Friday, July 18, 2014

ನೀ ಬಂದು ನಿಂತಾಗ...



ಮನೆಯಲ್ಲಿ ಯಾವುದೋ ಹಾರರ್ ಸಿನೆಮಾ ನೋಡುತ್ತಾ ಕುಳಿತಿದ್ದ ವಿಕ್ರಾಂತ್ ಗೆ ಇದ್ದಕ್ಕಿದ್ದಂತೆ ಕರೆಂಟ್ ಹೋಗಿದ್ದು ಬಹಳ ಬೇಸರ ತಂದಿತ್ತು. ಛೇ ಸಿನೆಮಾ ಒಳ್ಳೆ ಕುತೂಹಲ ಘಟ್ಟದಲ್ಲಿದ್ದಾಗಲೇ ಕರೆಂಟ್ ಹೋಗಬೇಕೆ... ಸಮಯ ನೋಡಿದರೆ ಆಗಲೇ ರಾತ್ರಿ ಹನ್ನೊಂದು ಗಂಟೆ ಆಗಿತ್ತು. ಒಂದು ಹತ್ತು ನಿಮಿಷ ನೋಡೋಣ ಕರೆಂಟ್ ಬಂದರೆ ಸರಿ, ಇಲ್ಲವಾದರೆ ಹಾಗೆ ಮಲಗುವುದು ಎಂದು ಸ್ವಲ್ಪ ಹೊತ್ತು ನೋಡಿದರೂ ಕರೆಂಟ್ ಬರದ ಕಾರಣ ಹಾಗೆ ಮಲಗಿದ.

ಮಲಗಿ ಒಂದರ್ಧ ಗಂಟೆ ಆಗಿತ್ತು, ಅಷ್ಟರಲ್ಲೇ ಯಾರೋ ಜೋರಾಗಿ ಕಿರುಚಿದ ಸದ್ದು ಕೇಳಿ ಗಾಭರಿಯಿಂದ ಎದ್ದು ನೋಡಿದರೆ ಸಮಯ ಸರಿಯಾಗಿ ಹನ್ನೆರೆಡು ಗಂಟೆ ಆಗಿತ್ತು, ಹೋಗಿದ್ದ ಕರೆಂಟ್ ಇನ್ನೂ ಬಂದಿರಲಿಲ್ಲ. ಅಲ್ಲೇ ಇದ್ದ ಟಾರ್ಚ್ ತೆಗೆದುಕೊಂಡು ತನ್ನ ರೂಮನ್ನು ಒಮ್ಮೆ ನೋಡಿದ... ಏನೂ ಕಾಣಲಿಲ್ಲ, ಮನೆಯಲ್ಲಿ ಯಾರೂ ಇರಲಿಲ್ಲ... ಅಪ್ಪ ಅಮ್ಮ ಯಾವುದೋ ಊರಿಗೆ ಹೋಗಿದ್ದರು. ನಿಧಾನವಾಗಿ ರೂಮಿನಿಂದ ಆಚೆ ಬಂದು ಸುತ್ತಲೂ ಟಾರ್ಚ್ ಬಿಟ್ಟು ನೋಡಿದ... ಯಾವುದೇ ಸುಳಿವು ಸಿಗಲಿಲ್ಲ... ಸದ್ದು ಆಚಿನಿಂದ ಬಂದಂತೆ ಇರಲಿಲ್ಲ... ಅಲ್ಲೇ ಎಲ್ಲೋ ಒಳಗಿನಿಂದ ಬಂದ ಹಾಗಿತ್ತು... ವಿಕ್ರಾಂತ್ ಇದ್ದ ಮನೆ duplex ಮನೆ ಆಗಿದ್ದು, ಮೇಲೆ ಎರಡು ರೂಮು ಮತ್ತೆ ಕೆಳಗೆ ಹಾಲು, ಅಡಿಗೆಮನೆ, ದೇವರಮನೆ, ಬಚ್ಚಲು ಮನೆ ಇದ್ದವು.

ವಿಕ್ರಾಂತ್ ಗೋಡೆಗೆ ಒರಗಿಕೊಂಡು ಮತ್ತೊಂದು ರೂಮಿನ ಕಡೆ ಹೆಜ್ಜೆ ಹಾಕುತ್ತಿದ್ದ. ರೂಮಿನ ಸನಿಹ ಬಂದು ಇನ್ನೇನು ರೂಮಿನ ಬಾಗಿಲು ತೆಗೆಯಬೇಕು ಎನ್ನುವಷ್ಟರಲ್ಲಿ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಬಂದು ತಕ್ಷಣ ಹಿಂದೆ ತಿರುಗಿದ  ಅಲ್ಲೇನು ಕಾಣಲಿಲ್ಲ...ಉಫ್ ... ಎಂದು ದೀರ್ಘವಾಗಿ ಒಂದು ಉಸಿರೆಳೆದುಕೊಂಡು ಹಣೆಯ ಮೇಲೆ ಮೂಡಿದ್ದ ಬೆವರನ್ನು ಒರೆಸಿಕೊಂಡು ರೂಮಿನ ಬಾಗಿಲು ತೆರೆದು ಒಳಗೆ ಹೋಗಿ ನೋಡಿದರೆ ಅಲ್ಲೂ ಏನೂ ಕಾಣಲಿಲ್ಲ...

ಇನ್ನೆಲ್ಲಿಂದ ಬಂದಿರಬಹುದು ಸದ್ದು ಎಂದುಕೊಂಡು ಯೋಚಿಸುತ್ತಿರುವಾಗ ಮತ್ತೊಮ್ಮೆ ಜೋರಾಗಿ ಯಾರೋ ಕಿರುಚಿದ ಸದ್ದಾಯಿತು. ಅದು ಯಾವುದೋ ಒಂದು ಹೆಂಗಸಿನ ಸದ್ದಿನಂತಿತ್ತು. ಮತ್ತೊಂದು ಬಾರಿ ಸದ್ದು ಕೇಳಿದ್ದಕ್ಕೆ ವಿಕ್ರಾಂತ್ ಪೂರ ನಡುಗಿ ಹೋಗಿದ್ದ. ಸದ್ದು ಬರುತ್ತಿರುವುದು ಒಳಗಿನಿಂದಲೇ ಎಂದು ಖಚಿತವಾಗಿ ಹೋಗಿತ್ತು.. ಟಾರ್ಚ್ ಬೆಳಕನ್ನು ಮೆಟ್ಟಿಲ ಕಡೆ ತಿರುಗಿಸಿ ಒಂದೊಂದೇ ಮೆಟ್ಟಿಲನ್ನು ಇಳಿಯುತ್ತ ಪದೇ ಪದೇ ಹಿಂತಿರುಗಿ ನೋಡುತ್ತಾ ಕೆಳಗಿಳಿದು ಹಾಲಿಗೆ ಬಂದು ಗೋಡೆಗೆ ಒರಗಿಕೊಂಡು ಟಾರ್ಚ್ ಬೆಳನ್ನು ಹಾಲಿನಲ್ಲಿ ಬಿಟ್ಟ. ಒಂದೊಂದೇ ಮೂಲೆಯನ್ನೂ ಬಿಡದೆ ನೋಡುತ್ತಾ ಬರುತ್ತಿದ್ದಂತೆ, ಇದ್ದಕ್ಕಿದ್ದಂತೆ ತನ್ನ ಕೈಗೆ ಏನೋ ಮೊನಚಾದ ವಸ್ತು ತಾಗಿ ಗಾಭರಿಯಿಂದ ಹಿಂದಕ್ಕೆ ಹೋಗಿ ಟಾರ್ಚನ್ನು ತಾನು ಕೈ ಇಟ್ಟ ಕಡೆ ಬಿಟ್ಟ.

ಅಲ್ಲಿ ಒಂದು ನಕಲಿ ಹುಲಿ ಇದ್ದು, ಅದರ ಬಾಯಿಯಲ್ಲಿ ಕೈ ಇಟ್ಟಿದ್ದ ಅಷ್ಟೇ... ಗಾಭರಿಯಿಂದ ಏದುಸಿರು ಬಂದು ಅಲ್ಲೇ ತಡವುತ್ತ ಫ್ರಿಡ್ಜಿನ ಬಳಿ ಬಂದು ಬಾಗಿಲು ತೆಗೆದು ಬಾಟಲಿನಲ್ಲಿದ್ದ ನೀರನ್ನು ಕುಡಿಯುತ್ತಿದ್ದಂತೆ ಮತ್ತೆ ತನ್ನ ಹಿಂದೆ ಯಾರೋ ಬರುತ್ತಿರುವಂತಾಗಿ ಕೂಡಲೇ ಬಾಟಲನ್ನು ಕೆಳಗಿಟ್ಟು ಟಾರ್ಚನ್ನು ಹಿಂದಕ್ಕೆ ಬಿಟ್ಟರೆ ಅಲ್ಲೂ ಯಾರೂ ಇರಲಿಲ್ಲ. ನಿಧಾನವಾಗಿ ಅಲ್ಲಿಂದ ಅಡಿಗೆ ಮನೆ ಕಡೆಗೆ ನಡೆಯುತ್ತಾ ಬಂದು ಅಡಿಗೆ ಮನೆಯೊಳಗೆ ಬೆಳಕನ್ನು ಬಿಟ್ಟರೆ ಅಲ್ಲೂ ಯಾವುದೇ ಸುಳಿವಿರಲಿಲ್ಲ. ಇನ್ನು ಉಳಿದಿರುವುದು ಬಚ್ಚಲು ಮನೆಯೊಂದೇ.... ಹಾಗಿದ್ದರೆ ಅಲ್ಲಿಂದಲೇ ಸದ್ದು ಬಂದಿರಬಹುದು ಎಂದು ಗಾಭರಿಯಿಂದ ಹಾಲಿನ ನಡುವೆ ಬಂದು ನಿಂತು ಸುತ್ತಲೂ ಒಮ್ಮೆ ನೋಡಿದ.

ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಸುಮಾರು ಹೊತ್ತು ಅಲ್ಲೇ ನಿಂತ... ಆಗಿದ್ದಾಗಲಿ ಬಾಗಿಲು ತೆರೆದೇ ಬಿಡೋಣ ಎಂದುಕೊಂಡು ಅಲ್ಲೇ ಮೂಲೆಯಲ್ಲಿದ್ದ ಒಂದು ಕಬ್ಬಿಣದ ರಾಡನ್ನು ಕೈಗೆ ತೆಗೆದುಕೊಂಡು ನಿಧಾನವಾಗಿ ಬಾಗಿಲ ಬಳಿ ಬಂದು ಬಾಗಿಲಿನ ಹಿಡಿಗೆ ಕೈ ಹಾಕಿದ... ಆದರೆ ಬಾಗಿಲು ತೆರೆಯುವ ಧೈರ್ಯ ಸಾಲದೇ ಮತ್ತೆ ಎರಡು ಹೆಜ್ಜೆ ಹಿಂದೆ ಹಾಕಿದ.

ಬಾಗಿಲು ತೆಗೆಯಲೋ .... ಬೇಡವೋ... ತೆಗೆಯಲೋ... ಬೇಡವೋ ಎಂಬ ಗೊಂದಲದಲ್ಲೇ ನಿಧಾನವಾಗಿ ಬಾಗಿಲ ಬಳಿ ಬಂದು ಬಾಗಿಲ ಹಿಡಿಗೆ ಕೈ ಹಾಕಿ ಜೋರಾಗಿ ತಳ್ಳಿ ಕೈಲಿದ್ದ ರಾಡನ್ನು ಮೇಲೆತ್ತಿದ... ಆದರೆ ಅಲ್ಲೂ ಏನೂ ಇರಲಿಲ್ಲ... ಎಲ್ಲ ಕಡೆ ನೋಡಿ ಆಯಿತು, ಎಲ್ಲೂ ಏನೂ ಕಾಣಿಸುತ್ತಿಲ್ಲ... ಆದರೆ ಸದ್ದು ಬಂದಿದ್ದು ಎಲ್ಲಿಂದ? ಆಚೆಯಿಂದ ಬಂದ ಸದ್ದಾದರೆ ಅಲ್ಲ...ಹ್ಮ್ .... ಏನೋ ವಿಚಿತ್ರ... ಅಥವಾ ರಾತ್ರಿ ಹಾರರ್ ಸಿನಿಮಾ ನೋಡಿದ ಪ್ರಭಾವದಿಂದ ಆಗಿರುವ ಭ್ರಮೆಯ? ಹ್ಮ್ ...ಇದ್ದರೂ ಇರಬಹುದು... ಹೋಗಿ ಮಲಗೋಣ ಎಂದು ಹಿಂತಿರುಗಿದರೆ !!

ಬಿಳಿ ಬಣ್ಣದ ಆಕೃತಿಯೊಂದು ಎದುರಿನಲ್ಲಿ ನಿಂತಿದೆ.... ವಿಕ್ರಾಂತನಿಗೆ ನಖಶಿಖಾಂತ ಬೆವರು ಕಿತ್ತುಕೊಂಡು ಕೈಕಾಲುಗಳು ನಡುಗುತ್ತಿದೆ, ಕೈಯಲ್ಲಿರುವ ರಾಡನ್ನು ಮೇಲೆತ್ತಲೂ ಅವನ ಕೈಲಿ ಆಗುತ್ತಿಲ್ಲ... ಇರುವ ಶಕ್ತಿಯೆಲ್ಲಾ ಒಗ್ಗೂಡಿಸಿ ಕೈಲಿರುವ ರಾಡನ್ನು ಮೇಲೆತ್ತಿ ಇನ್ನೇನು ಆಕೃತಿಯ ಮೇಲೆ ದಾಳಿ ಮಾಡಬೇಕು ಅಷ್ಟರಲ್ಲಿ ಭೀಕರವಾದ, ಕರ್ಣ ಕಟೋರವಾದ ಸದ್ದು ಬಂದಿತು...

ಎದುರಿಗೆ ಆಕೃತಿ, ಕೈಯಲ್ಲಿ ರಾಡು, ಕರ್ಣ ಕಟೋರವಾದ ಸದ್ದು.... ಏನು ಮಾಡುವುದೆಂದು ರಾಡನ್ನು ಬೀಸೋಣ ಎಂದು ಕೈ ಎತ್ತಿದರೆ ಏನೋ ತಡೆಯುತ್ತಿರುವಂತೆ ಭಾಸವಾಯಿತು. ಮತ್ತೊಮ್ಮೆ ಬಲವಾಗಿ ಬೀಸುತ್ತಿದ್ದಾನೆ... ಊಹುಂ.. ಆಗುತ್ತಿಲ್ಲ, ಏನದು ತಡೆಯುತ್ತಿರುವುದು ಎಂದು ನೋಡಿದರೆ ಹೊದ್ದಿಕೆ!! ಹೌದು ತಾನು ಹೊದ್ದಿರುವ ಹೊದ್ದಿಕೆ ಅವನನ್ನು ತಡೆಯುತ್ತಿತ್ತು... ಅಂದರೆ ಅಲ್ಲಿಯವರೆಗೂ ತಾನು ಕಂಡಿತ್ತು ಕನಸೆಂದು, ಕರ್ಣ ಕಟೋರ ಸದ್ದು ಅಲಾರಂ ಎಂದು ಗೊತ್ತಾಗಿ ಅಲಾರಂ ಆಫ್ ಮಾಡಿ ಮುಖ ತೊಳೆಯಲು ಎದ್ದು ಹೋದ. 

No comments:

Post a Comment