Wednesday, December 16, 2015

ಹೀಗೊಂದು ಪ್ರೇಮ ಪತ್ರ

ಆಗಷ್ಟೇ ಮಳೆಗಾಲ ಮುಗಿದು ಚಳಿಗಾಲ ನಿಧಾನವಾಗಿ ಶುರುವಾಗುತ್ತಲಿತ್ತು. ಮಳೆ ಪೂರ್ತಿ ನಿಂತಿರಲಿಲ್ಲವಾದರೂ ಕಳೆದ ಕೆಲ ದಿನಗಳಿಂದ ಬರುತ್ತಿರುವಷ್ಟು ಧೋ ಎಂದು ರಚ್ಚೆ ಹಿಡಿದ ಮಗುವಿನ ಹಾಗೆ ಸುರಿಯುತ್ತಿರಲಿಲ್ಲ. ಆಗಾಗ ಸಣ್ಣ ಸಣ್ಣ ಹನಿ, ಥಟ್ಟನೆ ಸಣ್ಣಗೆ ಮೆದುವಾದ ಗಾಳಿ ಮೈ ಸೋಕಿ ಅದೊಂಥರ ಹಿತವಾದ ಅನುಭವ ಕೊಡುತ್ತಿತ್ತು. ಪ್ರತಿಬಾರಿ ಇಂಥಹ ವಾತಾವರಣ ಕಂಡಾಗ ನೀನೆ ಕಣ್ಮುಂದೆ ಬರ್ತೀಯ ಕಣೋ...

ನೀನೇನು ಮಾತಾಡದಿದ್ದರೂ ಸುಮ್ಮನೆ ನನ್ನ ಸನಿಹದಲ್ಲಿ ಕುಳಿತು ಕೈಯಲ್ಲಿ ಕೈ ಹಿಡಿದು ಗಂಟೆಗಟ್ಟಲೆ ನಿನ್ನ ಭುಜದ ಮೇಲೆ ತಲೆ ಒರಗಿಸಿ ಎದುರಿನ ಸೌಂದರ್ಯ ನೋಡುತ್ತಾ ಕುಳಿತು ಬಿಡೋಣ ಎಂದು ಅದೆಷ್ಟೋ ಬಾರಿ ಅನಿಸಿದ್ದುಂಟು. ನಿನ್ನ ಬಳಿಯೂ ಸುಮಾರು ಬಾರಿ ಹೇಳಿದ್ದೇನೆ.... ನೀನು ಅಷ್ಟೇ ಸಮಾಧಾನದಿಂದ ನನ್ನೊಡನೆ ಸಮಯ ಕಳೆಯುತ್ತಿದ್ದೆ. ನೀನು ಯಾವತ್ತೂ ನನ್ನ ಮೇಲೆ ರೇಗಿದ ನೆನಪೇ ಇಲ್ಲ ಕಣೋ.. ಬಹುಶಃ ಅದಕ್ಕೇ ಅನಿಸುತ್ತೆ ನೀ ನನಗೆ ಇಷ್ಟ ಆಗಿದ್ದು...

ಅದೇನೋ ಗೊತ್ತಿಲ್ಲ ಕಣೋ ನೀ ಮಾತಾಡುತ್ತಿದ್ದರೆ ನನ್ನೇ ನಾನು ಮರೆತು ಬಿಡುತ್ತಿದ್ದೆ. ವಿಷಯ ಯಾವುದೇ ಇರಬಹುದು... ನಮಗೆ ಇಂಥದೇ ವಿಷಯ ಆಗಬೇಕೆಂದಿರಲಿಲ್ಲ ಅಲ್ವಾ... ಎಷ್ಟೋ ಸಲ ಏನೂ ವಿಷಯವೇ ಇಲ್ಲದೆ ಯಾವ್ಯಾವುದೋ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದೆವು ಆಲ್ವಾ... ಹೌದು ಕಣೋ... ನನಗೆ ವಿಷಯ ಮುಖ್ಯ ಆಗಿರಲಿಲ್ಲ... ನಿನ್ನ ಮಾತು ಮುಖ್ಯ ಆಗಿತ್ತು...

ಯಾಕೋ ಇತ್ತೀಚಿಗೆ ಸ್ವಲ್ಪ ಮರೆವು ಜಾಸ್ತಿ ಆಗಿದೆ ಕಣೋ...ಹಾಗೇ ಅಂದಾಜು ಮಾಡಿದರೆ ನನ್ನ ನಿನ್ನ ಪರಿಚಯ ಆಗಿ ಒಂದು ಮೂರು, ಮೂರೂವರೆ ವರ್ಷ ಆಗಿರಬಹುದ? ಅದೇನೋ ಗೊತ್ತಿಲ್ಲ ಕಣೋ ಮೊದಲಿನಿಂದಲೂ ಹುಡುಗರು ಅಂದರೆ ನನಗೆ ಅಷ್ಟಕ್ಕಷ್ಟೇ... ನಿನ್ನ ಪರಿಚಯ ಆಗುವ ಮುನ್ನ ನನಗೆ ಹುಡುಗರು ಸ್ನೇಹಿತರೇ ಇರಲಿಲ್ಲ... ಅಂಥದ್ದರಲ್ಲಿ ನಿನ್ನ ಅದು ಹೇಗೋ ನೀನು ಇಷ್ಟ ಆದೆ? ಅದಕ್ಕೆ ನನ್ನ ಬಳಿಯಂತೂ ಉತ್ತರವಿಲ್ಲ... ನಿನಗೇನಾದರೂ ಗೊತ್ತ? ನನಗೇ ಗೊತ್ತಿಲ್ಲ ಅಂದಮೇಲೆ ನಿನಗೆ ಹೇಗೆ ಗೊತ್ತಿರುತ್ತೆ ಅಲ್ವಾ .... ಅದಕ್ಕಿಂತ ದೊಡ್ಡ ಆಶ್ಚರ್ಯ ಅಂದರೆ ನಿನ್ನನ್ನು ಪ್ರೀತಿಸಿದ್ದು.... ನಿನ್ನಲ್ಲಿ ಅದೇನೋ ಮಾಯೆ ಇದೆ ಕಣೋ, ಮೋಡಿ ಇದೆ ಕಣೋ...ಅದೆಂಥದೋ ಸೆಳೆತ ಇದೆ... ನಿನ್ನ ಕಣ್ಣೋಟ ಇದೆಯಲ್ಲ.... ಎಂಥಹವರೂ ಅದಕ್ಕೆ ಮರುಳಾಗಿ ಬಿಡುವರು....

ಹೇ...ಈಗಲೂ ನೀನೋ ಜೊತೆಯಲ್ಲಿ ಇರಬೇಕು ಅನಿಸುತ್ತಿದೆ ಕಣೋ....ಆದರೆ.... ಹ್ಮ್  ಬೇಡ ಬಿಡು... ಅಭಿ... ಅಳು ಬರ್ತಿದೆ ಕಣೋ... ನಿನ್ನ ಮಡಿಲಲ್ಲಿ ಮಲಗಿ ಮನಸಾರೆ ಅತ್ತುಬಿಡಬೇಕು ಅನಿಸುತ್ತಿದೆ ಕಣೋ.... ಯಾಕೋ ಇವತ್ತು ಬಹಳ ನೆನಪಾಗ್ತಾ ಇದ್ಯ ಕಣೋ... ಅಯ್ಯೋ ನನ್ನ ಬುದ್ಧಿ ನೋಡು... ನೆನಪಾಗಕ್ಕೆ ನಿನ್ನ ಮರೆತರೆ ತಾನೇ... ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ನೀನು ನೆನಪಾಗದ ಒಂದೇ ಒಂದು ಘಳಿಗೆಯೂ ಇಲ್ಲಾ...

ಅಭಿ...ನಿನಗೆ ನೆನಪಿದ್ಯ ನಾ ನಿನಗೆ ಕೊಟ್ಟ ಮೊದಲ ಮುತ್ತು.... ಅವತ್ತು ಜೋರಾಗಿ ಮಳೆ, ನಾನು ಮಳೆಯಲ್ಲೇ ಲಾಂಗ್ ರೈಡ್ ಹೋಗಬೇಕೆಂದು ಹಠ ಹಿಡಿದಾಗಲೂ ನೀನು ನನ್ನ ವಿರೋಧಿಸದೆ ಕರೆದುಕೊಂಡು ಹೋಗಿದ್ದು... ಊರಾಚೆ ಇರುವ ಬೆಟ್ಟದ ಮೇಲೆ ಕುಳಿತು, ಜಿಟಿ ಜಿಟಿ ಮಳೆಯಲ್ಲಿ, ತಣ್ಣನೆ ಗಾಳಿ ಬೀಸುತ್ತಿರಲು ನಾ ನಿನ್ನ ಹಣೆಗೆ ಕೊಟ್ಟ ಮೊದಲ ಮುತ್ತು !! ನನ್ನ ಜೀವನದ ಅಪೂರ್ವವಾದ ಕ್ಷಣ ಕಣೋ ಅದು.... ಅವತ್ತೇ ತಾನೇ ನಾ ನಿನಗೆ ಪ್ರಪೋಸ್ ಮಾಡಿದ್ದು... ನೀನು ನನ್ನನ್ನು ಪ್ರೀತಿಸುತ್ತಿದ್ದೆ ತಾನೇ.... ಆದರೆ ಯಾಕೋ ನೀನು ಯಾವತ್ತು ಹೇಳಿಕೊಂಡಿರಲಿಲ್ಲ... ಆದರೆ ನನಗೆ ಗೊತ್ತು ಕಣೋ... ನನಗಿಂತ ಜಾಸ್ತಿ ಪ್ರೀತಿ ಮಾಡ್ತಿದ್ದೆ ನೀ ನನ್ನ...

ಅಭಿ....ಆ ದಿನದ ನಂತರ ಅದ್ಯಾಕೋ ಗೊತ್ತಿಲ್ಲ ಕಣೋ ದಿನದ ಪ್ರತಿ ನಿಮಿಷ ನಿನ್ನ ಜೊತೆಯೇ ಕಳೆಯಬೇಕು ಅನಿಸುತ್ತಿತ್ತು.... ಆದರೆ ಹಾಗೆನಿಸಿದಾಗೆಲ್ಲ ಪ್ರತಿ ಸಲ ನನ್ನ ದೌರ್ಬಲ್ಯ ನನ್ನನ್ನು ಎಚ್ಚರಿಸಿ ನನ್ನನ್ನು ಕಟ್ಟಿ ಹಾಕುತ್ತಿತ್ತು ಕಣೋ...

ಅಭಿ....ತುಂಬಾ ನೋವಾಗ್ತಿದೆ ಕಣೋ... ಹೊಟ್ಟೆ ಗಟ್ಟಿಯಾಗಿ ಹಿಡಿದುಕೊಂಡು ನೆಲದ ಮೇಲೆ ಬಿದ್ದು ಒದ್ದಾಡಬೇಕು ಅನಿಸ್ತಿದೆ ಕಣೋ... ನೋವು ತಡೆಯಲು ಆಗದೆ ಅಳು ಬರ್ತಿದೆ ಕಣೋ...

ನಿನ್ನಿಂದ ದೂರವಾಗಿ ಅಬ್ಬಬ್ಬಾ ಎಂದರೆ ನಾಲ್ಕೈದು ತಿಂಗಳಾಗಿದೆ ಆಲ್ವಾ... ನಿನಗೆ ಹೇಳದೆ ಕೇಳದೆ ದೂರವಾದೆ... ನಿನ್ನ ಕರೆಗಳನ್ನು ಸ್ವೀಕರಿಸಲಿಲ್ಲ... ನಂತರದಲ್ಲಿ ಫೋನೇ ಉಪಯೋಗಿಸಲಿಲ್ಲ... ನನಗೆ ಗೊತ್ತು ನೀನು ಮನೆಗೆ ಹೋಗಿರುತ್ತೀಯ... ಅಪ್ಪ ಅಮ್ಮನನ್ನು ಕೇಳಿರುತ್ತೀಯ... ಆದರೆ ಅವರು ಏನೂ ಹೇಳಿರುವುದಿಲ್ಲ.... ಹೇಗೆ ತಾನೇ ಹೇಳ್ತಾರೆ... ಅವರನ್ನೂ ನನ್ನ ಆಣೆಯಿಂದ ಕಟ್ಟಿ ಹಾಕಿದ್ದೆನ್ನಲ್ಲ.

ಅಭಿ.. ಆಗ್ತಿಲ್ಲ ಕಣೋ... ಡಾಕ್ಟರ್ ಹೇಳಿರೋ ಪ್ರಕಾರ ಬಹುಶಃ ಇವತ್ತು ಇಲ್ಲ ನಾಳೆಗೆ ನನ್ನ ಕೊನೆ ಶ್ವಾಸ ನಿಲ್ಲತ್ತೆ... ನಿನ್ನ ಬಳಿ ನನ್ನ ವಿಷಯ ಯಾಕೆ ಹೇಳಿರಲಿಲ್ಲ ಎಂದರೆ ನಿನ್ನ ಮುಖದಲ್ಲಿ ದುಃಖ ನೋಡಲು ಇಷ್ಟ ಇರಲಿಲ್ಲ ಕಣೋ... ನನ್ನಿಂದ ಯಾರೂ ದುಃಖ ಅನುಭವಿಸಬಾರದು... ಅದಕ್ಕೆ ಅಪ್ಪ ಅಮ್ಮನಿಗೂ ದೂರ ಬಂದಿರೋದು... ನನ್ನೆದುರು ಅವರು ಅಳ್ತಿದ್ರೆ ನನ್ನ ಖಾಯಿಲೆಗಿಂತ ಆ ನೋವು ಜಾಸ್ತಿ ಆಗತ್ತೆ...

ಹ್ಮ್ ... ಅಭಿ ಈ ಪತ್ರ ನಿನ್ನ ಕೈ.....

Wednesday, July 8, 2015

ಬ್ಲಾಸ್ಟ್ - ಕೊನೆಯ ಭಾಗ


ಅಭಿಮನ್ಯು ಹೇಳಿದಂತೆ ಭಗತ್ ಸಿಂಗ್ ಶ್ರೀಲಂಕಾಗೆ ಹೊರಟು ಅಲ್ಲಿ ಪೋರ್ಟಿನ ಬಳಿ ಯಾರಿಗೂ ಅನುಮಾನ ಬಾರದಂತೆ  ಮೀನುಗಾರರಂತೆ ವೇಷ ಮರೆಸಿಕೊಂಡು ಅಲ್ಲಿ ಯಾರಾದರೂ ಅನುಮಾನಸ್ಪದವಾಗಿ ಕಂಡು ಬರುತ್ತಾರ ಎಂದು ಗಮನಿಸಲು ಶುರು ಮಾಡಿದರು. ಇತ್ತ ಅಭಿಮನ್ಯು ಯಾರಿಗೂ ಸಂದೇಹ ಬರದಂತೆ IG ಆದೇಶದಂತೆ ಹಣದ ವ್ಯವಸ್ಥೆ ಮಾಡುತ್ತಿದ್ದರು.
ಭಗತ್ ಬಂದು ಎರಡು ದಿನವಾಗಿತ್ತು ಅಲ್ಲಿಯವರೆಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಿರಲಿಲ್ಲ. ಅದೇ ವಿಷಯವನ್ನು ಅಭಿಮನ್ಯುವಿಗೆ ಕರೆ ಮಾಡಿ ತಿಳಿಸಿದ್ದರು. ಅದನ್ನು ಕೇಳಿ ಅಭಿಮನ್ಯುವಿಗೂ ಸ್ವಲ್ಪ ಗೊಂದಲವಾಗಿತ್ತು. ಎಲ್ಲಿ ನಮ್ಮ ಚಟುವಟಿಕೆ ಗೊತ್ತಾಗಿ ಮತ್ತೆ ಸ್ಥಳ ಬದಲಾವಣೆ ಮಾಡಿದ್ದಾನೋ ಎಂದು ಅನುಮಾನ ಬರುತ್ತಿದೆ ಭಗತ್... ನೆನ್ನೆಯಿಂದ ಅವನು ಕರೆ ಸಹ ಮಾಡಿಲ್ಲ... ನೋಡೋಣ ಇವತ್ತೊಂದು ದಿನ ನೋಡಿ ನಂತರ ನಿರ್ಧರಿಸೋಣ...

ಭಗತ್ ಜೊತೆ ಮಾತಾಡಿ ಚಿಂತೆಯಲ್ಲಿದ್ದಾಗಲೇ ಅವನು ಕರೆ ಮಾಡಿದ್ದ. Mr. ಅಭಿಮನ್ಯು ನಾನು ನಿಮಗೆ ಕೊಟ್ಟ ಸಮಯ ಮುಗಿಯುತ್ತಾ ಬಂದಿದೆ. ಇನ್ನೆಷ್ಟು ದಿನ ಬೇಕು ನಿಮಗೆ ಹಣ ಹೊಂದಿಸಲು. ನೀನು ತಡ ಮಾಡಿದಷ್ಟೂ ನಿಮಗೇ ತೊಂದರೆ. ಈಗಾಗಲೇ ಮಕ್ಕಳ ಪೋಷಕರು ನಿಮ್ಮ ಡಿಪಾರ್ಟ್ಮೆಂಟ್ ಮತ್ತು ಸರ್ಕಾರವನ್ನು ಹೇಗೆಲ್ಲಾ ಸಾಧ್ಯವೋ ಅಷ್ಟು ವಿಧದಲ್ಲಿ ಛೀಮಾರಿ ಹಾಕಿದ್ದಾಗಿದೆ. ಇನ್ನೂ ನಿಮಗೆ ಬುದ್ಧಿ ಬಂದಿಲ್ಲವ? ಅಥವಾ ಮತ್ತೆ ಏನಾದರೂ ಚಮತ್ಕಾರ ತೋರಿಸಲು ಹೊಂಚು ಹಾಕುತ್ತಿದ್ದೀಯ?

ಬಾರಿ ಏನಾದರೂ ನೀನು ನಿನ್ನ ಬುದ್ಧಿ ಉಪಯೋಗಿಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ ಹುಷಾರ್...

ನೋಡು... ನೀನು ಕೇಳಿರುವ ಮೊತ್ತ ಮಾಮೂಲಿ ಮೊತ್ತ ಅಲ್ಲ... ಹೀಗೆ ಹೋಗಿ ಹಾಗೆ ತಂದುಬಿಡುವುದಕ್ಕೆ... ಅಷ್ಟು ದೊಡ್ಡ  ಹೊಂದಿಸಲು ಸಮಯ ಬೇಡವೇ? ಅದು ಸರಿ ಹಣ ನಿನ್ನ ಕೈಗೆ ಹೇಗೆ ತಲುಪಿಸಬೇಕೆಂದು ನೀನಿನ್ನೂ ಹೇಳೇ ಇಲ್ಲ...

ಹ್ಹ...ಹ್ಹ ... ಅಭಿ ನಿನ್ನ ಸರ್ಕಾರದ ರಾಜಕಾರಣಿಗಳು ಲೂಟಿ ಹೊಡೆದಿರುವ ಹಣ ಎಲ್ಲ ಸೇರಿಸಿದರೆ ನಾನು ಕೇಳಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ಆಗುತ್ತದೆ, ಅಂಥದ್ದರಲ್ಲಿ ನಾನು ಕೇಳಿದ ಮೊತ್ತ ಹೊಂದಿಸಲು ನಿನಗೆ ಸಮಯ ಬೇಕೇ... ಇರಲಿ ಬಿಡು ಅದು ಹೇಗಾದರೂ ಹಾಳಾಗಲಿ... ನಾಳೆ ಸಂಜೆಯ ಹೊತ್ತಿಗೆ ಶ್ರೀಲಂಕಾದಿಂದ ದುಬೈಗೆ ಹೊರಡಲಿರುವ ಹಡಗಿಗೆ ನೀನು ಹಣವನ್ನು ತಲುಪಿಸಬೇಕು. ಇನ್ನೊಂದು ವಿಚಾರ ಹಣದ ಜೊತೆ ನಿನ್ನ ಡಿಪಾರ್ಟ್ಮೆಂಟ್ ನಿಂದ ನಿನ್ನೊಬ್ಬನನ್ನು ಬಿಟ್ಟು ಇನ್ಯಾರೂ ಬರಬಾರದು. ಹಾಗೊಂದು ವೇಳೆ ಬಂದರೆ ಯಾವ ಮಕ್ಕಳೂ ಉಳಿಯುವುದಿಲ್ಲ ನೆನಪಿರಲಿ.

ಅದೇನೋ ಸರಿ... ಆದರೆ ನಿನಗೆ ಹಣ ತಲುಪಿಸಿದ ಮೇಲೆ ನೀನು ಮಕ್ಕಳನ್ನು ಹೇಗೆ ಒಪ್ಪಿಸುತ್ತೀಯ? ನಿನ್ನನ್ನು ನಂಬುವುದಾದರೂ ಹೇಗೆ? ನಾವು ಹಣ ಕೊಟ್ಟ ಮೇಲೆ ನೀನು ನಮಗೆ ಮೋಸ ಮಾಡಿದರೆ?

ಅಭಿಮನ್ಯು ಮೋಸ ಮಾಡುವ ಗುಣ ನಿಮ್ಮದು, ನಿಮ್ಮ ಸರ್ಕಾರದ್ದು ನನ್ನದಲ್ಲ... ಅದೆಲ್ಲಾ ಬಿಡು... ಈಗ ನಿನಗೆ ನನ್ನ ಮಾತನ್ನು ನಂಬುವುದು ಬಿಟ್ಟು ಬೇರೆ ಏನಾದರೂ ಮಾರ್ಗ ಇದೆಯಾ? ಇಲ್ಲಾ ತಾನೇ... ಸುಮ್ಮನೆ ನಾನು ಹೇಳಿದ ಹಾಗೆ ಕೇಳು. ನೀನು ಹಣ ತಲುಪಿಸಿದ ಮರುಕ್ಷಣದಲ್ಲೇ ಮಕ್ಕಳು ನಿನ್ನ ಬಳಿ ಇರುತ್ತಾರೆ. ಪ್ರೋಸೆಸ್ ನಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ....
ಸರಿ ಸರಿ... ನಾಳೆ ಸಂಜೆ ಹೊತ್ತಿಗೆ ನಾನು ಹಣದ ಜೊತೆ ಇರುತ್ತೇನೆ ಎಂದು ಕರೆ ಕಟ್ ಮಾಡಿ, ಕೂಡಲೇ ವಿಷಯವನ್ನು ಭಗತ್ ಸಿಂಗ್ ಗೆ ಕರೆಮಾಡಿ ಹೀಗೆ ಶ್ರೀಲಂಕಾದಿಂದ ದುಬೈಗೆ ಹೋಗುವ ಹಡಗಿನಲ್ಲಿ ಹಣ ತಲುಪಿಸುವ ಹಾಗೆ ಹೇಳುತ್ತಿದ್ದಾನೆ ಮತ್ತು ಕೂಡಲೇ ಮಕ್ಕಳನ್ನು ನಿನಗೆ ಒಪ್ಪಿಸುತ್ತೇನೆ ಎನ್ನುತ್ತಿದ್ದಾನೆ... ಹಾಗಾದಲ್ಲಿ ನನ್ನ ಅಂದಾಜಿನ ಪ್ರಕಾರ ಅವನು ಅಲ್ಲೇ ಎಲ್ಲೋ ಇದ್ದಾನೆ... ಆದರೆ ಎಲ್ಲಿ ಎನ್ನುವುದನ್ನು ನೀನು ಪತ್ತೆ ಹಚ್ಚಬೇಕು..

ಅಭಿ... ನೀನು ನಾಳೆ ಇಲ್ಲಿಗೆ ಬರುವಷ್ಟರಲ್ಲಿ ಅವನನ್ನು ನಿನಗೆ ಜೀವಂತವಾಗಿ ಇಲ್ಲವಾದರೆ ಶವವಾಗಿ ಒಪ್ಪಿಸುವ ಜವಾಬ್ದಾರಿ ನನ್ನದು ಎಂದು ಭಗತ್ ಸಿಂಗ್ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅನುವಾದರು. ಶ್ರೀಲಂಕಾದಿಂದ ದುಬೈಗೆ ಹೋಗುವ ಹಡಗು ಸಿದ್ಧವಾಗಿ ಪೋರ್ಟಿನಲ್ಲಿ ನಿಂತಿದ್ದು ಅದರ ಸುತ್ತಮುತ್ತಲೂ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬರಲಿಲ್ಲ. ಹಾಗೇ ಗೊಂದಲದಲ್ಲಿ ಯೋಚಿಸುತ್ತಿದ್ದಾಗ ಅಲ್ಲಿ ಸರಕು ಸಾಗಿಸುವ ದೊಡ್ಡ ದೊಡ್ಡ ಕಂಟೇನರ್ ಗಳು ಕಂಡು ಒಂದು ಸಣ್ಣ ಸುಳಿವು ಸಿಕ್ಕಂತಾಯಿತು. ಆದರೆ ಅಲ್ಲಿ ಸಾವಿರ ಸಂಖ್ಯೆಯಲ್ಲಿ ಕಂಟೇನರ್ ಗಳು ಇದ್ದವು. ಯಾವುದೆಂದು ಹುಡುಕುವುದು ಮತ್ತು ನಾನೊಬ್ಬ ಸಾಧಾರಣ ಮೀನುಗಾರನ ವೇಷದಲ್ಲಿ ಹೋದರೆ ಖಂಡಿತ ಕೆಲಸ ಆಗುವುದಿಲ್ಲ ಎಂದು ಭಾವಿಸಿ ಒಬ್ಬ ಕಸ್ಟಮ್ಸ್ ಅಧಿಕಾರಿಯ ವೇಷ ಧರಿಸಿ ಅನುಮಾನಾಸ್ಪದ ಕಂಟೇನರ್ ಗಳ ತಪಾಸಣೆಗೆ ಮುಂದಾದರು.

ಇತ್ತ ಅಭಿಮನ್ಯು ಸರ್ಕಾರಕ್ಕೆ ಯಾವುದೇ ಅನುಮಾನ ಬರದಂತೆ ಸರ್ಕಾರ ಹೊಂದಿಸಿದ ಹಣದ ಜೊತೆ ವಿಶೇಷ ವಿಮಾನವೊಂದರಲ್ಲಿ ಶ್ರೀಲಂಕಾಗೆ ಬಂದಿಳಿದರು. ಮೊದಲೇ ಶ್ರೀಲಂಕಾ ಸರ್ಕಾರದ ಜೊತೆ ಮತ್ತು ಪೋಲೀಸರ ಜೊತೆ ಮಾತಾಡಿದ್ದರಿಂದ ಶ್ರೀಲಂಕಾಗೆ ಬಂದಿಳಿಯುತ್ತಿದ್ದಂತೆ ಅಲ್ಲಿಂದ ಹಣವನ್ನು ಪೋರ್ಟಿಗೆ ಸಾಗಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು.

ಭಗತ್ ಸಿಂಗ್ ಅದಾಗಲೇ ಹೆಚ್ಚು ಕಡಿಮೆ ಎಲ್ಲಾ ಕಂಟೇನರ್ ಗಳನ್ನೂ ತಪಾಸಣೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಒಂದು ವೇಳೆ ಅದಾಗಲೇ ಹಡಗಿನಲ್ಲಿ ಸೇರಿಸಿರುವ ಕಂಟೇನರ್ ಗಳಲ್ಲಿ ಏನಾದರೂ.... ಎಂಬ ಅನುಮಾನ ಬಂದ ಕೂಡಲೇ ಶ್ರೀಲಂಕಾದಿಂದ ದುಬೈಗೆ ಹೋಗುವ ಹಡಗಿನ ಬಳಿ ಬಂದರು. ಆದರೆ ಹಡಗಿನ ಒಳಗೆ ಹೋಗುವ ದಾರಿಗಳನ್ನು ಅದಾಗಲೇ ಬಂದ್ ಮಾಡಲಾಗಿತ್ತು. ಭಗತ್ ಸಿಂಗ್ ಯಾರಿಗೂ ಅನುಮಾನ ಬಾರದಂತೆ ಹಡಗಿನ ಬಳಿ ನಿಂತಿದ್ದ ವ್ಯಕ್ತಿಗಳ ಬಳಿ ಬಂದು ನಾನು ಹಡಗಿನ ಒಳಗೆ ಹೋಗಬೇಕು, ಹೊಸ ಆಫೀಸರ್ ಬಂದಿದ್ದಾರೆ ಅವರೊಮ್ಮೆ ತಪಾಸಣೆ ಮಾಡಬೇಕು ಎನ್ನುತ್ತಿದ್ದಾರೆ ಎಂದಾಗ ವ್ಯಕ್ತಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿ, ಇಲ್ಲ ಇದಾಗಲೇ ಎಲ್ಲಾ ತಪಾಸಣೆ ಮುಗಿದಿದೆಯಲ್ಲ... ಇನ್ಯಾವ ತಪಾಸಣೆ ಎಂದರು.

ಹೌದು  ಎಲ್ಲಾ ತಪಾಸಣೆ ಮುಗಿದಿತ್ತು... ಆದರೆ ಇದ್ದಕ್ಕಿದ್ದಂತೆ ಹೊಸ ಆಫೀಸರ್ ಬಂದಿದ್ದಾರೆ, ಅವರು ಮತ್ತೆ ಎಲ್ಲಾ ಹಡಗುಗಳನ್ನು ತಪಾಸಣೆ ಮಾಡಬೇಕು ಎಂದಿದ್ದಾರೆ... ಕೂಡಲೇ ತಪಾಸಣೆ ಮಾಡಬೇಕು. ಕೂಡಲೇ ವ್ಯಕ್ತಿಗಳು ಪಕ್ಕಕ್ಕೆ ಹೋಗಿ ಯಾರಿಗೋ ಕರೆ ಮಾಡಿ ಮಾತಾಡುತ್ತಿದ್ದರು. ಅಷ್ಟರಲ್ಲಿ ಭಗತ್ ಸಿಂಗ್ ಫೋನ್ ಹೊಡೆದುಕೊಂಡಿತು... ಅಭಿಮನ್ಯು ಕರೆ ಮಾಡಿದ್ದರು.

ಭಗತ್ ನಾನು ಪೋರ್ಟಿನ ಬಳಿ ಬರುತ್ತಿದ್ದೇನೆ ಅಲ್ಲಿನ ಪರಿಸ್ಥಿತಿ ಏನು?

ಅಭಿ ನಾನೊಂದು ಅನುಮಾನದ ಮೇಲೆ ನೀನು ಹೇಳಿದ ಹಡಗಿನ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ನೀನು ಯಾವುದೇ ಅನುಮಾನ ಬಾರದಂತೆ ನಿನ್ನ ಪಾಡಿಗೆ ನೀನು ಪೋರ್ಟಿಗೆ ಬಾ. ಮುಂದೇನು ಆಗುತ್ತದೋ ನೋಡೋಣ ಎಂದು ಕರೆ ಕಟ್ ಮಾಡಿದರು. ಇಬ್ಬರು ವ್ಯಕ್ತಿಗಳು ಭಗತ್ ನನ್ನು ಹಡಗಿನ ಒಳಗೆ ಹೋಗಲು ಅನುಮತಿ ನೀಡಿದರು. ಒಳಗೆ ಹೋದ ಭಗತ್ ಸಿಂಗ್ ಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಸುಮಾರು ನೂರರಿಂದ ಇನ್ನೂರು ಕಂಟೇನರ್ ಗಳು ಇದ್ದವು... ಇನ್ನೇನು ಮೊದಲ ಕಂಟೇನರ್ ತೆರೆಯಲು ಹೋಗಬೇಕೆನ್ನುವಷ್ಟರಲ್ಲಿ ಇಡೀ ಹಡಗೇ ನಡುಗುವಂಥಹ ಸ್ಫೋಟ ಕೇಳಿಬಂತು. ಸ್ಫೋಟದ ಕಂಪನಕ್ಕೆ ಹಡಗಿನಲ್ಲಿದ್ದವರೆಲ್ಲ ಎಲ್ಲೆಂದರಲ್ಲಿ ಬಿದ್ದಿದ್ದರು.

ಕೂಡಲೇ ಎಲ್ಲರೂ ಹಡಗಿನಿಂದ ಆಚೆ ಬರುತ್ತಿದ್ದ ಹಾಗೆ ಪೋರ್ಟಿನ ತುಂಬಾ ಹೊಗೆ ತುಂಬಿಕೊಂಡು  ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮಕ್ಕಳನ್ನು ಅಪಹರಿಸಿದ್ದ ತಂಡ ಅಭಿಮನ್ಯುವಿನ ಸೆರೆಯಲ್ಲಿತ್ತು. ಭಗತ್ ಸಿಂಗ್ ಅಭಿಮನ್ಯುವಿನ ಬಳಿ ಬಂದು ಅಭಿ... ಏನಿದೆಲ್ಲ? ನನಗೊಂದೂ ಅರ್ಥವಾಗುತ್ತಿಲ್ಲ.. ಸ್ಫೋಟ ಏನು, ಇವರನ್ನು ಹೇಗೆ ಬಂಧಿಸಿದ್ದು? ಅದು ಸರಿ ಒತ್ತೆಯಾಳಾಗಿದ್ದ ಮಕ್ಕಳೆಲ್ಲಿ?

ಭಗತ್ ಬನ್ನಿ ಎಲ್ಲಾ ನಿಧಾನವಾಗಿ ಮಾತಾಡೋಣ ಎಂದು ಅಲ್ಲಿಂದ ಹೊರಟು ಪೋಲೀಸ್ ಸ್ಟೇಷನ್ ಗೆ ಬಂದು ಒಂದು ಕೊಠಡಿಯೊಳಗೆ ಹೋದರು. ಭಗತ್ ಗೆ ಇನ್ನೂ ಎಲ್ಲವೂ ನಿಗೂಢವಾಗಿತ್ತು. ಅಭಿ ಇದೆಲ್ಲಾ ಹೇಗಾಯಿತು ಎಂದು ಬೇಗ ಹೇಳಿ. ನನಗೆ ಕುತೂಹಲ ತಡೆಯಲು ಆಗುತ್ತಿಲ್ಲ.

ಭಗತ್ ಹೇಳುತ್ತೇನೆ ಒಂದು ನಿಮಿಷ ಎಂದು ವಿಜಯ್ ಬನ್ನಿ ಎಂದರು. ಕೂಡಲೇ ವಿಜಯ್ ಒಳಗೆ ಬಂದರು. ವಿಜಯ್ ನನ್ನು ನೋಡಿ ಭಗತ್ ಗೆ ಆಶ್ಚರ್ಯ... ಅರೇ ವಿಜಯ್ ನೀವು ಕೂಡ ಆಪರೇಷನ್ ನಲ್ಲಿ ಕೆಲಸ ಮಾಡಿದಿರಾ? ಮತ್ತೆ ಅಭಿ ಇದನ್ನು ನನಗೆ ಹೇಳಲೇ ಇಲ್ಲ...

ನಾನು ಹೇಳುತ್ತೇನೆ ಭಗತ್... ಎಂದು ನಾವು ಶಾಲೆ ಮೇಲೆ ದಾಳಿ ಮಾಡಿ ಅವನು ತಪ್ಪಿಸಿಕೊಂಡನೋ ಅಂದೇ ನನಗೆ ನಮ್ಮಲ್ಲೇ ಯಾರೋ ಅವನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅನುಮಾನ ಬಂದಿತ್ತು. ಅದೇ ಅನುಮಾನದ ಮೇಲೆ ವಿಜಯ್ ನನ್ನು ನನಗೆ ಅನುಮಾನ ಇರುವ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ತಿಳಿಸಿದ್ದೆ. ಅದೇ ರೀತಿ ನನ್ನ ಅನುಮಾನ ನಿಜ ಆಗಿತ್ತು... ಅದಾದ ನಂತರ ಅವನು ಶ್ರೀಲಂಕಾಗೆ ಹಣ ತಲುಪಿಸಲು ಹೇಳಿದಾಗ, ನಿಮ್ಮನ್ನು ಇಲ್ಲಿಗೆ ಕಳುಹಿಸಿದ ದಿನವೇ ವಿಜಯ್ ನನ್ನು ಇಲ್ಲಿಗೆ ಬರಲು ಹೇಳಿದ್ದೆ.

ಇಲ್ಲಿ ನಿಮ್ಮ ಮಾಹಿತಿ ಆಧರಿಸಿ ವಿಜಯ್ಗೆ ಸಲಹೆಗಳನ್ನು ಕೊಡುತ್ತಿದ್ದೆ. ಅದೇ ರೀತಿ ನೀವು ಹಡಗಿನ ಒಳಗೆ ಹೋದ ತಕ್ಷಣ ಸಂಭವಿಸಿದ ಸ್ಫೋಟ ಬೇರ್ಯಾರೂ ಮಾಡಿದ್ದಲ್ಲ. ಅದು ವಿಜಯ್ ಕಾರ್ಯತಂತ್ರದ ಒಂದು ಭಾಗವಾಗಿತ್ತು. ಮೊದಲೇ ಶ್ರೀಲಂಕಾ ಪೊಲೀಸರಿಗೆ ಪೋರ್ಟಿನ ಬಳಿ ಸಿದ್ಧರಾಗಿರಲು ಸೂಚಿಸಿದ್ದೆ ಮತ್ತು ಅದೇ ರೀತಿ ಅವರು ಎಲ್ಲಾ ರೀತಿಯಲ್ಲೂ ಸಹಕರಿಸಿ ದುಷ್ಕರ್ಮಿಗಳನ್ನು ಬಂಧಿಸಲು ಸಹಾಯವಾಯಿತು.

ಅದು ಸರಿ ಅಭಿ... ಮಕ್ಕಳು?

ಹೇಳುತ್ತೇನೆ...ನಾವು ಅನುಮಾನ ಪಟ್ಟ ವ್ಯಕ್ತಿಯನ್ನು ಗಮನಿಸುತ್ತಿದ್ದಾಗ ಅವನು ದುಷ್ಕರ್ಮಿಯ ಜೊತೆ ನಿರಂತರ ಸಂಪರ್ಕ ಹೊಂದಿದ್ದು ಗಮನಕ್ಕೆ ಬಂದು ಅವರ ಸಂಭಾಷಣೆಯನ್ನು ಟ್ಯಾಪ್ ಮಾಡಿದಾಗ ನಮಗೊಂದು ಮಹತ್ತರವಾದ ಸುದ್ದಿ ತಿಳಿದು ಬಂತು. ಅದೇನೆಂದರೆ ಮಕ್ಕಳನ್ನು ಇಲ್ಲೇ ಒಂದು ರಹಸ್ಯ ಸ್ಥಳದಲ್ಲಿ ಇಟ್ಟು ಬರೀ ಹಣ ಪಡೆಯಲು ಮಾತ್ರ ಶ್ರೀಲಂಕಾಗೆ ಬರುವುದಾಗಿ ತಿಳಿಯಿತು. ವೇಳೆಗಾಗಲೇ ಅಲ್ಲಿ ಮಕ್ಕಳನ್ನು ಅಲ್ಲಿಂದ ಪಾರು ಮಾಡಲಾಗಿರುತ್ತದೆ.

ಓಹೋ ಅಭಿ ಇಷ್ಟೆಲ್ಲಾ ಸಾಹಸ ಮಾಡಿದ್ದೀರಾ? ಅದು ಸರಿ ಯಾರದು Black Sheep?

ಭಗತ್ ನಿಮಗೆ ಹೇಳಿದರೆ ನೀವು ಗಾಭರಿ ಆಗಬಹುದು.... ಯಾರು ನೀವು ರಾಜೀನಾಮೆ ಕೊಡಲು ಕಾರಣರಾದರೋ ಅದೇ IG ಇವರಿಗೆ ಸಾಥ್ ಕೊಡುತ್ತಿದ್ದದ್ದು. ಯಾರಿಗೂ ಅನುಮಾನ ಬರದೇ ನಡೆದುಕೊಳ್ಳುತ್ತಿದ್ದ... ಆದರೆ ನಾನು ಮತ್ತು ವಿಜಯ್ ನಡೆಸಿದ ಆಪರೇಷನ್ ನಲ್ಲಿ ಅವನೆಂಥಹ ಗೋಮುಖ ವ್ಯಾಘ್ರ ಎಂದು ಗೊತ್ತಾಯಿತು. ಆದರೆ ಅವನಿಗಿನ್ನೂ ನಮಗೆ ಸತ್ಯ ತಿಳಿದಿರುವುದು ಗೊತ್ತಿಲ್ಲ... ಅವನು ನಾನಿಲ್ಲಿ ಹಣ ಕೊಡಲು ಬಂದಿದ್ದೇನೆ ಎಂದೇ ನಂಬಿದ್ದಾನೆ..ಅವನಷ್ಟೇ ಅಲ್ಲ...ನನಗೆ, ವಿಜಯ್ ಮತ್ತು ಈಗ ನಿಮಗೆ ಬಿಟ್ಟರೆ ಇನ್ನಾರಿಗೂ ವಿಷಯ ಗೊತ್ತಿಲ್ಲ. ಇಲ್ಲಿ ಶ್ರೀಲಂಕಾ ಪೋಲೀಸರ formality ಮುಗಿದ ಮೇಲೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ IG ಬಣ್ಣ ಬಯಲು ಮಾಡುತ್ತೇನೆ.

ಅಭಿ ಮತ್ತೆ ಕೋಲಾರದ ಸಮೀಪ ಹಳ್ಳಿಯ ಬಳಿ  ನಡೆದ ಸ್ಫೋಟದಿಂದ ವೈರಸ್ ದಾಳಿಯಾಗಿತ್ತಲ್ಲ, ಮೊದಲು ಇವನ ಬಳಿ ಅದಕ್ಕೆ ಮದ್ದನ್ನು ತೆಗೆದುಕೊಳ್ಳಿ.

ಭಗತ್, ಅದಕ್ಕೆ ಆಗಲೇ ನಮ್ಮ ವಿಜ್ಞಾನಿಗಳೇ ಪರಿಹಾರ ಕಂಡು ಹಿಡಿದು ಅದನ್ನು ವೈರಸ್ ಪೀಡಿತರಿಗೆ ಕೊಡುತ್ತಿದ್ದಾರೆ. ಅದಕ್ಕೂ ಇವನ ಸಹಾಯ ಬೇಕಿಲ್ಲ ಈಗ ಎಂದು ನಕ್ಕು ಅಲ್ಲಿಂದ ಹೊರಟರು