Wednesday, August 6, 2014

ಬರೆದೆ ನೀನು ನಿನ್ನ ಹೆಸರ - ಭಾಗ ೩



ಮನೆ ಪೂರ್ತಿ ಕ್ಲೀನ್ ಮಾಡಿ ಆಚೆ ಹೋಗಿ ಊಟ ಮಾಡಿ ಮತ್ತೆ ಮನೆಗೆ ಬಂದು ಸ್ವಲ್ಪ ಹೊತ್ತು ಮಲಗೋಣ ಎಂದರೆ ಹತ್ತಲಿಲ್ಲ, ಸರಿ ಮತ್ತೆ ಪವನ್ ಪುಸ್ತಕವನ್ನು ಕೈಗೆತ್ತುಕೊಂಡು ಪುಟಗಳನ್ನು ತಿರುಗಿಸಿದೆ.

ಮೊದಲೇ ಇಬ್ಬರೂ ಹತ್ತಿರವಾಗಿದ್ದರಿಂದ ನಮ್ಮ ಪ್ರೀತಿ ಯಾವುದೇ ಅಡ್ಡಿ ಆತಂಕ ಇಲ್ಲದೆ ಸಾಗುತ್ತಿತ್ತು. ಟೀಮಿನಲ್ಲಿ ಎಲ್ಲರಿಗೂ ನಮ್ಮ ವಿಷಯ ತಿಳಿದಿತ್ತು... ಆದರೂ ಯಾರೂ ನೇರವಾಗಿ ನಮ್ಮ ಮುಂದೆ ಏನೂ ಮಾತಾಡುತ್ತಿರಲಿಲ್ಲ. ನೋಡ್ತಾ ನೋಡ್ತಾ ಒಂದು ವರ್ಷ ಸಾಗಿ ಹೋಯಿತು... ಅಂದು ರಾಧಾ ಹುಟ್ಟಿದ ಹಬ್ಬ, ನಾನು ಹಿಂದಿನ ದಿನವೇ ಅವಳಿಗಾಗಿ ಒಂದು ಸರ್ಪ್ರೈಸ್ ಕೊಡೋಣ ಎಂದು ಒಂದು ಬಂಗಾರದ ಉಂಗುರ ತೆಗೆದುಕೊಂಡು, ಬೆಳಿಗ್ಗೆ ನೀಟಾಗಿ ಶೇವ್ ಮಾಡಿ ಹೊಸ ಬಟ್ಟೆ ಧರಿಸಿಕೊಂಡು ಕ್ಯಾಬಿನಲ್ಲಿ ಹೋದರೆ ಅವಳನ್ನು ಆಚೆ ಕರೆದೊಯ್ಯಲು ಆಗುವುದಿಲ್ಲ ಎಂದುಕೊಂಡು ಬೈಕ್ ತೆಗೆದುಕೊಂಡು ಆಫೀಸಿಗೆ ಅರ್ಧ ಗಂಟೆ ಮುಂಚೆಯೇ ಹೋಗಿ ಸೀಟಿನಲ್ಲಿ ಕುಳಿತಿದ್ದೆ. ಎಲ್ಲರೂ ನನ್ನನ್ನೇ ವಿಚಿತ್ರವಾಗಿ ನೋಡುತ್ತಿದ್ದರು. ರಾಕೇಶ್ ಹತ್ತಿರ ಬಂದು ಏನಮ್ಮ ಮರಿ, ಬರ್ತ್ ಡೇ ನಿನ್ನ ಹುಡುಗಿಯದೋ.... ನಿಂದೋ? ನೀನೆ ಇಷ್ಟೊಂದು ಸ್ಮಾರ್ಟ್ ಆಗಿ ಬಂದಿದೀಯ...ಎಂದು ಚುಡಾಯಿಸಿದ. ನಾನು ಹೇ ಸುಮ್ಮನಿರಪ್ಪ ಹಾಗೆಲ್ಲ ಏನಿಲ್ಲ ಎಂದು ಸುಮ್ಮನಾದೆ.

ಸಮಯ ಹನ್ನೊಂದಾದರೂ ರಾಧಾ ಸುಳಿವಿರಲಿಲ್ಲ... ಬಹುಶಃ ದೇವಸ್ಥಾನಕ್ಕೆ ಹೋಗಿ ಬರಬಹುದೇನೋ ಎಂದುಕೊಂಡು ಅವಳ ದಾರಿಯನ್ನೇ ಕಾಯುತ್ತಿದ್ದೆ. ಹನ್ನೆರೆಡು ಗಂಟೆ ಆದರೂ ರಾಧಾ ಪತ್ತೆ ಇಲ್ಲ... ಕರೆ ಮಾಡೋಣ ಎಂದುಕೊಂಡರೆ ಫೋನ್ ರಿಂಗಾಗುತ್ತಿತ್ತು ಆದರೆ ತೆಗೆಯಲಿಲ್ಲ.... ಮಧ್ಯಾಹ್ನ ಮೂರಾಯಿತು.... ಊಹುಂ... ಫೋನ್ ರಿಸೀವ್ ಮಾಡುತ್ತಿಲ್ಲ... ರಾಕೇಶ್ ಬೇರೆ ಒಂದೆರೆಡು ಬಾರಿ ಬಂದು ಏನಮ್ಮಾ ಎಲ್ಲಿ ನಿನ್ನ ಡವ್ ಎಂದು ರೇಗಿಸಿ ಹೋದ... ನಾನು ವಿಶೇಷವಾಗಿ ತಯಾರಾಗಿ ಬಂದಿದ್ದನ್ನು ನೋಡಿಕೊಂಡು ಎಲ್ಲರೂ ಗುಸುಗುಸು ಎಂದು ಮಾತಾಡಿಕೊಳ್ಳುತ್ತಿದ್ದರು.... ನನಗೋ ಇಲ್ಲಿ ಬಾಲ ಸುಟ್ಟ ಬೆಕ್ಕಿನಂತಾಗಿತ್ತು ಪರಿಸ್ಥಿತಿ.... ಅವಳೇನಾದರೂ ಸಿಕ್ಕರೆ ಖಂಡಿತ ನನ್ನ ಕೈಲಿ ಅವಳಿಗೆ ಮಾರಿಹಬ್ಬ ಎಂದುಕೊಳ್ಳುತ್ತಿದ್ದೆ... ಮನೆಗೆ ಹೊರಡುವ ಸಮಯವಾಯಿತು... ಇನ್ನೂ ಫೋನ್ ಎತ್ತಲಿಲ್ಲ.... ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಮನಸಿಗೆ ಬಹಳ ವೇದನೆ ಉಂಟಾಗಿತ್ತು.... ಎಂದೂ ರೀತಿಯ ದುಃಖ ಆಗಿರಲಿಲ್ಲ... ಯಾಕೋ ಮನಸೆಲ್ಲ ತುಂಬಾ ಭಾರ ಎನಿಸುತ್ತಿತ್ತು...

ಸರಿ ಇನ್ನೇನು ಮನೆಗೆ ಹೊರಡೋಣ ಎನ್ನುವಷ್ಟರಲ್ಲಿ ಗೀತಾ ಕರೆಯುತ್ತಿದ್ದಾಳೆ ಎಂದು ರಾಕೇಶ್ ಹೇಳಿದ. ಸರಿ ಹೊರಡೋ ಟೈಮ್ನಲ್ಲಿ ಇವಳದೇನಪ್ಪ ತಲೆನೋವು ಎಂದುಕೊಂಡು ಗೀತಾ ಬಳಿ ಬಂದೆ. ನಾನು ಮೊದಲ ದಿನ ನೋಡಿದಾಗ ಹೇಗಿದ್ದಳೋ ಅದೇ ಚೆಲುವು ಅವಳದ್ದು... ಆದರೆ ಅವಳ ವರ್ತನೆ ಅವಳ ಅಂದವನ್ನು ಕೆಡಿಸಿತ್ತು.... ಹ್ಮ್ ... ಹೇಳಿ ಗೀತಾ ಬರಕ್ಕೆ ಹೇಳಿದರಂತೆ..

ಹಾ ಪವನ್.... ಒಂದು ಇಂಪಾರ್ಟೆಂಟ್ ವಿಷಯ.... ನಿಮಗೆ ಸ್ವಲ್ಪ ಹೆಚ್ಚಿನ ಜವಾಬ್ದಾರಿ ಕೊಡೋಣ ಎಂದು ನಿರ್ಧಾರ ಮಾಡಿದ್ದೇವೆ. ನಾನು ಇನ್ನು ಮುಂದೆ ಪ್ರಾಜೆಕ್ಟ್ ಲೀಡ್ ಆಗುತ್ತಿರುವುದರಿಂದ ನಿಮ್ಮನ್ನು ಟೀಮ್ ಲೀಡ್ ಮಾಡಬೇಕೆಂದು ಮ್ಯಾನೇಜರ್ ಹೇಳಿದ್ದಾರೆ. ನೋಡಿ ಟೀಮಲ್ಲಿ ನಿಮಗಿಂತ ಸೀನಿಯರ್ ಇದ್ದರೂ ನಿಮಗೆ ಅವಕಾಶ ಕೊಡುತ್ತಿರುವುದು ನಿಮ್ಮ ಕೆಲಸವನ್ನು ನೋಡಿ. congratulations ಪವನ್... ಇನ್ನು ಮುಂದೆ ಟೀಂ  ನಡೆಸುವ ಜವಾಬ್ದಾರಿ ನಿಮ್ಮದು. ಹಾ ಇನ್ನೊಂದು ಮುಖ್ಯವಾದ ವಿಷಯ ನಮ್ಮ ಟೀಮಲ್ಲಿದ್ದ ರಾಧಾ ಮತ್ತು ಕುಮಾರ್ ಮದುವೆ ಆಗುತ್ತಿದ್ದಾರೆ. ಇಂದು ಅವರಿಬ್ಬರಿಗೆ ಎಂಗೇಜ್ಮೆಂಟ್.... ಮತ್ತು ರಾಧಾ ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ. ಅವರು ಎರಡು ತಿಂಗಳ ಹಿಂದೆಯೇ ಪೇಪರ್ ಹಾಕಿದ್ದರು... ಮತ್ತು ತಮ್ಮ personnel ಕಾರಣಗಳಿಗೆ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಕೋರಿದ್ದರು. ಹಾಗಾಗಿ ನಾಳೆಯಿಂದ ಹೊಸ ಟೀಂ ಮೆಂಬರ್ ಸೇರುತ್ತಿದ್ದಾರೆ, ಅವರ ಟ್ರೈನಿಂಗ್ ಪ್ಲಾನನ್ನು ನೀವೇ ನೋಡಿಕೊಳ್ಳಬೇಕು ಪವನ್... I hope ನೀವು ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೀರ ಎಂದು ಭಾವಿಸುತ್ತೇನೆ. ಮತ್ತೆ ಪಾರ್ಟಿ ಯಾವಾಗ ಪವನ್?

ಪವನ್... ಪವನ್... ಯಾಕೆ ಏನಾಯ್ತು?

ಹಾ... ಏನಿಲ್ಲ ಗೀತಾ... ಥ್ಯಾಂಕ್ ಯೂ ವೆರಿ ಮಚ್.... ನಾ.... ನಾನು.... ಆಮೇಲೆ ಮಾತಾಡುತ್ತೇನೆ ಎಂದು ಅಲ್ಲಿಂದ ಸೀದಾ ರೆಸ್ಟ್ ರೂಮಿಗೆ ಹೋದೆ. ಗೀತಾ ಹೇಳಿದ್ದೇನು ಎಂದು ಜೀರ್ಣಿಸಿಕೊಳ್ಳಲು ನನಗೆ ಆಗಲಿಲ್ಲ. ನಲ್ಲಿ ತಿರುಗಿಸಿ ಮುಖ ತೊಳೆದುಕೊಂಡೆ.... ಇಲ್ಲ... ಇಲ್ಲ... ಎಷ್ಟು ನೀರು ಹಾಕಿಕೊಂಡರೂ ಇನ್ನೂ ಹಾಕಿಕೊಳ್ಳಬೇಕು ಎನಿಸುತ್ತಿದೆ. ಕೈಕಾಲುಗಳು ನಡುಗುತ್ತಿವೆ.... ನನಗೆ ಏನಾಗುತ್ತಿದೆ ಎಂದು ನನಗೇ ಗೊತ್ತಾಗುತ್ತಿಲ್ಲ... ಅಲ್ಲಿಂದ ಸೀದಾ ಆಚೆ ಬಂದು ಕುಮಾರ್ ಡೆಸ್ಕ್ ಬಳಿ ಹೋದೆ... ಇಲ್ಲ... ಹೌದು ಅವನು ಇವತ್ತು ಬಂದೇ  ಇಲ್ಲ.... ನಾನು ಬೆಳಿಗ್ಗಿಂದ ರಾಧಾ ಬಂದಿಲ್ಲ ಎನ್ನುವ ಚಿಂತೆಯಲ್ಲೇ ಇದ್ದೆ... ಆದರೆ ಕುಮಾರ್ ಬಂದಿಲ್ಲ ಎಂದು ಗಮನಿಸಿಯೇ ಇಲ್ಲ... ಹಿಂದಿನಿಂದ ಯಾರೋ ಬೆನ್ನ ಮೇಲೆ ಕೈ ಇಟ್ಟಂತಾಯಿತು... ನೋಡಿದರೆ ರಾಕೇಶ್ ನಿಂತಿದ್ದ... ಯಾಕೋ ಪವನ್ ಇನ್ನೂ ಮನೆಗೆ ಹೋಗಿಲ್ವಾ? ಬಿಡೋ ರಾಧಾ ನಾಳೆ ಬರ್ತಾಳೆ... ನಾಳೆ ವಿಶ್ ಮಾಡು. ಏನೋ ಮುಖ್ಯವಾದ ವಿಷಯ ಇರಬಹುದು ಅದಕ್ಕೆ ಬಂದಿಲ್ಲ ಅನಿಸುತ್ತೆ.... ಅದು ಸರಿ ಏನು ಗೀತಾ ಕರೆದಿದ್ದು?
ತಕ್ಷಣ ರಾಕೇಶ್ ಕೈ ಹಿಡಿದುಕೊಂಡು ಅಲ್ಲೇ ಕುಸಿದು ಕೂತೆ. ಕೂಡಲೇ ರಾಕೇಶ್ ನನ್ನ ಕೈ ಹಿಡಿದು ಮೇಲಕ್ಕೆ ನಿಲ್ಲಿಸಿ ಹೇ ಪವನ್... ಯಾಕೋ ಏನಾಯ್ತೋ?

ನನಗೆ ಏನು ಮಾತಾಡಬೇಕೋ ತಿಳಿಯದೆ ದುಃಖ ತಾಳಲಾಗದೆ ಕಣ್ಣಲ್ಲಿ ನೀರು ಜಿನುಗಲು ಶುರುವಾಯಿತು. ರಾಕೇಶ್ ನನ್ನನ್ನು ಯಾರೂ ಇರದ ಒಂದು ರೂಮಿಗೆ ಕರೆದುಕೊಂಡು ಹೋಗಿ... ಹೇ ಪವನ್... ಯಾಕೋ ಏನಾಯ್ತೋ... ಎಂದೂ ಇಲ್ಲದ್ದು ನಿನ್ನ ಕಣ್ಣಲ್ಲಿ ನೀರು... ಹೇಳೋ ಏನಾಯ್ತು ಎಂದು ಕುಡಿಯಲು ನೀರು ಕೊಟ್ಟ. ನನಗೂ   ಸಮಯದಲ್ಲಿ ನೀರು ಬೇಕಿತ್ತು... ಒಂದು ತೊಟ್ಟು ನೀರು ಕುಡಿದು ಕಣ್ಣನ್ನು ಒರೆಸಿಕೊಂಡು ರಾಕೇಶನ ಕಡೆ ನೋಡಿದೆ... ಅವನು ಹೆಗಲ ಮೇಲೆ ಕೈ ಇಟ್ಟು ಹೇಳೋ ಏನಾಯ್ತು ಎಂದು...

ರಾಕೇಶ್.... ಇವತ್ತು ರಾಧಾ ಮತ್ತು ಕುಮಾರು ಎಂಗೇಜ್ಮೆಂಟ್ ಅಂತೆ ಕಣೋ...

ಯಾವ ರಾಧಾ ಯಾವ ಕುಮಾರ್?

ರಾಕೇಶ್...ನಮ್ಮ ಟೀಂ ರಾಧಾ ಮತ್ತು ಕುಮಾರ್ ಕಣೋ...

ಲೇ ಏನೋ ನೀನು ಹೇಳ್ತಿರೋದು? ವಿಚಿತ್ರವಾಗಿ ಆಡಬೇಡ... ಯಾರೋ ಹೇಳಿದ್ದು ನಿಂಗೆ ?

ಗೀತಾ ಹೇಳಿದ್ದು ಕಣೋ... ಅವರಿಬ್ಬರಿಗೆ ಇಂದು ಎಂಗೇಜ್ಮೆಂಟ್ ಎಂದು ನಾಳೆಯಿಂದ ರಾಧಾ ಬರುವುದಿಲ್ಲವಂತೆ... ಎರಡು ತಿಂಗಳ ಮುಂಚೆಯೇ ಅವಳು ಪೇಪರ್ ಹಾಕಿದ್ದಳಂತೆ ಕಣೋ... ಲೋ ರಾಕೇಶ... ಏನೋ ನಡೀತಿದೆ... ನನಗೊಂದೂ ಅರ್ಥ ಆಗುತ್ತಿಲ್ಲ ಕಣೋ... ಅದು ಹೇಗೋ ಅವರಿಬ್ಬರೂ... ಛೇ  ಛೇ... ಎಲ್ಲೋ ಏನೋ ಯಡವಟ್ಟು ಆಗಿದೆ ಕಣೋ... ಇದರಲ್ಲಿ ಏನೋ ನಡೆದಿದೆ...

ಪವನ್.... ಏನೂ ಯಡವಟ್ಟು ಆಗಿಲ್ಲ ಕಣೋ... ಅವರಿಬ್ಬರೂ ಸಂಬಂಧಿಗಳು ಕಣೋ....

ಲೋ... ಏನೋ ನೀನು ಹೇಳ್ತಿರೋದು.... ಅವಳು ನೋಡಿದರೆ ಒಂದು ವಿಷಯವೂ ನನ್ನ ಬಳಿ ಹೇಳಿಲ್ಲ... ನೀನು ನೋಡಿದರೆ  
ಹೀಗೆ ಹೇಳ್ತಿದೀಯ... ಏನ್ರೋ ನಡೀತಿದೆ... ಬಕ್ರ ಆಗಿದ್ದು ನಾನೇನ...
 
ಅಯ್ಯಯ್ಯಪ್ಪಾ.... ಏನ್ರೀ ಇದು... ಪವನ್ ಕಥೆ ಹೀಗಿದೆ... ಮೊಟ್ಟ ಮೊದಲ ಬಾರಿಗೆ ರೀತಿಯ ವಿಚಿತ್ರ ಕಥೆ ನೋಡ್ತಿದೀನಿ... ರೀತಿನೂ ಮೋಸ ಮಾಡ್ತಾರ? ಉಫ್... ಇನ್ನೂ ಮುಂದೆ ಏನೇನು ಕಾದಿದೆಯೋ? ಘಟನೆ ಓದಿ ತಲೆ ಕೆಟ್ಟು ಹೋಗಿದೆ... ಇನ್ನೂ ಓದುತ್ತಿದ್ದರೆ ಬಹುಶಃ ಪವನ ಪರಿಸ್ಥಿತಿಯೇ ನನಗೆ ಆಗುತ್ತದೆ.... ಬೇಡಪ್ಪಾ ಸ್ವಲ್ಪ ಬಿಡುವು ತೆಗೆದುಕೊಂಡು ಓದೋಣ ಎಂದು ಪುಸ್ತಕ ಮುಚ್ಚಿಟ್ಟು  ಮಲಗಿದೆ

No comments:

Post a Comment