Wednesday, December 16, 2015

ಹೀಗೊಂದು ಪ್ರೇಮ ಪತ್ರ

ಆಗಷ್ಟೇ ಮಳೆಗಾಲ ಮುಗಿದು ಚಳಿಗಾಲ ನಿಧಾನವಾಗಿ ಶುರುವಾಗುತ್ತಲಿತ್ತು. ಮಳೆ ಪೂರ್ತಿ ನಿಂತಿರಲಿಲ್ಲವಾದರೂ ಕಳೆದ ಕೆಲ ದಿನಗಳಿಂದ ಬರುತ್ತಿರುವಷ್ಟು ಧೋ ಎಂದು ರಚ್ಚೆ ಹಿಡಿದ ಮಗುವಿನ ಹಾಗೆ ಸುರಿಯುತ್ತಿರಲಿಲ್ಲ. ಆಗಾಗ ಸಣ್ಣ ಸಣ್ಣ ಹನಿ, ಥಟ್ಟನೆ ಸಣ್ಣಗೆ ಮೆದುವಾದ ಗಾಳಿ ಮೈ ಸೋಕಿ ಅದೊಂಥರ ಹಿತವಾದ ಅನುಭವ ಕೊಡುತ್ತಿತ್ತು. ಪ್ರತಿಬಾರಿ ಇಂಥಹ ವಾತಾವರಣ ಕಂಡಾಗ ನೀನೆ ಕಣ್ಮುಂದೆ ಬರ್ತೀಯ ಕಣೋ...

ನೀನೇನು ಮಾತಾಡದಿದ್ದರೂ ಸುಮ್ಮನೆ ನನ್ನ ಸನಿಹದಲ್ಲಿ ಕುಳಿತು ಕೈಯಲ್ಲಿ ಕೈ ಹಿಡಿದು ಗಂಟೆಗಟ್ಟಲೆ ನಿನ್ನ ಭುಜದ ಮೇಲೆ ತಲೆ ಒರಗಿಸಿ ಎದುರಿನ ಸೌಂದರ್ಯ ನೋಡುತ್ತಾ ಕುಳಿತು ಬಿಡೋಣ ಎಂದು ಅದೆಷ್ಟೋ ಬಾರಿ ಅನಿಸಿದ್ದುಂಟು. ನಿನ್ನ ಬಳಿಯೂ ಸುಮಾರು ಬಾರಿ ಹೇಳಿದ್ದೇನೆ.... ನೀನು ಅಷ್ಟೇ ಸಮಾಧಾನದಿಂದ ನನ್ನೊಡನೆ ಸಮಯ ಕಳೆಯುತ್ತಿದ್ದೆ. ನೀನು ಯಾವತ್ತೂ ನನ್ನ ಮೇಲೆ ರೇಗಿದ ನೆನಪೇ ಇಲ್ಲ ಕಣೋ.. ಬಹುಶಃ ಅದಕ್ಕೇ ಅನಿಸುತ್ತೆ ನೀ ನನಗೆ ಇಷ್ಟ ಆಗಿದ್ದು...

ಅದೇನೋ ಗೊತ್ತಿಲ್ಲ ಕಣೋ ನೀ ಮಾತಾಡುತ್ತಿದ್ದರೆ ನನ್ನೇ ನಾನು ಮರೆತು ಬಿಡುತ್ತಿದ್ದೆ. ವಿಷಯ ಯಾವುದೇ ಇರಬಹುದು... ನಮಗೆ ಇಂಥದೇ ವಿಷಯ ಆಗಬೇಕೆಂದಿರಲಿಲ್ಲ ಅಲ್ವಾ... ಎಷ್ಟೋ ಸಲ ಏನೂ ವಿಷಯವೇ ಇಲ್ಲದೆ ಯಾವ್ಯಾವುದೋ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದೆವು ಆಲ್ವಾ... ಹೌದು ಕಣೋ... ನನಗೆ ವಿಷಯ ಮುಖ್ಯ ಆಗಿರಲಿಲ್ಲ... ನಿನ್ನ ಮಾತು ಮುಖ್ಯ ಆಗಿತ್ತು...

ಯಾಕೋ ಇತ್ತೀಚಿಗೆ ಸ್ವಲ್ಪ ಮರೆವು ಜಾಸ್ತಿ ಆಗಿದೆ ಕಣೋ...ಹಾಗೇ ಅಂದಾಜು ಮಾಡಿದರೆ ನನ್ನ ನಿನ್ನ ಪರಿಚಯ ಆಗಿ ಒಂದು ಮೂರು, ಮೂರೂವರೆ ವರ್ಷ ಆಗಿರಬಹುದ? ಅದೇನೋ ಗೊತ್ತಿಲ್ಲ ಕಣೋ ಮೊದಲಿನಿಂದಲೂ ಹುಡುಗರು ಅಂದರೆ ನನಗೆ ಅಷ್ಟಕ್ಕಷ್ಟೇ... ನಿನ್ನ ಪರಿಚಯ ಆಗುವ ಮುನ್ನ ನನಗೆ ಹುಡುಗರು ಸ್ನೇಹಿತರೇ ಇರಲಿಲ್ಲ... ಅಂಥದ್ದರಲ್ಲಿ ನಿನ್ನ ಅದು ಹೇಗೋ ನೀನು ಇಷ್ಟ ಆದೆ? ಅದಕ್ಕೆ ನನ್ನ ಬಳಿಯಂತೂ ಉತ್ತರವಿಲ್ಲ... ನಿನಗೇನಾದರೂ ಗೊತ್ತ? ನನಗೇ ಗೊತ್ತಿಲ್ಲ ಅಂದಮೇಲೆ ನಿನಗೆ ಹೇಗೆ ಗೊತ್ತಿರುತ್ತೆ ಅಲ್ವಾ .... ಅದಕ್ಕಿಂತ ದೊಡ್ಡ ಆಶ್ಚರ್ಯ ಅಂದರೆ ನಿನ್ನನ್ನು ಪ್ರೀತಿಸಿದ್ದು.... ನಿನ್ನಲ್ಲಿ ಅದೇನೋ ಮಾಯೆ ಇದೆ ಕಣೋ, ಮೋಡಿ ಇದೆ ಕಣೋ...ಅದೆಂಥದೋ ಸೆಳೆತ ಇದೆ... ನಿನ್ನ ಕಣ್ಣೋಟ ಇದೆಯಲ್ಲ.... ಎಂಥಹವರೂ ಅದಕ್ಕೆ ಮರುಳಾಗಿ ಬಿಡುವರು....

ಹೇ...ಈಗಲೂ ನೀನೋ ಜೊತೆಯಲ್ಲಿ ಇರಬೇಕು ಅನಿಸುತ್ತಿದೆ ಕಣೋ....ಆದರೆ.... ಹ್ಮ್  ಬೇಡ ಬಿಡು... ಅಭಿ... ಅಳು ಬರ್ತಿದೆ ಕಣೋ... ನಿನ್ನ ಮಡಿಲಲ್ಲಿ ಮಲಗಿ ಮನಸಾರೆ ಅತ್ತುಬಿಡಬೇಕು ಅನಿಸುತ್ತಿದೆ ಕಣೋ.... ಯಾಕೋ ಇವತ್ತು ಬಹಳ ನೆನಪಾಗ್ತಾ ಇದ್ಯ ಕಣೋ... ಅಯ್ಯೋ ನನ್ನ ಬುದ್ಧಿ ನೋಡು... ನೆನಪಾಗಕ್ಕೆ ನಿನ್ನ ಮರೆತರೆ ತಾನೇ... ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ನೀನು ನೆನಪಾಗದ ಒಂದೇ ಒಂದು ಘಳಿಗೆಯೂ ಇಲ್ಲಾ...

ಅಭಿ...ನಿನಗೆ ನೆನಪಿದ್ಯ ನಾ ನಿನಗೆ ಕೊಟ್ಟ ಮೊದಲ ಮುತ್ತು.... ಅವತ್ತು ಜೋರಾಗಿ ಮಳೆ, ನಾನು ಮಳೆಯಲ್ಲೇ ಲಾಂಗ್ ರೈಡ್ ಹೋಗಬೇಕೆಂದು ಹಠ ಹಿಡಿದಾಗಲೂ ನೀನು ನನ್ನ ವಿರೋಧಿಸದೆ ಕರೆದುಕೊಂಡು ಹೋಗಿದ್ದು... ಊರಾಚೆ ಇರುವ ಬೆಟ್ಟದ ಮೇಲೆ ಕುಳಿತು, ಜಿಟಿ ಜಿಟಿ ಮಳೆಯಲ್ಲಿ, ತಣ್ಣನೆ ಗಾಳಿ ಬೀಸುತ್ತಿರಲು ನಾ ನಿನ್ನ ಹಣೆಗೆ ಕೊಟ್ಟ ಮೊದಲ ಮುತ್ತು !! ನನ್ನ ಜೀವನದ ಅಪೂರ್ವವಾದ ಕ್ಷಣ ಕಣೋ ಅದು.... ಅವತ್ತೇ ತಾನೇ ನಾ ನಿನಗೆ ಪ್ರಪೋಸ್ ಮಾಡಿದ್ದು... ನೀನು ನನ್ನನ್ನು ಪ್ರೀತಿಸುತ್ತಿದ್ದೆ ತಾನೇ.... ಆದರೆ ಯಾಕೋ ನೀನು ಯಾವತ್ತು ಹೇಳಿಕೊಂಡಿರಲಿಲ್ಲ... ಆದರೆ ನನಗೆ ಗೊತ್ತು ಕಣೋ... ನನಗಿಂತ ಜಾಸ್ತಿ ಪ್ರೀತಿ ಮಾಡ್ತಿದ್ದೆ ನೀ ನನ್ನ...

ಅಭಿ....ಆ ದಿನದ ನಂತರ ಅದ್ಯಾಕೋ ಗೊತ್ತಿಲ್ಲ ಕಣೋ ದಿನದ ಪ್ರತಿ ನಿಮಿಷ ನಿನ್ನ ಜೊತೆಯೇ ಕಳೆಯಬೇಕು ಅನಿಸುತ್ತಿತ್ತು.... ಆದರೆ ಹಾಗೆನಿಸಿದಾಗೆಲ್ಲ ಪ್ರತಿ ಸಲ ನನ್ನ ದೌರ್ಬಲ್ಯ ನನ್ನನ್ನು ಎಚ್ಚರಿಸಿ ನನ್ನನ್ನು ಕಟ್ಟಿ ಹಾಕುತ್ತಿತ್ತು ಕಣೋ...

ಅಭಿ....ತುಂಬಾ ನೋವಾಗ್ತಿದೆ ಕಣೋ... ಹೊಟ್ಟೆ ಗಟ್ಟಿಯಾಗಿ ಹಿಡಿದುಕೊಂಡು ನೆಲದ ಮೇಲೆ ಬಿದ್ದು ಒದ್ದಾಡಬೇಕು ಅನಿಸ್ತಿದೆ ಕಣೋ... ನೋವು ತಡೆಯಲು ಆಗದೆ ಅಳು ಬರ್ತಿದೆ ಕಣೋ...

ನಿನ್ನಿಂದ ದೂರವಾಗಿ ಅಬ್ಬಬ್ಬಾ ಎಂದರೆ ನಾಲ್ಕೈದು ತಿಂಗಳಾಗಿದೆ ಆಲ್ವಾ... ನಿನಗೆ ಹೇಳದೆ ಕೇಳದೆ ದೂರವಾದೆ... ನಿನ್ನ ಕರೆಗಳನ್ನು ಸ್ವೀಕರಿಸಲಿಲ್ಲ... ನಂತರದಲ್ಲಿ ಫೋನೇ ಉಪಯೋಗಿಸಲಿಲ್ಲ... ನನಗೆ ಗೊತ್ತು ನೀನು ಮನೆಗೆ ಹೋಗಿರುತ್ತೀಯ... ಅಪ್ಪ ಅಮ್ಮನನ್ನು ಕೇಳಿರುತ್ತೀಯ... ಆದರೆ ಅವರು ಏನೂ ಹೇಳಿರುವುದಿಲ್ಲ.... ಹೇಗೆ ತಾನೇ ಹೇಳ್ತಾರೆ... ಅವರನ್ನೂ ನನ್ನ ಆಣೆಯಿಂದ ಕಟ್ಟಿ ಹಾಕಿದ್ದೆನ್ನಲ್ಲ.

ಅಭಿ.. ಆಗ್ತಿಲ್ಲ ಕಣೋ... ಡಾಕ್ಟರ್ ಹೇಳಿರೋ ಪ್ರಕಾರ ಬಹುಶಃ ಇವತ್ತು ಇಲ್ಲ ನಾಳೆಗೆ ನನ್ನ ಕೊನೆ ಶ್ವಾಸ ನಿಲ್ಲತ್ತೆ... ನಿನ್ನ ಬಳಿ ನನ್ನ ವಿಷಯ ಯಾಕೆ ಹೇಳಿರಲಿಲ್ಲ ಎಂದರೆ ನಿನ್ನ ಮುಖದಲ್ಲಿ ದುಃಖ ನೋಡಲು ಇಷ್ಟ ಇರಲಿಲ್ಲ ಕಣೋ... ನನ್ನಿಂದ ಯಾರೂ ದುಃಖ ಅನುಭವಿಸಬಾರದು... ಅದಕ್ಕೆ ಅಪ್ಪ ಅಮ್ಮನಿಗೂ ದೂರ ಬಂದಿರೋದು... ನನ್ನೆದುರು ಅವರು ಅಳ್ತಿದ್ರೆ ನನ್ನ ಖಾಯಿಲೆಗಿಂತ ಆ ನೋವು ಜಾಸ್ತಿ ಆಗತ್ತೆ...

ಹ್ಮ್ ... ಅಭಿ ಈ ಪತ್ರ ನಿನ್ನ ಕೈ.....