Wednesday, July 23, 2014

ಬರೆದೆ ನೀನು ನಿನ್ನ ಹೆಸರ - ಭಾಗ ೧



ಆಫೀಸಿಗೆ ತಡವಾಗಿದ್ದರಿಂದ ಅರ್ಜೆಂಟಾಗಿ ಹೊರಡುತ್ತಿದ್ದವನನ್ನು ಕೊರಿಯರ್ ಬಾಯ್ ಸರ್....ಕೊರಿಯರ್ ಎಂಬ ಕೂಗು ನಿಲ್ಲುವಂತೆ ಮಾಡಿತು. ಯಾರಿಗಪ್ಪ ಕೊರಿಯರ್ ಎಂದು ಕೇಳಿದ್ದಕ್ಕೆ ಸರ್ ಜಯಂತ್ ಅಂದರೆ ನೀವೇ ತಾನೇ ಎಂದ... ನಾನು ಹೌದೆಂದು ತಲೆ ಆಡಿಸಿ ಅವನ ಕೈಯಲ್ಲಿದ್ದ ಕವರ್ ತೆಗೆದುಕೊಂಡೆ. ಅದು ಯಾವುದೋ ಮ್ಯಾಗಜಿನ್ ಇದ್ದ ಹಾಗಿತ್ತು. ಆಚೆ ಒಂದು  ಬಿಳಿ ಕವರಿಂದ ಅದನ್ನು ಮುಚ್ಚಲಾಗಿದ್ದರಿಂದ ಒಳಗೇನಿತ್ತೆಂದು ಹೇಳಲು ಸಾಧ್ಯವಿರಲಿಲ್ಲ. ಯಾರಿಂದ ಬಂದಿರುವುದೆಂದು ನೋಡಿದರೆ ಯಾರೋ ಪವನ್ ಎಂಬ ಅಪರಿಚಿತನ ಹೆಸರು ಮಾತ್ರ ಇತ್ತು. ಯಾರಪ್ಪಾ ಇದು ಎಂದು ಯೋಚಿಸುವಷ್ಟರಲ್ಲಿ ಆಫೀಸಿಗೆ ಹೊತ್ತಾಗಿದೆ ಎಂದು ನೆನಪಾಗಿ ಕೊರಿಯರ್ ಬಾಯ್ ಕೊಟ್ಟ ಪೇಪರಿನಲ್ಲಿ ಸಹಿ ಹಾಕಿ ಕವರನ್ನು ಮನೆ ಒಳಗೆ ಹಾಕಿ ಆಫೀಸಿನಿಂದ ಬಂದ ಮೇಲೆ ನೋಡಿದರಾಯಿತು ಎಂದು ಆಫೀಸಿಗೆ ಹೊರಟೆ.

ಆಫೀಸಿನಲ್ಲಿ ಯಥಾಪ್ರಕಾರ ತಲೆ ಕೆಡುವಷ್ಟು ಕೆಲಸ ಇದ್ದಿದ್ದರಿಂದ ಕೊರಿಯರ್ ವಿಷಯ ಮರೆತೇ ಹೋಗಿತ್ತು. ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ರಾತ್ರಿ ಗಂಟೆ ಆಗಿತ್ತು, ತುಂಬಾ ಸುಸ್ತಾಗಿದ್ದರಿಂದ ಊಟ ಮಾಡಿ ಮಲಗಿಬಿಟ್ಟೆ. ಮಾರನೆ ದಿವಸ ಶನಿವಾರ ಇದ್ದದ್ದರಿಂದ ನಿಧಾನವಾಗಿ ಎದ್ದು ಮುಖ ತೊಳೆದು ಕಾಫಿ ಕುಡಿದು ಸ್ವಲ್ಪ ಮನೆ ಸ್ವಚ್ಛ ಮಾಡೋಣ ಎಂದು ಒಂದೊಂದೇ ಸರಿಪಡಿಸುತ್ತಿದ್ದಾಗ ಹಿಂದಿನ ಬಂದಿದ್ದ ಕವರ್ ಕಂಡಿತು. ಓಹೋ ಕೆಲಸದ ಒತ್ತಡದಲ್ಲಿ ಈ ಕವರಿನ ಬಗ್ಗೆ ಮರೆತೇ ಹೋಗಿತ್ತು ಎಂದುಕೊಂಡು ಕೈಲಿದ್ದ ಪೊರಕೆಯನ್ನು ಪಕ್ಕಕ್ಕಿಟ್ಟು ಕವರನ್ನು ತೆಗೆದರೆ ನಾನಂದುಕೊಂಡಂತೆ ಅದು ಯಾವುದೋ ಪುಸ್ತಕವಾಗಿರಲಿಲ್ಲ... ಬದಲಿಗೆ ಬಿಡಿ ಬಿಳಿ ಹಾಳೆಗಳನ್ನು ಸೇರಿಸಿ ಅದಕ್ಕೊಂದು ಟ್ಯಾಗ್ ಹಾಕಲಾಗಿತ್ತು. ಏನಪ್ಪಾ ಎಂದು ಮೊದಲಿನ ಪುಟ ತೆರೆದರೆ ಏನೋ ಬರೆದ ಹಾಗಿತ್ತು. ಹಾಗೆ ಪಕ್ಕದಲ್ಲಿದ್ದ ಚೇರನ್ನು ಎಳೆದು ಅದರಲ್ಲಿ ಕುಳಿತು ಓದಲು ಶುರು ಮಾಡಿದೆ.

ಆತ್ಮೀಯರೇ,

ನಮಸ್ಕಾರ, ನನ್ನ ಪರಿಚಯ ನಿಮಗೆ ಇಲ್ಲದಿರಬಹುದು. ಆದರೆ ನಿಮ್ಮ ಪರಿಚಯ ನನಗಿದೆ. ಮುಖತಃ ನಾನು ನಿಮ್ಮನ್ನು ಭೇಟಿ ಆಗಿರದಿದ್ದರೂ, ನಿಮ್ಮ ಕಥೆಗಳನ್ನು ಒಂದೂ ಬಿಡದೆ ಓದುವ ನಿಮ್ಮ ಅಭಿಮಾನಿ. ನೀವು ಇದುವರೆಗೆ ಬರೆದಿರುವ ಎಲ್ಲಾ ಕಥೆಗಳನ್ನೂ ಓದಿದ್ದೇನೆ. ನಿಮ್ಮ ಪ್ರೇಮ ಕಥೆಗಳಲ್ಲಿನ ಭಾವುಕತೆ ನನ್ನನ್ನು ವಿಪರೀತ ಕಾಡುತ್ತದೆ. ಆದರೆ ಇತ್ತೀಚಿಗೆ ಯಾಕೋ ನೀವು ಕಥೆಗಳನ್ನು ಬರೆಯುವುದು ನಿಲ್ಲಿಸಿದ್ದೀರ.

ಅದಕ್ಕೆ ಕಾರಣ ನಿಮ್ಮಲ್ಲಿ ಯಾವುದೇ ಹೊಸ ಕಥಾವಸ್ತು ಇಲ್ಲ ಎಂದು ನೀವು ಎಲ್ಲೋ ಒಮ್ಮೆ ಹೇಳಿದ್ದ ನೆನಪು. ನಿಮಗೆ ಏನೂ ಅಭ್ಯಂತರ ಇಲ್ಲದಿದ್ದರೆ, ನನ್ನ ನಿಜ ಜೀವನವನ್ನು ನೀವು ಕಥೆಯಾಗಿ ಬರೆಯಬಹುದು. ಇವನ್ಯಾರಪ್ಪ ತನ್ನ ಜೀವನವನ್ನು ಕಥೆಯನ್ನಾಗಿ ಬರೆಯಿರಿ ಎನ್ನುತ್ತಿದ್ದಾನೆ ಎಂದುಕೊಂಡರೆ ಏನೂ ಬೇಜಾರಿಲ್ಲ. ಹಾಗೆ ಬಿಟ್ಟು ಬಿಡಿ. ಆದರೆ ಒಮ್ಮೆ ಓದಿ ನೋಡಿ, ಪೂರ್ತಿ ಓದಿಯಾದ ಮೇಲೆ ನಿಮಗೆ ಬರೆಯಬೇಕೆಂದು ಅನಿಸಿದರೆ ಆಗ ಬರೆಯಿರಿ... ಇಲ್ಲವಾದರೆ.....ಅದು ನಿಮ್ಮ  ಬಿಟ್ಟಿದ್ದು.
ನಿಮಗೆ ಸ್ಥೂಲವಾಗಿ ಹೇಳಿಬಿಡುತ್ತೇನೆ, ನಿಮಗೆ ನನ್ನ ಕಥೆ ಆಟೋಗ್ರಾಫ್ ಸಿನಿಮಾ ಕಥೆಯ ಹಾಗೆ ಅನಿಸಬಹುದು. ಆದರೆ ಇದು ಕಥೆಯಲ್ಲ. ನನ್ನ ನಿಜ ಜೀವನದಲ್ಲಿ ನಡೆದಿದ್ದನ್ನೇ ಇಲ್ಲಿ ದಾಖಲಿಸಿದ್ದೇನೆ. ನನಗೂ ಜೀವನದಲ್ಲಿ ಮೂರು ಬಾರಿ ಪ್ರೀತಿ ಆಯಿತು... ಆದರೆ ನನಗೆ ದಕ್ಕಿದ್ದು ಮಾತ್ರ ಒಂದೇ ಪ್ರೀತಿ. ಅದೆಲ್ಲವನ್ನೂ ಇಲ್ಲಿ ವಿವರವಾಗಿ ಬರೆದಿದ್ದೇನೆ. ನನ್ನ ಈ ವಿಷಯವನ್ನು ಇದುವರೆಗೂ ಯಾರಿಗೂ ತಿಳಿಸಿಲ್ಲ. ಆದರೆ ಅದೇನೋ ಗೊತ್ತಿಲ್ಲ ನಿಮ್ಮ ಬಳಿ ಹೇಳಬೇಕು ಎನಿಸಿತು. ಅದಕ್ಕೆ ಕಳುಹಿಸುತ್ತಿದ್ದೇನೆ.

ಸರ್ ಕೊನೆಯದಾಗಿ ಒಂದು ಮಾತು.... ನೀವು ನನ್ನ ಕಥೆಯನ್ನು ಬರೆದರೂ ಸರಿ ಬರೆಯದಿದ್ದರೂ ಸರಿ, ಕಥೆಗಳನ್ನು ಬರೆಯುವುದು ಮಾತ್ರ ನಿಲ್ಲಿಸಬೇಡಿ. ನಿಮ್ಮ ಕಥೆಗಳನ್ನು ಓದುತ್ತಿದ್ದರೆ ಮನಸಿಗೆ ಏನೋ ಒಂದು ರೀತಿ ನೆಮ್ಮದಿ ಸಿಗುತ್ತದೆ. ಒಂದು ವೇಳೆ ನೀವು ನನ್ನ ಕಥೆಯನ್ನು ಬರೆಯಲು ನಿರ್ಧರಿಸಿದರೆ ನನಗೊಂದು ಮಾತು ಹೇಳಬೇಕು ಎನಿಸಿದರೆ ಈ ನಂಬರಿಗೆ ಕರೆ ಮಾಡಿ....

ಇಂತಿ ನಿಮ್ಮ ಅಭಿಮಾನಿ
ಪವನ್.

ಅರೆ ಯಾರಪ್ಪ ಇದು ವಿಚಿತ್ರ ಅಭಿಮಾನಿ.... ತನ್ನ ನಿಜ ಜೀವನವನ್ನು ಕಥೆ ಬರೆಯಿರಿ ಎನ್ನುತ್ತಿದ್ದಾನೆ.... ಏನು ಮಾಡುವುದು....?? ಹೇಗಿದ್ದರೂ ನನ್ನ ಬಳಿಯೂ ಯಾವುದೇ ಹೊಸ ಕಥಾವಸ್ತು ಇಲ್ಲ... ನಾನು ಇದುವರೆಗೂ ಸುಮಾರು ಸತ್ಯ ಘಟನೆಗಳನ್ನು ಕಥೆಯನ್ನಾಗಿ ಬರೆದಿದ್ದೇನೆ. ಆದರೆ ಅವೆಲ್ಲಾ ನಾನು ಪ್ರತ್ಯಕ್ಷವಾಗಿ ಕಂಡದ್ದು. ಆದ್ರೆ ಮೊಟ್ಟ ಮೊದಲ ಬಾರಿಗೆ ಯಾರೋ ಅಪರಿಚಿತ ವ್ಯಕ್ತಿಯ ಸತ್ಯ ಘಟನೆಯನ್ನು ಬರೆಯುವ ಸಂದರ್ಭ....

ಹೇಗಿದ್ದರೂ ಅವನೂ ಏನು ಬಲವಂತ ಮಾಡಿಲ್ಲ... ಒಮ್ಮೆ ಓದಿ ನೋಡುವುದು, ಇಷ್ಟ ಆದರೆ ಆಮೇಲೆ ಕಥೆ ಬರೆಯುವುದು... ಇಲ್ಲವಾದರೆ ಹಾಗೆ ಬಿಟ್ಟು ಬಿಡುವುದು ಎಂದು ನಿರ್ಧರಿಸಿ ಓದೋಣ ಎಂದು ಮೊದಲ ಪುಟ ತಿರುಗಿಸಿದೆ. "ಬರೆದೆ ನೀನು ನಿನ್ನ ಹೆಸರ...." ಎಂಬ ಶೀರ್ಷಿಕೆ ಇತ್ತು. ತಕ್ಷಣ "ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ" ಎಂಬ ಅಣ್ಣಾವ್ರ ಹಾಡು ನೆನಪಿಗೆ ಬಂತು... ಓಹೋ ಆಟೋಗ್ರಾಫ್ ಸಿನಿಮಾದ ಹಾಗೆ ಬಹಳಷ್ಟು ಹುಡುಗಿಯರು ಇವನ ಕಥೆಯಲ್ಲಿ ಬರುವರೆಂದೋ ಏನೋ ಈ ಶೀರ್ಷಿಕೆ ಇಟ್ಟಿದ್ದಾನೆ ಎನಿಸುತ್ತದೆ.... ಪರವಾಗಿಲ್ಲ ಒಳ್ಳೆಯ ಆಯ್ಕೆ ಮಾಡಿದ್ದಾನೆ ಹುಡುಗ.... ಇರಲಿ ಕಥೆ ಓದೋಣ...

IBM ನನ್ನ ಕನಸಿನ ಕಂಪನಿ, ಮೊದಲ ದಿನದ ಕೆಲಸ.... ಮಾನ್ಯತಾ ಟೆಕ್  ನಗರದ ಟ್ರಾಫಿಕ್ ದಾಟಿಕೊಂಡು ಮಾನ್ಯತಾ ಟೆಕ್ ಪಾರ್ಕ್ ಬರುವಷ್ಟರಲ್ಲಿ ಸರಿಯಾಗಿ ೯.೫೦ ಆಗಿತ್ತು. ಬೇಗ ಮನೆ ಬಿಟ್ಟಿದ್ದರಿಂದ ಬಚಾವ್, ಅದೂ ಅಲ್ಲದೆ ಮೊದಲನೇ ದಿನ ಕ್ಯಾಬ್ ಬೇರೆ ಇಲ್ಲ... ಮೊದಲ ದಿನವೇ ಎಲ್ಲಿ ಲೇಟ್ ಆಗುತ್ತದೋ ಎಂದು ಭಯ ಪಟ್ಟಿದ್ದೆ... ಆದರೆ ಹತ್ತು ನಿಮಿಷ ಮುಂಚಿತವಾಗಿಯೇ ತಲುಪಿದ್ದೆ. ಸೀದಾ HR ಬಳಿ ಹೋಗಿ Joining Formality ಎಲ್ಲ ಮುಗಿಸಿ ID ಕಾರ್ಡ್ ಪಡೆದುಕೊಂಡು ನನಗೆ ನಿಗದಿ ಪಡಿಸಿದ ಪ್ರಾಜೆಕ್ಟ್ ಮ್ಯಾನೇಜರ್ ಬಳಿ ನನ್ನ ಪರಿಚಯ ಮಾಡಿಕೊಟ್ಟು ಹೊರಟರು.

ಆಗಷ್ಟೇ ಕಾಲೇಜ್ ಲೈಫ್ ಮುಗಿಸಿ ಬಂದಿದ್ದರಿಂದ ಆ ಹುಡುಗುತನ ಇನ್ನೂ ಹೋಗಿರಲಿಲ್ಲ. ಮ್ಯಾನೇಜರ್ ನ ನೋಡಿದ ಕೂಡಲೇ ವಾವ್ ಸೂಪರ್ ಫಿಗರ್ ಎಂದು ಮನಸಿನಲ್ಲಿ ಅಂದುಕೊಂಡೆ. ಆದರೆ ಏನು ಪ್ರಯೋಜನ ಆಗಲೇ ಮದುವೆ ಆಗಿ ಹೋಗಿತ್ತು.... ಇರಲಿ... ಮ್ಯಾನೇಜರೇ ಇಷ್ಟು ಸುಂದರವಾಗಿದ್ದಾಳೆಂದರೆ ಟೀಮಲ್ಲಿ ಕೂಡ ಸುಂದರವಾದ ಹುಡುಗಿಯರು ಇದ್ದೆ ಇರುತ್ತಾರೆ ಎನ್ನುವ ನನ್ನ ಆಲೋಚನೆಗೆ ಬ್ರೇಕ್ ಹಾಕಿದ ಮ್ಯಾನೇಜರ್ ನನ್ನನ್ನು ಕರೆದುಕೊಂಡು ಹೋಗಿ ಟೀಮಿಗೆ ಪರಿಚಯಿಸಿದರು. ಕುಮಾರ್, ಸುಂದರ್, ರಾಜ್, ದೀಪ, ಗೀತ, ರಾಧಾ, ಮಧು, ವಿಕ್ರಮ್, ರಾಕೇಶ್.... ಅವರು ಹೇಳುತ್ತಲೇ ಇದ್ದರು ನಾನು ಮಾತ್ರ ಗೀತ ಎಂದು ಹೇಳಿದ ಹುಡುಗಿಯನ್ನೇ ನೋಡುತ್ತಾ ನಿಂತು ಬಿಟ್ಟಿದ್ದೆ. ಅಬ್ಬಬ್ಬಾ ಅಂತಿಂಥ ಚೆಲುವೆ ಅಲ್ಲ ಅವಳು, ದಂತದ ಬೊಂಬೆಯoತಿದ್ದಳು. ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನ್ನುವಷ್ಟು ಚೆಲುವು ಅವಳದು. ನೋಡ ನೋಡುತ್ತಿದ್ದಂತೆ ಅವಳೇ ನನ್ನೆದುರು ಬಂದು ತನ್ನ ಕೈ ಮುಂದೆ ಚಾಚಿದಳು... ನಾನು ನನಗರಿವಿಲ್ಲದಂತೆಯೇ ಕೈ ಚಾಚಿದೆ. ಅವಳು ನಾನೇ ನಿಮ್ಮ Team Lead ಎಂದಾಗಲೇ ವಾಸ್ತವಕ್ಕೆ ಬಂದಿದ್ದು.

ಓಹೋ ಸರಿ ಹೋಯ್ತು... ಇವಳೇನಾ Team Lead... ಇನ್ನು ನನ್ನ ಆಸೆಯನ್ನು ಅದುಮಿಕೊಳ್ಳಬೇಕು ಎಂದುಕೊಂಡು ಅವಳಿಗೆ ಕೈ ಕೊಟ್ಟು, ನನ್ನ ಜಾಗದಲ್ಲಿ ಕುಳಿತುಕೊಂಡು ಒಂದಷ್ಟು documents ಕೊಟ್ಟರು ಓದಲೆಂದು. ಮೊದಲ ದಿನವಾದ್ದರಿಂದ ಅಷ್ಟಾಗಿ ಕೆಲಸವಿರದೆ ಸುಮ್ಮನೆ ಅದೂ ಇದೂ ಎಂದುಕೊಂಡು ಬೇಗನೆ ಮನೆಗೆ ಹೊರಟು ಬಂದೆ. ಆದರೆ ಮನಸು ತಲೆ ತುಂಬಾ ಅವಳೇ ತುಂಬಿದ್ದಳು.... ಗೀತಾ...

ಬಹುಷಃ ನಾನು ಇದುವರೆಗೂ ಅಂಥಹ ಚೆಲುವೆಯನ್ನು ನೋಡಿರಲು ಸಾಧ್ಯವಿಲ್ಲ. ಆ ಕಣ್ಣುಗಳು..ಅದು ಕಣ್ಣುಗಳೇ ಅಲ್ಲ, ಹಾಲೋಜಿನ್ ಬಲ್ಬ್ ಇದ್ದ ಹಾಗೆ, ಅವಳ ಕಣ್ಣಲ್ಲಿ ಒಮ್ಮೆ ಕಣ್ಣಿಟ್ಟು ನೋಡಿದರೆ ಎಂಥಹವರಿಗೂ ಫ್ಯೂಸ್ ಆಫ್ ಆಗಿ ಬಿಡುತ್ತದೆ. ಅಂಥಹ ಶಕ್ತಿ ಇದೆ ಆ ಕಣ್ಣುಗಳಲ್ಲಿ. ನಾನು ಅವಳನ್ನು ನೋಡಿದ್ದು ಒಂದೇ ದಿನ ಇರಬಹುದು.... ಆದರೆ ಅವಳೇ ನನ್ನ ಬಾಳ ಸಂಗಾತಿ ಎಂದು ನಿರ್ಧರಿಸಿಕೊಂಡಿದ್ದೆ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕು...

ಆದರೆ ಅವಳು ಅಂಥಹ ಚೆಲುವೆ ಎಂದ ಮೇಲೆ ಖಂಡಿತ ಈಗಾಗಲೇ ಅವಳಿಗೆ ನೂರಾರು ಪ್ರಪೋಸಲ್ ಗಳು ಹತ್ತಾರು ತಿರಸ್ಕಾರಗಳು ಒಂದೆರೆಡು ಪುರಸ್ಕಾರಗಳು ಸಿಕ್ಕಿರಬಹುದು... ಅಂಥದ್ದರಲ್ಲಿ ಅವಳು ನನಗೆ ಒಲಿಯುತ್ತಾಳ? ಹ್ಮ್.... ನಮ್ಮ ಪ್ರಯತ್ನ ನಾವು ಮಾಡುವುದು ಮುಂದಿನದು ನೋಡೋಣ....ಎವರೆಸ್ಟ್ ಹತ್ತಲು ಎಲ್ಲರಿಗೂ ಆಸೆ ಇದ್ದೆ ಇರುತ್ತದೆ, ಆದರೆ ಎಲ್ಲರೊ ತುದಿ ಮುಟ್ಟಲು ಸಾಧ್ಯವಿಲ್ಲವಲ್ಲ.... 

No comments:

Post a Comment