Monday, July 28, 2014

ಬರೆದೆ ನೀನು ನಿನ್ನ ಹೆಸರ - ಭಾಗ ೨



ಎರಡನೇ ದಿನದಿಂದ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಪೂರ್ತಿ ಸ್ಥರದಲ್ಲಿ ಪ್ರಾರಂಭಿಸಿದೆ. ಎರಡೇ ದಿನದಲ್ಲಿ ಗೀತಾ ಹೇಗೆಂದು ಅರ್ಥವಾಗಿ ಹೋಯಿತು. ಕೆಲಸ ಇದ್ದರಷ್ಟೇ ಮಾತ್ರ ಬೇರೆಯವರ ಜೊತೆ ಮಾತು, ಇಲ್ಲವಾದರೆ ಅಪ್ಪಿ ತಪ್ಪಿ ಸಹ ಮತ್ತೊಬ್ಬರ ಬಳಿ ಮಾತಾಡುತ್ತಿರಲಿಲ್ಲ. ಅದರಲ್ಲೂ ಟೀಮ್ ಜೊತೆಯಂತೂ ಅಪ್ಪಿ ತಪ್ಪಿಯೂ ಸಲುಗೆಯಿಂದ ಇರುತ್ತಿರಲಿಲ್ಲ. ಹುಡುಗಿಯರೊಂದಿಗೆ ಮಾತ್ರ ಸ್ವಲ್ಪ ಮಾತಾಡುತ್ತಿದ್ದಳು, ಹುಡುಗರನ್ನು ಕಂಡರೆ ಒಳ್ಳೆ ಹಾವು ತುಳಿದವಳಂತೆ ಆಡುತ್ತಿದ್ದಳು.
ಇದ್ದದ್ದರಲ್ಲಿ ರಾಕೇಶ್ ಸ್ವಲ್ಪ ಬೇಗ ಹತ್ತಿರವಾದ... ಅವನಿಂದ ಬಂದ ಮಾಹಿತಿ ಪ್ರಕಾರ ಆಗಲೇ ಕುಮಾರ್ ಒಮ್ಮೆ ಅವಳಿಗೆ ಪ್ರಪೋಸ್ ಮಾಡಲು ಪ್ರಯತ್ನ ಪಟ್ಟು ನಿರಾಶೆ ಹೊಂದಿದ್ದಾನೆ ಎಂದು ಆದ್ದರಿಂದಲೇ ಕುಮಾರ್ ಗೆ ಏನೇ ಹೇಳಬೇಕಾದರೂ ವಿಕ್ರಮ್ ಕೈಲಿ ಹೇಳಿಸುತ್ತಾಳೆ ಎಂದು ತಿಳಿದು ಬಂತು. ಓಹೋ ಇವಳು ಒಂದು ರೀತಿ ಕೈಗೆಟುಕದ ದ್ರಾಕ್ಷಿ ಎಂದು ತಿಳಿದು ಬಂತು. ಆದರೆ ಪ್ರಯತ್ನ ಪಡದೆಯೇ ದ್ರಾಕ್ಷಿ ಹುಳಿ ಎನ್ನುವ ಜಾಯಮಾನ ನನ್ನದಲ್ಲ.... ಪ್ರಯತ್ನ ಪಟ್ಟು ಸಿಗದಿದ್ದರೆ ಅದೊಂದು ರೀತಿ, ಇದನ್ನು ಬೇರೆಯದೇ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಚಿಂತಿಸಿ ಮೊದಲು ಗೀತಾ ಜೊತೆ ಯಾವ ಹುಡುಗಿ ಕ್ಲೋಸ್ ಇದಾಳೆ ಎಂದು ನೋಡಿದೆ. ಇದ್ದದ್ದರಲ್ಲಿ ರಾಧಾ ಗೀತಾಗೆ ಕ್ಲೋಸ್ ಎಂದು ತಿಳಿದು ಬಂದು ರಾಧಾಳ ಜೊತೆ ಹತ್ತಿರವಾಗುವ ಕೆಲಸ ಶುರು ಮಾಡಿದೆ.

ಏನೇ ಹುಡುಗಾಟ ಇದ್ದರೂ ಕೆಲಸದ ವಿಷಯದಲ್ಲಿ ನಾನು ಉತ್ತಮವಾಗೇ ಇದ್ದೆ. ಅದೊಂದು ಅನುಕೂಲವಾಯಿತು ನನಗೆ ರಾಧಾ ಬಳಿ ಹತ್ತಿರವಾಗಲು. ರಾಧಾ ಕೆಲಸದ ವಿಷಯದಲ್ಲಿ ಸ್ವಲ್ಪ ವೀಕ್ ಇದ್ದದ್ದರಿಂದ ಆಗಾಗಾ ನನ್ನ ಸಹಾಯ ಪಡೆಯುತ್ತಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂದಂತೆ ಆಗಿತ್ತು. ಕೆಲವೇ ದಿನಗಳಲ್ಲಿ ರಾಧ ನಾನು ಸಿಕ್ಕಾಪಟ್ಟೆ ಆಪ್ತರಾಗಿಬಿಟ್ಟೆವು.... ಕಾಲಘಟ್ಟದಲ್ಲಿ ನಾನು ರಾಧಾಳನ್ನು ಮುಂಚಿಗಿಂತ ಹೆಚ್ಚಾಗಿ ಗಮನಿಸಿದ್ದರಿಂದ ನನಗೊಂದು ವಿಷಯ ಅರಿವಾಗಿತ್ತು. ಅದೇನೆಂದರೆ ರಾಧಾ ಕೂಡ ಅಂದಗಾತಿಯೇ ಆಗಿದ್ದಳು. ಗೀತಾ ಅಷ್ಟು ಅಲ್ಲದಿದ್ದರೂ ಲಕ್ಷಣವಾಗಿದ್ದಳು. ಹೇಳಬೇಕೆಂದರೆ ಗೀತಾ ಬಿಟ್ಟರೆ ನಂತರದ ಸ್ಥಾನ ರಾಧಾಗೆ ಕೊಡಬಹುದಿತ್ತು... ಆದರೂ ಗೀತಾ ಗೀತಾನೆ, ರಾಧಾ ರಾಧಾನೇ...

ಒಂದು ದಿನ ಹೀಗೆ ರಾಧಾ ಬಳಿ ಮಾತನಾಡುತ್ತಿದ್ದಾಗ, ಗೀತಾ ವಿಷಯ ಹೇಳೋಣ ಎಂದುಕೊಂಡು.. ರಾಧಾ ನಿನ್ನ ಬಳಿ ಒಂದು ವಿಷಯ ಮಾತಾಡಬೇಕು ಕಣೇ ಎಂದಾಗ ಅವಳೂ ಸಹ ಪವನ್ ನಾನೂ ಸಹ ನಿನ್ನ ಬಳಿ ಒಂದು ವಿಷಯ ಮಾತಾಡಬೇಕು ಕಣೋ ಎಂದಳು... ನಾನು ಇದೇನಪ್ಪ ನಾನು ಗೀತಾಗೆ ಹತ್ತಿರವಾಗಲು ಇವಳ ಸಹಾಯ ತೆಗೆದುಕೊಳ್ಳುವ ಹಾಗೆ ಅವಳೂ ಸಹ ಯಾರನ್ನಾದರೂ ಇಷ್ಟ ಪಟ್ಟು ಅದಕ್ಕೆ ನನ್ನ ಸಹಾಯ ನಿರೀಕ್ಷಿಸುತ್ತಿದ್ದಾಳ? ಇರಲಿ ನನ್ನ ಪ್ರೇಮ ಗೆಲ್ಲಬೇಕಾದರೆ, ಅವಳ ಪ್ರೇಮವೂ ಗೆಲ್ಲಲಿ ಎಂದುಕೊಂಡು ಹೇಳು ರಾಧಾ ಏನೆಂದು? ನಿನಗಾಗಿ ಏನು ಬೇಕಾದರೂ ಮಾಡುತ್ತೀನಿ...

ಪವನ್ ಮೊದಲು ನೀನು ಹೇಳು... ಆಮೇಲೆ ನಾನು ಹೇಳುತ್ತೇನೆ..

ಇಲ್ಲ ರಾಧಾ ಮೊದಲು ನೀನು ಹೇಳು, ಆಮೇಲೆ ನಾನು ಹೇಳುತ್ತೇನೆ...

ಪವನ್ ಮೊದಲು ನೀನು ಶುರು ಮಾಡಿದ್ದು... ನೀನೆ ಹೇಳು

ಇಲ್ಲ ರಾಧಾ ಲೇಡೀಸ್ ಫಸ್ಟ್... ಮೊದಲು ನೀನೆ ಹೇಳು...

ಪವನ್... ನಿನ್ನ ಬಳಿ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ ಕಣೋ... ನೀನು ಮೊದಲ ದಿನ ಟೀಂಗೆ ಬಂದಾಗಲೇ ನಾನು ನಿನಗೆ ಸೋತುಬಿಟ್ಟೆ ಕಣೋ... ಲವ್ ಅಟ್ ಫಸ್ಟ್ ಸೈಟ್ ಎನ್ನುತಾರಲ್ಲ.... ನನಗೆ ನಿನ್ನ ಮೇಲೆ ಲವ್ ಆಯಿತು ಕಣೋ... ಆದರೆ ನಿನಗೆ ಹೇಗೆ ಹೇಳಬೇಕೆಂದು ಗೊತ್ತಾಗದೆ ಒದ್ದಾಡುತ್ತಿದ್ದೆ... ಅದಕ್ಕೆ ನಿನಗೆ ಹತ್ತಿರವಾಗಲು ಪ್ರಯತ್ನಿಸಿದೆ... ನನ್ನ ಅದೃಷ್ಟ ನೀನೆ ನನಗೆ ಹತ್ತಿರವಾದೆ... ಆಗ ನನಗೆ ಗೊತ್ತಾಯಿತು ಕಣೋ ನೀನೂ ಸಹ ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂದು... ಲವ್ ಯೂ  

ಪವನ್... ನೀನು ಈಗ ನನ್ನ ಬಳಿ ಹೇಳಬೇಕೆಂದಿರುವ ವಿಷಯ ಕೂಡ ಇದೆ ತಾನೇ.... ಬೇಗ ಹೇಳು ಪವನ್... ನಿನ್ನ ಬಾಯಲ್ಲಿ ಮಾತು ಕೇಳಲು ನಾನು ಬಹಳ ಕಾತುರಳಾಗಿದ್ದೇನೆ...

ರಾಧಾ... ಏನು ನೀನು ಹೇಳುತ್ತಿರುವುದು... ನನಗೆ ಅರ್ಥ ಆಗುತ್ತಿಲ್ಲ...

ರಾಧಾ... ನಿನಗೆ ಹೇಗೆ ಹೇಳಲಿ...

ರಾಧಾ... ರಾಧಾ... ಹ್ಮ್ ... ಹ್ಮ್.. ಲವ್ ಯೂ ರಾಧಾ....

ನಂಗೊತ್ತಿತ್ತು ಪವನ್... ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂದು.....

ರಾಧಾ... ನಿನಗೊಂದು ವಿಷಯ ಹೇಳಲಾ..... ನಾನು ನಿನಗೆ ಹತ್ತಿರವಾಗಲು ಕಾರಣ ಗೀತಾ...

ಏನು ಗೀತಾನ? ಯಾಕೆ? ಹೇಗೆ?

ರಾಧಾ... ಹೌದು, ನಾನು ನಿನಗೆ ಹತ್ತಿರವಾಗಲು ಕಾರಣ ಗೀತಾ, ಏಕೆಂದರೆ ನಾನು ಇಲ್ಲಿಗೆ ಬಂದ ದಿನವೇ ಗೀತಾಗೆ ಮನಸೋತು ಬಿಟ್ಟೆ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕೆಂದು ಬಹಳ ಕಷ್ಟಪಟ್ಟೆ. ಆದರೆ ಅದು ಬಹಳ ಕಷ್ಟ ಎಂದು ಗೊತ್ತಾಯಿತು. ಆಗಲೇ ಗೀತಾಗೆ ನೀನು ಕ್ಲೋಸ್ ಎಂದು ಗೊತ್ತಾಗಿ ಮೊದಲು ನಿನಗೆ ಹತ್ತಿರವಾದರೆ ಆಮೇಲೆ ಗೀತಾಗೆ ಹತ್ತಿರವಾಗಬಹುದೆಂದು ನಿನಗೆ ಹತ್ತಿರವಾದೆ. ನಿನಗೆ ಹತ್ತಿರವಾದ ಮೇಲೆ ಅದೇನೋ ಗೊತ್ತಿಲ್ಲ....ದಿನೇ ದಿನೇ ನನಗೆ ಗೊತ್ತಿಲ್ಲದೇ ನಿನ್ನನ್ನು ಪ್ರೀತಿಸಲು ಶುರು ಮಾಡಿಬಿಟ್ಟೆ. ಆದರೂ ಸಂಪೂರ್ಣವಾಗಿ ಗೀತಾಳನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ ಒಮ್ಮೆ ಗೀತಾ ಬಗ್ಗೆ ಒಂದೆರೆಡು ವಿಷಯಗಳು ಕೇಳ್ಪಟ್ಟೆ ಮತ್ತೆ ನಾನೇ ಕಣ್ಣಾರೆ ನೋಡಿದೆ... ಆಗ ಅವಳ ನಿಜವಾದ ಬಣ್ಣ ನನಗೆ ತಿಳಿಯಿತು... ಮತ್ತು ಅದೇ ನನ್ನನ್ನು ಸಂಪೂರ್ಣವಾಗಿ ಅವಳನ್ನು ಮರೆತು ನಿನ್ನನ್ನು ಪ್ರೀತಿಸುವಂತೆ ಮಾಡಿದ್ದು. ಈಗ ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ ರಾಧಾ... ನೀನಿಲ್ಲದೆ ನನ್ನ ಕೈಲಿ ಇರಲು ಆಗದಷ್ಟು ಪ್ರೀತಿಸುತ್ತಿದ್ದೇನೆ.. ಲವ್ ಯೂ ರಾಧಾ... ಲವ್ ಯೂ...

ಅರೆರೇ.... ಇದೇನಪ್ಪ ಇವನು... ರೀತಿ ಟ್ವಿಸ್ಟ್ ಕೊಟ್ಟುಬಿಟ್ಟ.... ಮೊದಲನೇ ಲವ್ವಲ್ಲೇ ಇಷ್ಟೊಂದು ಟ್ವಿಸ್ಟ್ ಇದೆ ಎಂದರೆ ಮುಂದೆ ಇನ್ನೂ ಏನೇನು ಕಾದಿದೆಯೋ... ಮೊಟ್ಟ ಮೊದಲ ಬಾರಿಗೆ ಬೇರೆಯವರ ಕಥೆ ನನ್ನನ್ನು ಇಷ್ಟು ಕುತೂಹಲವಾಗುವಂತೆ ಮಾಡಿದೆ.... ನೋಡೋಣ ಪೂರ್ತಿ ಓದಿದ ಮೇಲೆ ನಿರ್ಧರಿಸೋಣ ಎಂದುಕೊಂಡು, ಮನೆ ಕ್ಲೀನ್ ಮಾಡೋಣ ಎಂದುಕೊಂಡು ಮತ್ತೆ ಪೊರಕೆ ಕೈಗೆ ತೆಗೆದುಕೊಂಡೆ.

No comments:

Post a Comment