Friday, July 13, 2018

ಸಾಗುತ ದೂರ ದೂರ...

ಸಾಮಾನ್ಯವಾಗಿ ಮನುಷ್ಯ ಒಂದು ಸಾಧನೆ ಮಾಡಬೇಕೆಂದರೆ ಹಲವಾರು ವರ್ಷಗಳ ಶ್ರಮ, ಸಂಕಲ್ಪ, ಪರಿಶ್ರಮ ಅಗತ್ಯ.ಆದರೆ ಅಸಾಧ್ಯ ಎನ್ನುವುದು ಯಾವುದೂ ಅಲ್ಲ. ದೃಢ ನಿರ್ಧಾರ ಮಾಡಿದರೆ ಯಾವುದೇ ಸಾಧನೆ ಮಾಡುವುದು ಸಾಧ್ಯ ಎಂಬುದಕ್ಕೆ ಇಬ್ಬರು ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ರಾಘವೇಂದ್ರ ಕಾಲೋನಿ ಚಾಮರಾಜಪೇಟೆಯ ಶ್ರೀಪಾದರಾಜ ಮಠದ ಶ್ಯಾಮಾಚಾರ್ ಮತ್ತು ರಾಜೇಶ್ ಎನ್ನುವವರೇ ಈ ಸಾಧನೆ ಮಾಡಿದ ಸಾಹಸಿಗಳು. ಇಷ್ಟಕ್ಕೂ ಇವರು ಸಾಧಿಸಿದ ಸಾಧನೆಯಾದರೂ ಏನು?

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಲೇಹ್, ಲಡಾಖ್, ಉತ್ತರಾಖಂಡ್ ಹಾಗೂ ಇನ್ನಿತರ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಸಾಮಾನ್ಯವಾಗಿ ಇವರೆಲ್ಲ ದೆಹಲಿಗೆ ವಿಮಾನ ಅಥವಾ ರೈಲಿನ ಮೂಲಕ ಹೋಗಿ ಅಲ್ಲಿಂದ ಬೈಕ್ ತೆಗೆದುಕೊಂಡು ಹೋಗುವ ಪರಿಪಾಠ ಮತ್ತು ಒಂದು ಗುಂಪಿನಲ್ಲಿ ಹೋಗುವುದು ಸಾಮಾನ್ಯ. ಆದರೆ ನಮ್ಮ ಶ್ಯಾಮಾಚಾರ್ ಅವರು ಮುಂಚಿನಿಂದಲೂ ಸ್ವಲ್ಪ ಸಾಹಸ ಪ್ರವೃತ್ತಿಯವರು ಮತ್ತು ಧೈರ್ಯವಂತ ಸ್ವಭಾವದವರು. ಏನೇ ಮಾಡಿದರೂ ವಿಭಿನ್ನವಾಗಿ ಮಾಡುವ ಇವರು ಬೆಂಗಳೂರಿನಿಂದ ಹೊರಟು ಬದರೀನಾಥ್ ವರೆಗೆ ಸುಮಾರು ೬೦೦೦ ಕಿಲೋಮೀಟರ್ ಗಳನ್ನು ಬೈಕ್ ನಲ್ಲಿ ಹೋಗಿ ಬರಬೇಕೆಂದು ನಿರ್ಧರಿಸಿದ್ದು!!

ಜೂನ್ ತಿಂಗಳ ಕೊನೆಯ ವಾರದಲ್ಲಿ ಶ್ರೀಪಾದರಾಜರ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುತ್ತಿದ್ದ ಹಾಗೆ ಸಿದ್ಧತೆ ಶುರುಮಾಡಿಯೇ ಬಿಟ್ಟರು. ಮೊದಲಿಗೆ ಒಬ್ಬರೇ ಈ ಸಾಧನೆ ಮಾಡಬೇಕೆಂದು ನಿರ್ಧರಿಸಿದ್ದ ಶ್ಯಾಮಾಚಾರ್ ನಂತರ ತಮ್ಮ ತಂಗಿಯ ಒತ್ತಡಕ್ಕೆ ಮಣಿದು ಇನ್ನೊಬ್ಬರನ್ನು ಜೊತೆಯಲ್ಲಿ ಕರೆದೊಯ್ಯಲು ನಿರ್ಧರಿಸಿದರು. ಆಗಲೇ ಇವರಿಗೆ ಜೊತೆಯಾದದ್ದೇ ಶ್ರೀ ಮಠದ ಮತ್ತೊಬ್ಬ ಸಾಹಸಿ ಯುವಕ ರಾಜೇಶ್. ಎಲ್ಲರಿಂದಲೂ ಪ್ರೀತಿಯಿಂದ ರಾಜಿ ಎಂದು ಕರೆಸಿಕೊಳ್ಳುವ ರಾಜೇಶ್ ಶ್ಯಾಮಾಚಾರ್ ಜೊತೆ ಈ ಸಾಹಸ ಯಾತ್ರೆಯ ಸಾಧನೆಗೆ ಕೈ ಜೋಡಿಸಿದರು.

ಸಾಮಾನ್ಯವಾಗಿ ಮಠದ ಬಲಸೇವೆಯಲ್ಲಿ ತೊಡಗಿರುವ ಶ್ಯಾಮಾಚಾರ್ ಅವರ ಉಡುಗೆ ಧಾರ್ಮಿಕವಾದ ಮಡಿ ಪಂಚೆ ಮತ್ತು ಶಲ್ಯ ಧರಿಸುವರಾಗಿದ್ದು ಮೊದಲಿಗೆ ಪಂಚೆ ಧರಿಸೆ ಈ ಸಾಧನೆ ಮಾಡಲು ಮುಂದಾದರು. ಆದರೆ ದೀರ್ಘಾವಧಿ ಪ್ರಯಾಣ ಆದ್ದರಿಂದ ಸುರಕ್ಷತೆಗಾಗಿ ಪ್ಯಾಂಟ್ ಮತ್ತು ಷೂ! ಧರಿಸಲು ಮುಂದಾದರು. ಜೊತೆಗೆ ತಮ್ಮ ನೆಚ್ಚಿನ ರಾಯಲ್ ಏನ್ಫೀಲ್ಡ್ ಬುಲೆಟ್ (ಕೆಎ -೦೫-ಕೆಡಿ -೧೯೯೨) ಗಾಡಿಯನ್ನೂ ಸಿದ್ಧಗೊಳಿಸಿದರು.

ಎಲ್ಲ ಅಂದುಕೊಂಡಂತೆ ಆ ದಿನ ಬಂದೇಬಿಟ್ಟಿತು. ಜುಲೈ ೦೧ನೇ ತಾರೀಖು ೨೦೧೮ ರಂದು ಬೆಳಿಗ್ಗೆ ೦೫.೩೦ ನಗರದ ಶಕ್ತಿಸೌಧ ವಿಧಾನಸೌಧದಿಂದ ತಮ್ಮ ಸಾಧನೆ ಚಾಲನೆ ನೀಡಲೆಂದು ADGP ಭಾಸ್ಕರ ರಾವ್ ಅವರಿಗೆ ಆಮಂತ್ರಣ ನೀಡಲಾಯಿತು. ಹಾಗೆಯೇ ಅವರ ಬಂಧು ಮಿತ್ರರು, ಸ್ನೇಹಿತರು ಎಲ್ಲರಿಗೂ ಆಹ್ವಾನ ನೀಡಲಾಯಿತು. ಪೂರ್ವನಿಯೋಜಿತದಂತೆ ಅಂದು ಬೆಳಿಗ್ಗೆ ವಿಧಾನ ಸೌಧದ ಬಳಿ ಸಂಭ್ರಮದ ವಾತಾವರಣ. ಇವರ ಈ ಸಾಧನೆಯನ್ನು ಸೆರೆಹಿಡಿಯಲು ಮಾಧ್ಯಮ ಮಿತ್ರರು ಸಹ ಆಗಮಿಸಿದ್ದರು. ಸರಿಯಾಗಿ ೫.೩೦ ಕ್ಕ್ಕೆ  ಭಾಸ್ಕರ ರಾವ್ ಅವರು ಧ್ವಜ ತೋರಿಸಿ ಯಾತ್ರೆಗೆ ಚಾಲನೆ ಕೊಟ್ಟರು.



ದಿನಕ್ಕೆ ೫೦೦ ಕಿಮೀ ಗುರಿಯನ್ನಿಟ್ಟುಕೊಂಡು ಹೊರಟ ಸಾಧಕರು ಮಾರ್ಗಮಧ್ಯದಲ್ಲಿ ಸಿಗುವ ಮಠ ಮಂದಿರಗಳನ್ನು ಆಶ್ರಯವಾಗಿ ಪಡೆಯಲು ನಿರ್ಧರಿಸಿದ್ದರು. ಅದರಂತೆ ತಮ್ಮ ಮೊದಲನೇ ದಿನದ ಪಯಣವನ್ನು ಹೈದರಾಬಾದಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಕೊನೆಗೊಳಿಸಿ ಅಲ್ಲಿಯೇ ವಿಶ್ರಾಂತಿ ಪಡೆದು ಮತ್ತೆ ಮುಂದಿನ ಪಯಣದ ಬಗ್ಗೆ ಚರ್ಚಿಸುತ್ತ ಪವಡಿಸಿದರು.





ಎರಡನೇ ದಿನ ಬೆಳಿಗ್ಗೆ ಮತ್ತೆ ೦೫ ಕ್ಕೆ ಎದ್ದು ತಮ್ಮ ಪಯಣವನ್ನು ಮುಂದುವರಿಸಿದರು. ಶ್ಯಾಮಾಚಾರ್ ಅವರು ಮಡಿ ಮೈಲಿಗೆ ವಿಚಾರದಲ್ಲಿ ಬಹಳ ನಿಷ್ಠೆ ಇದ್ದವರಾದ್ದರಿಂದ ಆಚೆ ತಿನ್ನುವುದಾಗಲಿ ಕುಡಿಯುವುದಾಗಲಿ ಮಾಡುತ್ತಿರಲಿಲ್ಲ. ಹಾಗಾಗಿ ಮನೆಯಿಂದಲೇ ಮಾಡಿಕೊಂಡು ಹೋಗಿದ್ದ ತಿಂಡಿಯ ಮೇಲೆ ಆಧರಿಸಬೇಕಾಯಿತು. ನೀರು ಸಹ ಅಷ್ಟೇ.. ದಾರಿಯಲ್ಲಿ ಯಾವುದಾದರೂ ಬೋರ್ ವೆಲ್ ಸಿಕ್ಕರೆ ಅದೇ ನೀರು ಆಧಾರ. ಹೀಗೆಯೇ ತಮ್ಮ ಪಯಣ ಮುಂದುವರೆಸಿ ಎರಡನೇ ದಿನದ ಅಂತ್ಯಕ್ಕೆ ನಾಗಪುರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತಲುಪಿದರು.


ಸ್ವಲ್ಪ ಕಾಲ ಶ್ಯಾಮಾಚಾರ್ ಗಾಡಿ ನಡೆಸಿದರೆ ಮತ್ತೆ ಸ್ವಲ್ಪ ಹೊತ್ತು ರಾಜೇಶ್ ಗಾಡಿ ನಡೆಸುತ್ತಿದ್ದರು. ಒಮ್ಮೊಮ್ಮೆ ಇವರ ಯಾತ್ರೆ ಸುಗಮವಾಗಿ ಸಾಗಿದರೆ ಒಮ್ಮೊಮ್ಮೆ ಪ್ರಕೃತಿಯ ವಿಕೋಪದಿಂದ ಕಷ್ಟವಾಗುತ್ತಿತ್ತು. ಊರು ಬಿಟ್ಟು ಊರು ಹೋದಂತೆ ಕೆಲವೆಡೆ ವಿಪರೀತ ಮಳೆ ಆದರೆ ಕೆಲವೆಡೆ ವಿಪರೀತ ಬಿಸಿಲು ಸೆಖೆ. ಆದರೆ ಇದ್ಯಾವುದೂ ಇವರ ದೃಢತೆ ಮತ್ತು ಅಚಲತೆ ಮುಂದೆ ಮಂಡಿ ಊರಬೇಕಾಯಿತು.


ಎರಡು ದಿನಗಳಷ್ಟರಲ್ಲೇ ಇವರ ಸಾಧನೆಯ ಸುದ್ದಿ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಹಲವೆಡೆ ಸುದ್ದಿ ಮಾಡಿತ್ತು. ಇದರ ಸುದ್ದಿ ತಲುಪಿದ ಪ್ರಸ್ತುತ ಉಡುಪಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಮೊಬೈಲ್ ಮೂಲಕ ಸಂಪರ್ಕಿಸಿ ಅಭಿನಂದಿಸಿ ಆಶೀರ್ವದಿಸಿದರು. ಶ್ರೀಗಳ ಆಶೀರ್ವಚನದಿಂದ ಮತ್ತಷ್ಟು ಹುರುಪು ತುಂಬಿಕೊಂಡು ತಮ್ಮ ಪಯಣ ಮುಂದುವರೆಸಿದ ಸಾಧಕರು ನಾಗಪುರದಿಂದ ೫೯೯ ಕಿಮೀ ದೂರ ಇರುವ ಝಾನ್ಸಿ ತಲುಪಿ ತಮ್ಮ ಮೂರನೇ ದಿನದ ಪಯಣವನ್ನು ಸುಖಕರವಾಗಿ ಮುಗಿಸಿದರು.

ನಾಲ್ಕನೇ ದಿನದ ಶುರುವಿನಲ್ಲಿ ೨೦೦೦ ಕಿಮೀ ಪೂರ್ಣಗೊಳಿಸಿ ತಮ್ಮ ಮುಂದಿನ ಗುರಿಯಾದ ಹರಿದ್ವಾರದ ಕಡೆಗೆ ಪಯಣ ಬೆಳೆಸಿದ್ದ ಇವರಿಗೆ ಪ್ರತಿದಿನ ಸಾಮಾಜಿಕ ತಾಣಗಳ ಮೂಲಕ, ಮೊಬೈಲ್ ಮೂಲಕ ಅದೆಷ್ಟು ಮಂದಿ ಶುಭ ಕೋರುತ್ತಿದ್ದವರು, ಅವರ ಪಯಣ ಕ್ಷೇಮವಾಗಿರಲೆಂದು ಹಾರೈಸುತ್ತಿದ್ದವರ ಅಭಿಮಾನ ಕಂಡು ಈರ್ವರಿಗೂ ಹೃದಯ ತುಂಬಿ ಬಂದ ಸಂದರ್ಭಗಳು ಅದೆಷ್ಟೋ. ಹಾಗೆಯೇ ಹೋದ ಕಡೆಯೆಲ್ಲೆಲ್ಲವೋ ಇವರ ಸಾಧನೆಯ ವಿಧಾನ ಕಂಡು ಅಚ್ಚರಿ ಪಟ್ಟವರೆಷ್ಟೋ. ಹನ್ನೆರೆಡು ಗಂಟೆಗಳ ಪಯಣದ ಬಳಿಕ ಹರಿದ್ವಾರದ ಫಲಿಮಾರು ಮಠ, ಬಡೇ ಹನುಮಾನ್ ಮಂದಿರಕ್ಕೆ ತಲುಪಿದರು.



ಸತತವಾಗಿ ನಾಲ್ಕು ದಿನ ಗಾಡಿ ಓಡಿಸಿದ್ದರಿಂದ ಆಗಿದ್ದ ದಣಿವು ಮತ್ತು ಹರಿದ್ವಾರದಿಂದ ಬದರಿನಾಥ್ ವರೆಗಿನ ಹಾದಿ ಬಹಳ ದುರ್ಗಮವಾದದ್ದು ಮತ್ತು ಕಡಿದಾದದ್ದರಿಂದ ಒಂದು ದಿನ ಪೂರ್ತಿ ವಿಶ್ರಾಂತಿ ಮಾಡಿ ಮರುದಿನ ಬದರಿನಾಥ್ ಗೆ ಹೋಗಲು ನಿರ್ಧರಿಸಿ ಒಂದು ದಿನ ಪೂರ್ತಿ ಹರಿದ್ವಾರದಲ್ಲೇ ಕಾಲ ಕಳೆಯಲು ನಿರ್ಧರಿಸಿದರು. ಮಠದಲ್ಲಿ ಸ್ನಾನ ಆಹ್ನಿಕ ಎಲ್ಲ ಮುಗಿಸಿ ಸ್ವಲ್ಪ ಕಾಲ ವಿಶ್ರಾಂತಿ ಮಾಡಿ ನಂತರ ಎರಡು ಸಾವಿರ ಕಿಮೀ ನಿರಂತರವಾಗಿ ಓಡಿದ್ದ ಬುಲೆಟ್ ಅನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಅದರ ಆರೋಗ್ಯ ಪರಿಶೀಲಿಸಿ ಏನೂ ತೊಂದರೆ ಇಲ್ಲವೆಂದು ಖಚಿತಪಡಿಸಿಕೊಂಡು ಬಂದು ಮರುದಿನದ ಪಯಣದ ಬಗ್ಗೆ ಚಿಂತಿಸುತ್ತ ನಿದ್ರೆಗೆ ಜಾರಿದರು.

ಹರಿದ್ವಾರದಿಂದ ಬದರಿನಾಥ್ ಗೆ ಕೇವಲ ೩೦೦ ಕಿಮೀ ಗಳು ಆದರೂ ಆ ಹಾದಿ ಬಹಳ ದುರ್ಗಮವಾದದ್ದು. ಏರಿಳಿತಗಳು,ಕಿರುದಾದ ರಸ್ತೆಗಳು ಮತ್ತು ಯಾವ ಸಂದರ್ಭದಲ್ಲಾದರೂ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆಗಳು. ಒಮ್ಮೊಮ್ಮೆ ದಿನಗಟ್ಟಲೆ ಆದರೂ ರಸ್ತೆ ಮಧ್ಯದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ. ಇಂಥಹ ಹಾದಿಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವುದು ಸವಾಲಿನ ಸಂಗತಿಯೇ ಸರಿ. ಬೆಂಗಳೂರಿನಿಂದ ಹರಿದ್ವಾರದವರೆಗೂ ಹೋಗುವುದು ಒಂದು ಘಟ್ಟವಾದರೆ, ಅಲ್ಲಿಂದ ಬದರಿನಾಥ್ ಗೆ ಹೋಗುವುದು ಇನ್ನೊಂದು ಘಟ್ಟ.

ಶ್ರೀ ಹರಿವಾಯುಗಳ ಕೃಪೆ, ಗುರುಗಳಾದ ಶ್ರೀ ಶ್ರೀ ವಿಜ್ಞಾನನಿಧಿ ತೀರ್ಥರ ಆಶೀರ್ವಾದ, ಶ್ರೀ ಶ್ರೀ ಕೇಶವನಿಧಿ ತೀರ್ಥರ ಅನುಗ್ರಹ ಹಾಗೂ ಸಹಸ್ರ ಸಂಖ್ಯೆಯಲ್ಲಿ ಹಿತೈಷಿಗಳ ಹಾರೈಕೆಯಿಂದ ಯಶಸ್ವಿಯಾಗಿ ಬದರಿನಾಥ್ ಗೆ ತಲುಪಿ ಅಲ್ಲಿ ಬದರೀ ವಿಶಾಲನ ದರ್ಶನದ ಬಳಿಕ ಇಬ್ಬರೂ ಸಾಧಕರ ಕಣ್ಣುಗಳು ತೇವಗೊಂಡವು. ದಕ್ಷಿಣದಿಂದ ಉತ್ತರದವರೆಗೆ ಪಯಣ ಮಾಡಬೇಕೆಂದರೆ ಎಷ್ಟೋ ಅಡ್ಡಿ ಆತಂಕಗಳು... ಆದರೆ ಅವೆಲ್ಲವನ್ನೂ ಮೀರಿ ಕೊನೆಗೂ ತಮ್ಮ ಗುರಿ ತಲುಪಿದರು.



ಒಂದು ಕಡೆಯ ಗುರಿ ತಲುಪಿ ಆಯಿತು. ಮತ್ತೆ ವಾಪಸ್ ಮೂರು ಸಾವಿರ ಕಿಮೀ ಪಯಣ ಬಾಕಿ ಇದೆ. ಮತ್ತೆ ಬದರಿಯಿಂದ ಹೊರಟು ಹರಿದ್ವಾರಕ್ಕೆ ಬಂದು ಅಲ್ಲಿನ ಗಂಗಾನದಿಯಲ್ಲಿ ಮಿಂದು ಊಟ ಮುಗಿಸಿ ಕಳೆದ ಒಂದು ವಾರದ ನೆನಪುಗಳನ್ನು ಮೆಲುಕು ಹಾಕುತ್ತಾ ಮತ್ತೆ ಪಯಣ ಮುಂದುವರೆಸಿದ ಜೋಡಿ ದೆಹಲಿಯ ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದು ತಲುಪಿದರು.

ದೆಹಲಿಯ ಘೋರವಾದ ಬಿಸಿಲು ಮತ್ತು ಸೆಖೆಗೆ ಬಳಲಿಹೋದವರಿಗೆ ನೆರವಿಗೆ ಬಂದದ್ದು ನಿಂಬೆಹಣ್ಣಿನ ತಂಪಾದ ಪಾನಕ...

ಅಲ್ಲಿಂದ ಹೊರಟು ಪುಷ್ಕರದಲ್ಲಿನ ಬ್ರಹ್ಮನ ದೇವಸ್ಥಾನಕ್ಕೆ ತಲುಪಿ ಮುಂದಿನ ಪಯಣದ ಬಗ್ಗೆ ಚಿಂತಿಸುತ್ತಾ ಕಾಲ ಕಳೆದರು. ಮರುದಿನ ಬೆಳಿಗ್ಗೆ ಪುಷ್ಕರದಿಂದ ಹೊರಟು ರಾಯಪುರ, ರಾಜಸ್ಥಾನ ಮಾರ್ಗವಾಗಿ ಮಾತೃ ಗಯಾದ ಬಿಂದು ಸರೋವರ ಕ್ಷೇತ್ರಕ್ಕೆ ತಲುಪಿದರು. ಪ್ರತಿಯೊಂದು ಕ್ಷೇತ್ರಕ್ಕೆ ತಲುಪಿದಾಗಲೂ ಅಲ್ಲಿನ ಕ್ಷೇತ್ರ ಮಹಿಮೆಯನ್ನು ವಿವರಿಸಿ ಮುಂದಿನ ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದರು.




ಮಾತೃ ಗಯಾದಿಂದ ಹೊರಟು ಸಪುತರ ಘಾಟ್ ನ ಅದ್ಭುತ ಸೌಂದರ್ಯವನ್ನು ಸವಿಯುತ್ತ ಮಳೆಯಲ್ಲಿ ಸಾಗುತ್ತಾ ಅಂದಿನ ತಮ್ಮ ಪಯಣದ ಗುರಿಯಾದ ಪಂಚವಟಿ ನಾಸಿಕ್ ತಲುಪಿ ಅಲ್ಲಿ ವಿಶ್ರಾಂತಿ ಮಾಡಿ ಮರುದಿನ ಬೆಳಿಗ್ಗೆ ಸ್ನಾನ ಆಹ್ನಿಕ ನಂತರದಲ್ಲಿ ಭೋಜನ ಮುಗಿಸಿಕೊಂಡು ಮತ್ತೆ ತಮ್ಮ ಪಯಣ ಮುಗಿಸಿ ಪುಣೆಯ ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದು ತಲುಪಿದರು. ಇಲ್ಲಿಂದ ಮುಂದೆ ಇನ್ನು ೩೬ ಗಂಟೆಗಳ ನಂತರ ಅಂದರೆ ೧೫/೦೭/೨೦೧೮ಕ್ಕೆ ತಮ್ಮ ಯಶಸ್ವಿ ಪಯಣವನ್ನು ಮುಗಿಸಿ ಬೆಂಗಳೂರಿಗೆ ತಲುಪಲಿರುವ ಶ್ಯಾಮಾಚಾರ್ ಮತ್ತು ರಾಜೇಶ್ ಅವರ ಈ ಸಾಧನೆ ಅಭೂತಪೂರ್ವ ಮತ್ತು ವರ್ಣನಾತೀತ.

ಮನುಷ್ಯನಿಗೆ ಸಾಧಿಸಬೇಕೆಂಬ ಛಲ ನಂಬಿಕೆ ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಸಾಧಕ್ ಸಾಕ್ಷಿ.  ಶ್ರೀ ಹರಿವಾಯು ಗುರುಗಳು ಈ ಸಾಧಕರನ್ನು ಆಶೀರ್ವದಿಸಿ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.