Friday, July 18, 2014

ಸ್ವಾತಿ ಮುತ್ತಿನ ಮಳೆ ಹನಿಯೇ...



ಧಗಧಗಿಸುವ ಬೇಸಿಗೆ ಮುಗಿದು ಮುಂಗಾರು ಶುರುವಾಗಿತ್ತು... ಎಲ್ಲೆಡೆ ತುಂತುರು ಮಳೆ, ಎಲ್ಲೆಲ್ಲೂ ಹಸಿರು ತುಂಬಿ ವಾತಾವರಣ ಬಹಳ ಹಿತಕರವಾಗಿತ್ತು. ನಾನು  ವಾತಾವರಣ ನಿರೀಕ್ಷಿಸಿದ್ದೇನೋ ಸರಿಯಾಗಿ ಹಾಗೆಯೇ ಇತ್ತು. ಏಕೆಂದರೆ ಇಂದು ನಾನು ಸ್ವಾತಿಗೆ ನನ್ನ ಪ್ರೀತಿಯನ್ನು ನಿವೇದನೆ ಮಾಡುವವನಿದ್ದೆ. ಬೆಳಗ್ಗಿಂದ ಮೋಡ ಕವಿದ ವಾತಾವರಣ ಇದ್ದಿದರಿಂದ ಎದ್ದಿದ್ದು ತಡವಾಗಿತ್ತು. ಎದ್ದ ಕೂಡಲೇ ಮೊಬೈಲ್ ನೋಡಿದರೆ ಆಗಲೇ ಸ್ವಾತಿ ಮೊಬೈಲಿಂದ ಐದು ಮಿಸ್ಡ್ ಕಾಲ್ ಮತ್ತು ಐದು ಮೆಸೇಜ್ ಬಂದಿತ್ತು.

ಲೋ... ಎಂಟು ಗಂಟೆಗೆ ದೇವಸ್ಥಾನಕ್ಕೆ ಬಾ ಎಂದು ಎಲ್ಲೋ ಇದ್ದೀಯ? ನಾನು ಮನೆಗೆ ಹೋಗುತ್ತಿದ್ದೇನೆ. ಬೈ ಎಂದು ಮೆಸೇಜ್ ಮಾಡಿದ್ದಳು.

ಛೇ ಹಾಳಾದ್ದು ನಿದ್ರೆ ಬೇಕಾದಾಗ ಬರೋದಿಲ್ಲ, ಬೇಡ ಎಂದಾಗ ಬರುತ್ತದೆ ಎಂದುಕೊಂಡು ಬೇಗಬೇಗನೆ ರೆಡಿ ಆಗಿ, ಸ್ವಾತಿಗೆ ಫೋನ್ ಮಾಡಿದರೆ ಅವಳ ಫೋನ್ ಬ್ಯುಸಿ ಬರುತ್ತಿತ್ತು. ಅರ್ಧ ಗಂಟೆ ಸತತವಾಗಿ ಬ್ಯುಸಿ ಬರುತ್ತಿತ್ತು. ಛೇ ಎಂದೂ ಇಲ್ಲದ್ದು ಇವತ್ತೇ ಇಷ್ಟು ಹೊತ್ತು ಬ್ಯುಸಿ ಬರಬೇಕೆ ಅವಳ ಫೋನ್....

ಅಷ್ಟರಲ್ಲಿ ಅವಳೇ ಕರೆ ಮಾಡಿದಳು... ಹಲೋ, ಯಾಕೋ ಅಷ್ಟೊತ್ತಿಂದ ಫೋನ್ ಮಾಡುತ್ತಿದ್ದೀಯ? ಬ್ಯುಸಿ ಇದ್ರೆ ಡಿಸ್ಟರ್ಬ್ ಮಾಡಬಾರದು ಎಂದು ತಿಳಿಯುವುದಿಲ್ಲವ ನಿನಗೆ ಎಂದಳು. ನನಗೆ ಮುಖಕ್ಕೆ ಹೊಡೆದ ಹಾಗಾಯಿತು, ಎನಿವತ್ತು ಯಾವತ್ತು ಇಷ್ಟು ಒರಟಾಗಿ ಮಾತಾಡದ ಸ್ವಾತಿ ಇಂದೇಕೆ ರೀತಿ ಮಾತಾಡುತ್ತಿದ್ದಾಳೆ, ಏನಾಯಿತು ಇವಳಿಗೆ... ಓಹೋ ನಾನು ಲೇಟಾಗಿದ್ದಕ್ಕೆ ರೀತಿ ಮಾತಾಡುತ್ತಿದ್ದಾಳ?

ಸ್ವಾತಿ, ಆಮ್ ಸಾರಿ ಕಣೇ, ಬೆಳಿಗ್ಗೆ ಎದ್ದಿದ್ದು ಲೇಟ್ ಆಯಿತು.... ಅದಕ್ಕೆ ದೇವಸ್ಥಾನಕ್ಕೆ ಬರಲು ಆಗಲಿಲ್ಲ...

ಬಿಡು ಅದಕ್ಯಾಕೆ ಸಾರಿ ಹೇಳ್ತೀಯ? ನನಗೆಷ್ಟು ಮಹತ್ವ, ಯಾವ ಸ್ಥಾನ ಕೊಟ್ಟಿದ್ದೀಯ ಎಂದು ತಿಳಿಯಿತು ಇವತ್ತು...

ಸ್ವಾತಿ ಯಾಕೆ ಸ್ವಾತಿ ಏನೇನೋ ಮಾತಾಡ್ತಿದೀಯ.... ಏನೋ ಒಂದು ದಿನ ಲೇಟ್ ಆಯ್ತು, ಅದಕ್ಕೂ ಸಾರಿ ಹೇಳಿದೆನಲ್ಲ...

ಹ್ಮ್ಮ್... ಸರಿ ಬಿಡು, ಈಗ ಏನು ಹೇಳು..

ಸ್ವಾತಿ... ಅದೂ ಅದೂ... ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕಿತ್ತು.... ಈಗ ಸಿಗ್ತೀಯ?

ಇಲ್ಲ ಕಣೋ...ಸಾರಿ ನನಗೆ ಬೇರೆ ಇಂಪಾರ್ಟೆಂಟ್ ಮೀಟಿಂಗ್ ಇದೆ..

ಸ್ವಾತಿ ಪ್ಲೀಸ್ ಕಣೇ, ಒಂದೈದು ನಿಮಿಷ ಅಷ್ಟೇ...

ಹ್ಮ್ ಸರಿ ಐದೇ ನಿಮಿಷ ಅಷ್ಟೇ.... ಬೇಗ ಬಾ....

ಎಲ್ಲಿದ್ದೀಯ ಸ್ವಾತಿ ಇವಾಗ?

ಇನ್ನೊಂದೈದು ನಿಮಿಷಕ್ಕೆ ದೇವಸ್ಥಾನದ ಬಳಿ ಬರ್ತೀನಿ ಬಾ...

ಛೇ....ಸ್ವಲ್ಪ ಲೇಟ್ ಆಗಿದ್ದಕ್ಕೆ ಇಷ್ಟೆಲ್ಲಾ ಆಟ ಆಡಿಸ್ತಿದಾಳಲ್ಲ ಇವಳು... ಇರ್ಲಿ ಇರ್ಲಿ... ಕೆಲಸ ನಂದು..... ಕತ್ತೆ ಕಾಲು ಹಿಡಿಯಬೇಕು... ಹಿಡಿಯೋಣ ಎಂದುಕೊಂಡು ಬೈಕ್ ಹತ್ತಿ ದೇವಸ್ಥಾನದ ದಾರಿ ಹಿಡಿದೇ. ದಾರಿಯಲ್ಲಿ ದೇವರನ್ನು ಬೇಡಿಕೊಳ್ಳುತ್ತಿದ್ದೆ. ದೇವರೇ ಇವಳು ಬೆಳಗಿನ ಕೋಪವನ್ನು ಮರೆತು ನನ್ನ ಪ್ರೀತಿಯನ್ನು ಅಂಗೀಕರಿಸುವಂತೆ ಮಾಡಪ್ಪಾ ಎಂದುಕೊಂಡು ದೇವಸ್ಥಾನದ ಮುಂದೆ ಗಾಡಿ ನಿಲ್ಲಿಸಿ ಇವಳಿಗಾಗಿ ಹುಡುಕುತ್ತಿದ್ದರೆ ಅಲ್ಲಿ ಕಟ್ಟೆಯ ಮೇಲೆ ಕುಳಿತದ್ದು ಕಂಡಿತು.

ನಾನು ಹತ್ತಿರ ಹೋಗುತ್ತಿದ್ದಂತೆ ಎದ್ದು ನಿಂತು... ಹ್ಮ್ .. ಬೇಗ ಹೇಳೋ ಅದೇನೋ ಹೇಳಬೇಕು ಎಂದೆಯಲ್ಲ... ನಾನು ಅರ್ಜೆಂಟಾಗಿ ಎಲ್ಲೋ ಹೋಗಬೇಕು....

ಮನದಲ್ಲೇ ಅವಳನ್ನು ಬೈದುಕೊಂಡು ಸ್ವಾತಿ ನಮ್ಮಿಬ್ಬರ ಪರಿಚಯವಾಗಿ ಮೂರು ವರ್ಷ ಆಯಿತು, ಯಾವತ್ತು ನೀನು ರೀತಿ ಮಾತಾಡಿದವಳಲ್ಲ.... ಇವತ್ತು ಏಕೆ ಒಂದು ರೀತಿ ವಿಚಿತ್ರವಾಗಿ ಆಡ್ತಿದೀಯ?

ಇದನ್ನು ಕೇಳಕ್ಕೆನ ಇಲ್ಲಿಗೆ ಕರೆಸಿದ್ದು... ಹಾಗಿದ್ರೆ ಹೇಳ್ತೀನಿ ಕೇಳು, ನಾನಿರೋದೆ ಹೀಗೆ ಆಯ್ತಾ ಬೈ... ಎಂದು ಹೊರಡಲು ಅನುವಾದಳು...

ಸ್ವಾತಿ... ಸ್ವಾತಿ... ಸಾರಿ ಸಾರಿ... ಅದನ್ನು ಕೇಳಕ್ಕಲ್ಲ ಕರೆಸಿದ್ದು... ಸ್ವಾತಿ ನಿನಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ... ಆದರೆ ಇನ್ನು ತಡ ಮಾಡಿದರೆ ಅನಾಹುತ ಆಗುವುದೇನೋ... ಸ್ವಾತಿ ಲವ್ ಯೂ ಕಣೆ... ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಕಣೇ...

ಅನಿಲ್.... ನೀನು ನಿಜವಾಗಿಯೂ ತಡ ಮಾಡಿದೆ ಕಣೋ... ಈಗ ಅರ್ಧ ಗಂಟೆ ಮುಂಚೆಯಷ್ಟೇ ನನಗೆ ಒಬ್ಬ ಪ್ರಪೋಸ್ ಮಾಡಿದ, ನಾನೂ ಅವನಿಗೆ ಒಪ್ಪಿಗೆ ಹೇಳಿಬಿಟ್ಟೆ ಕಣೋ... ನೀನು ಅವಾಗಲೇ ಕೇಳಿದೆಯಲ್ಲ ಅರ್ಧಗಂಟೆ ಫೋನ್ ನಲ್ಲಿ ಬ್ಯುಸಿ ಇದ್ದೆ ಅಂತ, ಅದು ಅವನ ಜೊತೆಯೇ ಕಣೋ.... ಮತ್ತು ಈಗ ಅರ್ಜೆಂಟ್ ಮೀಟಿಂಗ್ ಇದೆ ಎಂದು ಹೇಳಿದೆನಲ್ಲ... ಅದೂ ಕೂಡ ಅವನ ಜೊತೆಯೇ ಕಣೋ.... ಒಂದು ವೇಳೆ ಇದೆ ವಿಷಯ ನೀನು ಬೆಳಿಗ್ಗೆಯೇ ಹೇಳಿದ್ದರೆ ನಾನು ಒಪ್ಪುತ್ತಿದ್ದೇನೋ ಏನೋ... ಈಗ ಸಾರಿ ಕಣೋ... ಇನ್ನೇನಾದರೂ ಇತ್ತ ಹೇಳಲು....

ಅಷ್ಟರಲ್ಲಿ ಮಳೆ ಜೋರಾಗಿ ಮಳೆಯ ಹನಿಗಳು ಮುಖಕ್ಕೆ ರಾಚುತ್ತಿದ್ದವು.... ಸ್ವಾತಿ ಏನು ನೀನು ಹೇಳುತ್ತಿರುವುದು?

ಹೌದು ಕಣೋ ಅನಿಲ್, ಅವನು ನನ್ನನ್ನು ಮೂರು ವರ್ಷದಿಂದ ಪ್ರೀತಿಸುತ್ತಿದ್ದಾನಂತೆ, ಆದರೆ ನನ್ನ ಬಳಿ ಹೇಳಿಕೊಳ್ಳಲು ಧೈರ್ಯ ಇರಲಿಲ್ಲವಂತೆ, ಇವತ್ತು ಧೈರ್ಯ ಮಾಡಿ ಹೇಳಿಬಿಟ್ಟ.... ನಾನೂ ಹೂ ಅಂದು ಬಿಟ್ಟೆ...

ಸ್ವಾತಿ ನಿನಗೂ ಅವನನ್ನ ಕಂಡರೆ ಲವ್ ಇತ್ತಾ?

ಇಲ್ಲ ಕಣೋ ಅನಿಲ್, ನನಗೆ ಅವನೆಂದರೂ ಇಷ್ಟವಿರಲಿಲ್ಲ... ನೀನಂದರೂ ಇಷ್ಟವಿರಲಿಲ್ಲ.... ಏನೋ ಹೂ ಅನ್ನಬೇಕು ಅನಿಸಿತು, ಅಂದುಬಿಟ್ಟೆ...

ಸ್ವಾತಿ ಯಾರು ಅದು, ನನಗೆ ಗೊತ್ತಿರುವವನ ಅವನು? ನಾನು ನೋಡಿದ್ದೇನ ಅವನನ್ನು? ನನಗೆ ದುಃಖ ಉಮ್ಮಳಿಸಿ ಬರುತ್ತಿದರೂ ಅದನ್ನು ತಡೆದುಕೊಂಡು ಮಳೆಗೆ ಮುಖಕೊಟ್ಟು ನಿಂತಿದ್ದೆ....

ಅನಿಲ್... ತಗೋ ಕವರ್, ಇದರಲ್ಲಿ ಅವನ ಫೋಟೋ ಇದೆ.... ಸರಿ ಕಣೋ ನಾನಿನ್ನೂ ಹೊರಡುತ್ತೇನೆ, ನನಗೆ ನಿನ್ನ ಹಾಗೆ ಕಾಯಿಸಿ ನೋಯಿಸಿ ಅಭ್ಯಾಸ ಇಲ್ಲ... ಬೈ ಎಂದು ಹೊರಟೇ ಬಿಟ್ಟಳು... ಅವಳು ಹೊರಟ ದಾರಿಯನ್ನು ನೋಡುತ್ತಾ ಅವಳು ಕೊಟ್ಟ ಕವರನ್ನು ತೆರೆಯಲು ಧೈರ್ಯ ಸಾಲದೇ ಕವರನ್ನು ಹಾಗೆಯೇ ಅಲ್ಲೇ ಬಿಸಾಕಿ ಮನೆ ಕಡೆ ಹೊರಟೆ...

ಮಳೆ ಜೋರಾಗಿ ಎದುರಿಗೆ ಏನೂ ಕಾಣಿಸದಷ್ಟು ಮಳೆ ಬರುತ್ತಿತ್ತು... ಅದೇ ಮಳೆ ನೀರಲ್ಲಿ ನನ್ನ ಕಣ್ಣೀರು ಸೇರಿ ಮೈಯೆಲ್ಲಾ ಬಿಸಿ ಎನಿಸುತ್ತಿತ್ತು. ಮುಖ ಒರೆಸಿಕೊಳ್ಳಲು ಎಡಗೈಯಿಂದ ಕ್ಲಚ್ ಬಿಟ್ಟು ಮುಖದ ಮೇಲೆ ಕೈ ಇಟ್ಟೆ. ಅಷ್ಟರಲ್ಲಿ ಯಾರೋ ಗಾಡಿಗೆ ಗುದ್ದಿದಂತಾಯಿತು. ಒಂದು ಕ್ಷಣ ಎಲ್ಲ ಕತ್ತಲಾದಾಂತಾಯಿತು. ಮತ್ತೆ ಕಣ್ಣು ಬಿಟ್ಟರೆ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿದ್ದೆ. ಮೊಣಕೈ, ಮತ್ತು  ಕಾಲು ಸ್ವಲ್ಪ ನೋಯುತ್ತಿತ್ತು.... ಪಕ್ಕದಲ್ಲಿ ಯಾರಾದರೂ ಇದಾರ ಎಂದು ನೋಡಿದರೆ ಸ್ವಾತಿ ನಿಂತಿದ್ದಳು... ಅವಳನ್ನು ನೋಡಿ ಪಕ್ಕಕ್ಕೆ ತಿರುಗಿದೆ.

ಅವಳೇ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡು ಲೋ ಕೋತಿ... ನಿನಗೇನು ಹುಚ್ಚಾ? ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ?
ನನಗೇನು ಆಗಿದ್ದರೆ ನಿನಗೇನು ಸ್ವಾತಿ... ನಿನಗ್ಯಾದೋ ಅರ್ಜೆಂಟ್ ಮೀಟಿಂಗ್ ಇದೆಯಲ್ಲ ಅಲ್ಲಿಗೆ ಹೋಗು, ಇಲ್ಲಿಗೆ ಯಾಕೆ ಬಂದೆ... ?

ಲೋ...ಸುಮ್ಮನೆ ನನಗೆ ಕೋಪ ತರಿಸಬೇಡ... ನಿನಗೇನಾದರೂ ಆದರೆ ನಾನು ನೆಮ್ಮದಿಯಿಂದ ಇರುತ್ತೇನ ಎನ್ನುವಷ್ಟರಲ್ಲಿ ಅವಳ ಗಂಟಲುಬ್ಬಿ ಬಂದು ಕಣ್ಣಲ್ಲಿ ನೀರು ತುಂಬಿತು...

ಹೇ ಸ್ವಾತಿ... ಏನಿದು...

ಲೋ... ನಾನು ಕೊಟ್ಟ ಕವರ್ ತೆಗೆದು ನೋಡಿದೆಯ ನೀನು?

ಇಲ್ಲ...

ನೀನು ಅಲ್ಲೇ ಕವರ್ ತೆಗೆದು ನೋಡಿದ್ದರೆ ಈಗ ಪರಿಸ್ಥಿತಿ ಬರುತ್ತಲೇ ಇರಲಿಲ್ಲ...

ಸ್ವಾತಿ ಏನು ನೀನು ಹೇಳುತ್ತಿರುವುದು?

ನಾನು ಇಷ್ಟ ಪಟ್ಟ ಹುಡುಗ ಯಾರೆಂದು ಕೇಳಿದೆಯಲ್ಲ ಇಲ್ಲಿ ನೋಡು ಎಂದು ತನ್ನ ಮೊಬೈಲನ್ನು ನನ್ನ ಮುಂದೆ ಹಿಡಿದಳು... ಅದನ್ನು ನೋಡಿ ನನಗೆ ಆಶ್ಚರ್ಯ !! ಶಾಕ್, ಸಂತೋಷ, ಆನಂದ ಎಲ್ಲಾ ಒಟ್ಟಿಗೆ ಆಯಿತು... ಏಕೆಂದರೆ ಅಲ್ಲಿದ್ದದ್ದು ನನ್ನದೇ ಫೋಟೋ..

ಸ್ವಾತಿ ಏನೇ ಇದು....

ಹೌದು ಕಣೋ ಕೋತಿ, ನಾನು ನಿನ್ನನ್ನು ಮೂರು ವರ್ಷದಿಂದ ಇಷ್ಟ ಪಡ್ತಿದೀನಿ ಕಣೋ, ನೀನೂ ನನ್ನನ್ನು ಇಷ್ಟ ಪಡ್ತಿದೀಯ ಎಂದು ನಿನ್ನ ಅಕ್ಕನೇ ನನಗೆ ಹೇಳಿದ್ದಳು. ಮತ್ತು ಇವತ್ತು ನೀನು ನನಗೆ ಪ್ರಪೋಸ್ ಮಾಡಲೆಂದೇ ಬೇಗನೆ ದೇವಸ್ಥಾನಕ್ಕೆ ಬರಕ್ಕೆ ಹೇಳಿದ್ದು ಎಂತಲೂ ಅವಳೇ ಹೇಳಿದ್ದು. ಆದರೆ ನೀನು ದೊಡ್ಡ ಸೋಮಾರಿ... ಪ್ರಪೋಸ್ ಮಾಡುವ ದಿನ ಕೂಡ ಲೇಟ್ ಮಾಡಿದೆಯಲ್ಲ... ಅದಕ್ಕೆ ಸ್ವಲ್ಪ ಆಟ ಆಡಿಸೋಣ ಅಂತ ನಾಟಕ ಆಡಿದೆ...

ಆಮೇಲೆ ಯಾಕೋ ನನಗೆ ಬೇಸರ ಆಗಿ ನಿನಗೆ ಸರ್ಪ್ರೈಸ್ ಕೊಡೋಣ ಅಂತ ನಿನ್ನ ಫೋಟೋ ಮತ್ತು ಲವ್ ಲೆಟರ್ ಎರಡನ್ನೂ ಕವರಲ್ಲಿ ಇಟ್ಟು ನಿನಗೆ ಕೊಟ್ಟೆ.... ಆದರೆ ನನಗೆ ಗೊತ್ತಿತ್ತು ನೀನು ಅದನ್ನು ತೆರೆಯುವುದಿಲ್ಲ ಎಂದು, ಅದಕ್ಕೆ ನಿನಗೆ ಕವರ್ ಕೊಟ್ಟು ಅಲ್ಲೇ ಪಕ್ಕದಲ್ಲಿ ನಿಂತು ಗಮನಿಸುತ್ತಿದ್ದೆ. ನನ್ನ ಅನುಮಾನದಂತೆ ನೀನು ಅದನ್ನು ಅಲ್ಲೇ ಬಿಸಾಕಿ ಗಾಡಿ ತೆಗೆದುಕೊಂಡು ಹೊರಟು ಬಿಟ್ಟೆ. ಸಮಯದಲ್ಲಿ ನಿನ್ನ ಪರಿಸ್ಥಿತಿ ಹೇಗಿರುತ್ತದೆ ಎಂದು ತಿಳಿದೇ ನಿನ್ನನ್ನು ಹಿಂಬಾಲಿಸಿದೆ. ಕೊನೆಗೆ ಇಲ್ಲಿಗೆ ಸೇರಿಸಿದೆ...

ಅವಳ ಮಾತನ್ನು ಕೇಳಿ ಏನು ಹೇಳಬೇಕೆಂದು ಗೊತ್ತಾಗದೆ, ಅದು ಆಸ್ಪತ್ರೆ ಎಂದೂ ನೋಡದೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಅವಳ ಕೆನ್ನೆಗೆ ಒಂದು ಮುತ್ತಿಟ್ಟೆ.. ಅದೇ ಸಮಯಕ್ಕೆ ಮೊಬೈಲಿನಲ್ಲಿ ಕಾಲರ್ ಟ್ಯೂನ್ ಹೊಡೆದುಕೊಳ್ಳುತ್ತಿತ್ತು... ಸ್ವಾತಿ ಮುತ್ತಿನ ಮಳೆ ಹನಿಯೇ.

4 comments:

  1. ಅದು ಕಾಲರ್ ಟ್ಯೂನ್ ಬದಲು ರಿಂಗ್ ಟೋನ್ ಅಗಬೇಕಿತ್ತು ಅಲ್ವ...

    ReplyDelete
  2. @Prathik avare...adu bidi...kathe hegittu?

    ReplyDelete
  3. ಕಥೆಯ ನಿರೂಪಣೆ ಚನ್ನಾಗಿದೆ.....

    ReplyDelete