಂದೆ ಓದಲು ಆರ್ಥಿಕ ಪರಿಸ್ಥಿತಿ ಆಗದ್ದರಿಂದ ಅಪ್ಪನ ಜೊತೆ ತಾನೂ ಸಹ ಕೂಲಿ ಮಾಡಲು ಹೋಗುತ್ತಿದ್ದ... ದಿನೇ ದಿನೇ ಬದಲಾಗುತ್ತಿದ್ದ ಪರಿಸ್ಥಿತಿಯನ್ನು ನೋಡಿದ ಮುನಿಯ ಇಲ್ಲೇ ಇದ್ದರೆ ಊಟ ಇಲ್ಲದೆ ಸಾಯಬೇಕಾಗುತ್ತದೆ, ಪಟ್ಟಣಕ್ಕೆ ಹೋಗಿ ಏನಾದರೂ ಸಂಪಾದಿಸಿ ಮತ್ತೆ ವಾಪಸ್ ಹಳ್ಳಿಗೆ ಬರುವ ಎಂದು ನಿರ್ಧರಿಸಿದವನೇ ರಾತ್ರೋ ರಾತ್ರಿ ಬಸ್ ಹತ್ತಿ ಬೆಂಗಳೂರಿಗೆ ಬಂದು ಬಿಟ್ಟನು. 

ಬೆಂಗಳೂರಿಗೆ ಬಂದವನು ಮೊದಮೊದಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಹಾಗೆಯೇ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಸಂಪಾದಿಸಿ, ಹತ್ತು ವರ್ಷ ಕೆಲಸ ಮಾಡಿ ತಕ್ಕ ಮಟ್ಟಿಗೆ ಸಂಪಾದಿಸಿದ ಮೇಲೆ ಇದ್ದಕ್ಕಿದ್ದ ಹಾಗೆ ಊರಿನ ನೆನಪಾಗಿ ಒಮ್ಮೆಯಾದರೂ ಹೋಗಿ ಅಪ್ಪ ಅಮ್ಮನನ್ನು ನೋಡಿ ಅವರು ಒಪ್ಪಿದರೆ ಅವರನ್ನೂ ತನ್ನೊಡನೆ ಬೆಂಗಳೂರಿಗೆ ಕರೆದುಕೊಂಡು ಬರಬೇಕೆಂದುಕೊಂಡು ಊರಿನ ಕಡೆ ಹೊರಟಿದ್ದನು.

ತಾನು ಊರು ಬಿಟ್ಟು ಹದಿನೈದು ವರ್ಷಗಳಾಗಿದ್ದವು, ಸಾಕಷ್ಟು ಬದಲಾವಣೆಗಳು ಆಗಿರುತ್ತವೆ, ಊರಿನವರಿಗೆ ನನ್ನ ಗುರುತು ಸಿಗುವುದೋ ಇಲ್ಲವೋ ಎಂದುಕೊಂಡು ಮುಳಬಾಗಿಲಿನಲ್ಲಿ ಇಳಿದನು. ತನ್ನ ಕಣ್ಣನ್ನು ತಾನೇ ನಂಬಲಾದನು. ತಾನು ಹೊರಟಾಗ ಹೇಗಿತ್ತೋ ಈಗಲೂ ಹಾಗೆ ಇತ್ತು ಮುಳಬಾಗಿಲು. ಒಂದೆರೆಡು ಸಣ್ಣ ಪುಟ್ಟ ಬದಲಾವಣೆ ಬಿಟ್ಟರೆ ಹೆಚ್ಚು ವ್ಯತ್ಯಾಸ ಕಾಣಲಿಲ್ಲ. ಅದೇ ಬೆಂಗಳೂರಲ್ಲಿ ಆಗಿದ್ದರೆ ಹದಿನೈದು ದಿನ ಬಿಟ್ಟು ಹೋದರೇನೆ ಸಿಕ್ಕಾಪಟ್ಟೆ ಬದಲಾಗಿ ಬಿಟ್ಟಿರುತ್ತದೆ ಎಂದುಕೊಂಡು ಆಟೋ ಹತ್ತಿ ಹಳ್ಳಿಯ ಕಡೆ ಹೊರಟನು. ಅಲ್ಲಿಂದ ತನ್ನ ಹಳ್ಳಿಗೆ ಆರು ಕಿಲೋಮೀಟರ್... ಮುಂಚೆಯಾದರೆ ನಡೆದುಕೊಂಡು ಹೋಗುತ್ತಿದ್ದದ್ದು ನೆನಪು,ಇಲ್ಲವಾದರೆ ಎತ್ತಿನ ಬಂಡಿಗಳಲ್ಲಿ ಅಥವಾ ಯಾವುದಾದರೂ ಸೈಕಲ್ ನಲ್ಲಿ ಹೋಗುತ್ತಿದ್ದದ್ದು.... ಈಗ ಆಟೋಗಳು ಆ ಜಾಗವನ್ನು ಆಕ್ರಮಿಸಿದ್ದವು..

ಊರು ಹೆಚ್ಚು ಬದಲಾಗಿಲ್ಲದಿದ್ದರೂ ಪ್ರಾಕೃತಿಕವಾಗಿ ಬಹಳಷ್ಟು ಬದಲಾವಣೆಗಳು ಆಗಿದ್ದವು, ಮುಂಚೆ ರಸ್ತೆಯ ಅಕ್ಕಪಕ್ಕಗಳಲ್ಲಿ ಇದ್ದ ಬೃಹದಾಕಾರದ ಸಾಲುಮರಗಳು ರಸ್ತೆ ಅಗಲೀಕರಣದ ನೆಪದಲ್ಲಿ ನೆಲ ಕಚ್ಚಿದ್ದವು, ಅಲ್ಲಿ ಮರಗಳಿದ್ದವು ಎಂದೇ ಹೇಳಲು ಆಗುತ್ತಿರಲಿಲ್ಲ, ಕೆರೆಗಳು ಬತ್ತಿ  ವರ್ಷಗಳಾದಂತೆ ತೋರುತ್ತಿದ್ದವು. ಮುಂಚೆ ಹೆದ್ದಾರಿಯಿಂದ ಹಳ್ಳಿಗೆ ಕವಲೊಡೆಯುವ ದಾರಿಯಲ್ಲಿ ಮಾರಂಡಹಳ್ಳಿ ಬೋರ್ಡಿಗೆ ಹುಡುಕಾಡುತ್ತಿದ್ದ. ಅಷ್ಟರಲ್ಲಿ ಆಟೋದವನು ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ತಿರುಗಿಸಿದನು. ಕೂಡಲೇ ಏನಪ್ಪಾ ಇಲ್ಲಿ ಯಾಕೆ ತಿರುಗಿಸಿದೆ ನಾನು ಮಾರಂಡಹಳ್ಳಿಗೆ ಹೋಗಬೇಕು ಎಂದಿದ್ದಕ್ಕೆ ಸ್ವಾಮಿ ಇದೇ ಮಾರಂಡಹಳ್ಳಿ ರಸ್ತೆ ಎಂದನು.

ಇಲ್ಲಿ ಬೋರ್ಡ್ ಇತ್ತಲ್ಲ ಏನಾಯ್ತು.... ಹೋ ಸ್ವಾಮಿ ನೀವು ಈ ಕಡೆ ಬಂದು ಎಷ್ಟು ವರ್ಷ ಆಯ್ತು? ಆ ಬೋರ್ಡ್ ಹೋಗಿ ಐದು ವರ್ಷದ ಮೇಲಾಯ್ತು, ರಸ್ತೆ ಅಗಲೀಕರಣದ ಸಮಯದಲ್ಲಿ ತೆಗೆದದ್ದು ಮತ್ತೆ ಹಾಕಲೇ ಇಲ್ಲ ಎಂದ. ಸರಿ ನಡಿಯಪ್ಪ ಎಂದುಕೊಂಡು ಹಳ್ಳಿ ದಾರಿಯನ್ನು ನೋಡೋಣ ಎಂದುಕೊಂಡು ಸುತ್ತಲೂ ನೋಡುತ್ತಿದ್ದ. ಒಂದು ಕಾಲದಲ್ಲಿ ಹಳ್ಳಿ ದಾರಿಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಭತ್ತದ ಗದ್ದೆಗಳು, ಗದ್ದೆಗಳು, ಕಡಲೇಕಾಯಿ ಹೊಲಗಳು, ತರಕಾರಿ ಬೆಳೆಯುತ್ತಿದ್ದ ಹೊಲಗಳಿದ್ದ ಜಾಗಗಳೆಲ್ಲ  ಬರಡಾಗಿ ಆ ಜಾಗದಲ್ಲಿ ಈಗ ನೀಲಗಿರಿ ಬಂದಿದ್ದವು. ಒಮ್ಮೆ ನೀಲಗಿರಿ ಬಂತೆಂದರೆ ಮತ್ತೆ ಆ ಭೂಮಿ ಇನ್ಯಾವುದಕ್ಕೂ ಪ್ರಯೋಜನವಿಲ್ಲ ಎಂದರ್ಥ. ಹಾಗೆ ಮುಂದೆ ಬಂದರೆ ಇಡೀ ಹಳ್ಳಿಗೆ ನೀರು ಒದಗಿಸುತ್ತಿದ್ದ ಅಡವಿ ಕೆರೆ ಬಿರುಕು ಬಿಟ್ಟುಕೊಂಡು ಒಣಗಿ ಹೋಗಿತ್ತು. ಅಲ್ಲಿಯೂ ೨೦ - ೩೦ ಬೋರ್ವೆಲ್ ಗಳನ್ನು ಹಾಕಿದ್ದರು.

ಛೇ ಹೇಗಿದ್ದ ಹಳ್ಳಿ ಹೇಗಾಗಿ ಹೋಯಿತು ಎಂದು ಮನಸು ಮರುಗುತ್ತಿತ್ತು. ಹಾಗೆಯೇ ಮುಂದೆ ಬಂದಾಗ ಆಟೋ ನಿಂತಿತು. ಕೆಳಗಿಳಿದು ಆಟೋದವನಿಗೆ ದುಡ್ಡು ಕೊಟ್ಟು ಒಮ್ಮೆ ಸುತ್ತಲೂ ನೋಡಿದ. ಸದಾಕಾಲ ಯಾರಾದರೊಬ್ಬರು ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಿದ್ದ ಸರ್ಕಾರಿ ಶಾಲೆಯ ಕಟ್ಟೆ ಹಾಗೆಯೇ ಇತ್ತು..ಆದರೆ ಯಾರೊಬ್ಬರೂ ಕಾಣಲಿಲ್ಲ. ಹಾಗೆ ಊರದಾರಿಯಲ್ಲಿ ಮುಂದಕ್ಕೆ ಸಾಗಿದರೆ ಊರ ಮುಂದೆಯೇ ಇದ್ದ ಪಟೇಲರ ಮನೆ ಬೇಗ ಜಡಿದಿತ್ತು, ಮುಂದೆ ಬಂದರೆ ಗುಂಡಪ್ಪನವರ ಮನೆ ಶಿಥಿಲಗೊಂಡು ಯಾರೂ ಕಾಣಲಿಲ್ಲ, ಎಲ್ಲಿಯೂ ಯಾರೂ ಕಾಣುತ್ತಿಲ್ಲ, ಪರಿಚಯಸ್ಥರ ಮನೆಗಳಿಗೆ ಬೀಗ ಜಡಿದಿತ್ತು, ಮನೆ... ನಾನಿದ್ದ ಮನೆ ಹತ್ತಿರವಾಗುತ್ತಿದ್ದಂತೆ... ಎದೆ ಬಡಿತ ಜೋರಾಯಿತು, ಅಪ್ಪ ಅಮ್ಮ ತನ್ನನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೋ, ಹೇಗೆ ಸ್ವೀಕರಿಸುತ್ತಾರೋ, ತನ್ನನ್ನು ನೋಡಿ ಸಂತೋಷ ಪಡುತ್ತಾರೋ, ಬಿಟ್ಟು ಹೋದೆ ಎಂದು ಕೋಪಿಸಿಕೊಳ್ಳುತ್ತಾರೋ ಎಂದು ದುಗುಡದಿಂದಲೇ ತಾವಿದ್ದ ಮನೆ ಬಳಿ ಬಂದರೆ ಒಂದು ಕ್ಷಣ ದುಃಖ ಉಮ್ಮಳಿಸಿ ಬಂತು... ಮನೆಯ ಬಾಗಿಲು ಗೋಡೆಗಳೆಲ್ಲ ಶಿಥಿಲವಾಗಿ ಯಾವಾಗ ಬೇಕಾದರೂ ಬೀಳುವ ಹಾಗಿತ್ತು.

ಅಲ್ಲಿಂದಲೇ ಅಮ್ಮ ಎಂದು ಕೂಗಿದ.... ಯಾವುದೇ ಉತ್ತರ ಬರಲಿಲ್ಲ, ಅಪ್ಪ ಎಂದು ಕರೆದ.... ಇಲ್ಲ, ಯಾವುದೇ ಉತ್ತರ ಇಲ್ಲ... ಗಂಟಲು ಉಬ್ಬಿ ಧ್ವನಿ ಆಚೆ ಬರದಂತಾಯಿತು, ಕಣ್ಣಂಚಿನಿಂದ ಬಂದ ನೀರನ್ನು ಒರೆಸಿಕೊಂಡು ಮತ್ತೊಮ್ಮೆ ಗಟ್ಟಿಯಾಗಿ ಅಮ್ಮ ಎಂದು ಕೂಗಿದ, ಇಲ್ಲ ಯಾವುದೇ ಉತ್ತರ ಇಲ್ಲ.... ಅಪ್ಪ ಎಂದಾಗ ಒಳಗಿನಿಂದ ಯಾರದು... ಎಂಬ ಕೀರಲು ಧ್ವನಿಯಿಂದ ಪೂರ ಕೃಶವಾಗಿ ಬೆನ್ನು ಬಾಗಿ ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಒಬ್ಬ ಅಜ್ಜ ಆಚೆ ಬಂದರು.... ಒಳಗೆ ಸರಿಯಾಗಿ ಬೆಳಕಿರದಿದ್ದರಿಂದ ಸರಿಯಾಗಿ ತಿಳಿಯಲಿಲ್ಲ.... ಪೂರ್ಣ ಬೆಳಕು ಬಿದ್ದಾಗ ಕಾಲಡಿಯ ಭೂಮಿ ಒಮ್ಮೆಲೇ ಕುಸಿದಂತಾಗಿ ಕಾಲಲ್ಲಿದ್ದ ಶಕ್ತಿಯೆಲ್ಲ ಉಡುಗಿ ಹಾಗೇ ಕುಸಿದು ಬಿದ್ದ.... ಅಲ್ಲಿ ಬಂದಿದ್ದ ವ್ಯಕ್ತಿ ಬೇರ್ಯಾರೂ ಆಗಿರದೆ ತನ್ನ ಅಪ್ಪನೇ ಆಗಿದ್ದರು....

ಯಾರದೂ ಎಂದು ತನ್ನ ಕನ್ನಡಕವನ್ನು ಸರಿಮಾಡಿಕೊಂಡು ತನ್ನ ಬಳಿ ಬಂದವರೇ... ತನ್ನನ್ನು ಹತ್ತಿರದಿಂದ ನೋಡಿ.... ನೀನು.... ನೀನು... ಮು.. ಮು.. ನಿ...

ಧಪ್ ಎಂದು ದೇಹ ನೆಲಕ್ಕೆ ಉರುಳಿತು...

ಮುನಿಯನಿಗೆ ಏನಾಯಿತು ಎಂದು ಅರಿವಾಗಲಿಲ್ಲ.... ಅಪ್ಪ... ಅಪ್ಪ ಎಂದು ಕೂಗುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.... ಅಷ್ಟರಲ್ಲಿ ಅಲ್ಲಿಗೆ ಒಂದಿಬ್ಬರು ಯುವಕರು ಬಂದು ಕೆಳಗಿ ಬಿದ್ದಿದ್ದ ಮುನಿಯನ ತಂದೆಯನ್ನು ಸಿದ್ದಣ್ಣ.... ಸಿದ್ದಣ್ಣ ಎಂದು ಎಬ್ಬಿಸಿ ಗೋಡೆಗೆ ಒರಗಿಸಿ, ಒಬ್ಬ ಮನೆಯ ಒಳಗೆ ಹೋಗಿ ಒಂದು ತಂಬಿಗೆಯಲ್ಲಿ ನೀರನ್ನು ತಂದು ಅಪ್ಪನಿಗೆ ಕುಡಿಸಲು ಪ್ರಯತ್ನಿಸಿದ.... ಆದರೆ ಅಷ್ಟರಲ್ಲೇ ಅಪ್ಪನ ಪ್ರಾಣ ಗಾಳಿಯಲ್ಲಿ ಲೀನವಾಗಿ ಹೋಗಿತ್ತು....

ಇನ್ನೊಬ್ಬ ಯುವಕ ಮುನಿಯನನ್ನು ನೋಡಿ, ನೀನು ಮುನಿಯ ಅಲ್ಲವೇ..... ಲೇ ಮುನಿಯ ನಾನ್ ಕಣ್ಲ.... ಸುಕುಮಾರ.... ಲೇ.... ನಿಮ್ಮಪ್ಪ ನಿನ್ನನ್ನು ನೋಡಕ್ಕೊಸ್ಕರ ಹತ್ತು ವರ್ಷದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಮಗ ಇವತ್ತು ಬರ್ತಾನೆ, ನಾಳೆ ಬರ್ತಾನೆ ಅಂತ ಕೂತಿದ್ದ ಕಣ್ಲ.... ನೋಡ್ಲಾ ವಿಧಿ ಅನ್ನೋದು ಇದಕ್ಕೇ ಕಣ್ಲ.... ನಿನ್ನನ್ನು ನೋಡೇ ಪ್ರಾಣ ಬಿಟ್ಟ...

ಅವನ ಮಾತುಗಳನ್ನು ಕೇಳಿ ಹೃದಯ ವಿದ್ರಾವಕವಾಗಿ ಅಳಬೇಕೆಂದರೂ ಅದ್ಯಾಕೋ ಗೊತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತಿಲ್ಲ... ಹಾಗೆಯೇ ಎದ್ದು ಒಳಗೆ ಹೋದ.... ಅಮ್ಮಾ .... ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಮನೆಯೆಲ್ಲಾ ಹುಡುಕಿದ.... ಏನೂ ಪ್ರಯೋಜನವಾಗಲಿಲ್ಲ... ಆಚೆ ಬಂದು ಸುಕುಮಾರನನ್ನು ಅಮ್ಮಾ ಎಲ್ಲೋ ಎಂದ.... ಅಮ್ಮ ತೀರಿಹೋಗಿ ಅದಾಗಲೇ ಹತ್ತು ವರ್ಷ ಕಳೆಯಿತು ಎಂದು ಅವನ ಮಾತು ಪೂರ್ತಿಯಾಗುವಷ್ಟರಲ್ಲಿ ಕಣ್ಣು ಕತ್ತಲಾದಂತಾಗಿ ಬಿದ್ದುಬಿಟ್ಟ.... ಮತ್ತೆ ಕಣ್ಣು ಬಿಟ್ಟಾಗ ಅಲ್ಲೇ ಜಗಲಿಯ ಮೇಲೆ ಕುಳಿತಿದ್ದ...

ಅಪ್ಪನ ಕಾರ್ಯವನ್ನು ಮುಗಿಸಿ ಬಂದು ಮನೆಯ ಕಟ್ಟೆಯ ಮೇಲೆ ಕುಳಿತು ಸುಕುಮಾರನ ಕಡೆ ನೋಡಿದಾಗ, ಮುನಿಯ ನೀನು ಮನೆ ಬಿಟ್ಟು ಹೋದಾಗಿನಿಂದ ನಿಮ್ಮಪ್ಪ ಅಮ್ಮ ನಿನ್ನನ್ನು ಹುಡುಕಲು ಮಾಡದ ಪ್ರಯತ್ನವಿಲ್ಲ... ಏನೇ ಮಾಡಿದರೂ ನೀನು ದೊರೆಯದಿದ್ದಾಗ ಅದೇ ಕೊರಗಿನಲ್ಲಿ ನಿಮ್ಮಮ್ಮ ಹಾಸಿಗೆ ಹಿಡಿದಳು, ಅವಳಿಗೆ ಔಷಧಿ ಕೊಡಿಸಲು ಸಹ ನಿಮ್ಮಪ್ಪನ ಬಳಿ ದುಡ್ಡಿರಲಿಲ್ಲ, ಅದೇ ಸಮಯಕ್ಕೆ ಭೀಕರ ಬರ ಬಂದು ಅದೇ ಬರಗಾಲದಲ್ಲಿ ನಿಮ್ಮಮ್ಮ ಕೊನೆ ಉಸಿರೆಳೆದಳು. ಅವಳು ಹೋದ ಮೇಲೆ ನಿಮ್ಮಪ್ಪ ಒಂಟಿಯಾಗಿಬಿಟ್ಟ... ಅವಾಗ ಇವಾಗ ಯಾರಾದರೂ ಏನಾದರೂ ಕೊಟ್ಟರೆ ತಿನ್ನುತ್ತಿದ್ದ, ಇಲ್ಲವಾದರೆ ಹಾಗೇ ಇದ್ದು ಬಿಡುತ್ತಿದ್ದ... ಯಾರಾದರೂ ಕರೆದರೆ ಹೋಗಿ ಕೂಲಿ ಮಾಡುತ್ತಿದ್ದ ಇಲ್ಲವಾದರೆ ಸುಮ್ಮನಾಗಿ ಬಿಡುತ್ತಿದ್ದ.... ನಿನ್ನ ಬಗ್ಗೆ ಯಾರಾದರೂ ಬೈದರೆ ಅವರಿಗೆ ಹೊಡೆದೇ ಬಿಡುತ್ತಿದ್ದ... ಎಂದಾದರೂ ಒಂದು ದಿನ ಬಂದೇ ಬರುತ್ತಾನೆ, ಅವನು ಬರುವ ತನಕ ನಾನು ಸಾಯುವುದಿಲ್ಲ ಎನ್ನುತ್ತಿದ್ದ.... ಇವತ್ತು ನೋಡು ನಿನ್ನನ್ನು ನೋಡಿಯೇ ಪ್ರಾಣ ಬಿಟ್ಟ ಎಂದು ನಿಟ್ಟುಸಿರು ಬಿಟ್ಟ...