Thursday, August 14, 2014

ಬರೆದೆ ನೀನು ನಿನ್ನ ಹೆಸರ - ಕೊನೆಯ ಭಾಗ



ಪವನ್ ಗೀತಾಳನ್ನು ನೋಡಿದಾಗಿನಿಂದ ಅವನ ಜೀವನದಲ್ಲಿ ನಡೆದ ಘಟನೆಗಳನ್ನು ಒಂದೊಂದಾಗೇ ಬರೆಯುತ್ತಾ ಬಂದೆ. ಒಂದೊಂದು ಹಂತ ಮುಗಿಯುತ್ತಿದ್ದಂತೆ, ಮುಂದೆ ಪವನ್ ವತ್ಸಲ ಕಥೆ ಏನಾಯ್ತು ಎಂದು ಎದೆ ಢವ ಢವ ಹೊಡೆದುಕೊಳ್ಳುತ್ತಿತ್ತು. ಎಲ್ಲಿ ಮತ್ತೆ ಪವನ್ ವತ್ಸಲಗೆ ತನ್ನ ಪ್ರೀತಿಯ ವಿಷಯ ಹೇಳಿ ಅವಳೂ ಇವನನ್ನು ನಿರಾಕರಿಸುತ್ತಾಳೋ ಎಂದು ಭಯ ಕಾಡುತ್ತಿತ್ತು. ದೇವರೇ ವತ್ಸಲ ಪ್ರೀತಿ ಆದರೂ ಪವನ್ ಗೆ ಸಿಗುವ ಹಾಗಾಗಲಿ ಎಂದು ಮನಸಲ್ಲೇ ಬೇಡಿಕೊಳ್ಳುತ್ತಿದ್ದೆ.

ಪವನ್ ವತ್ಸಲಳನ್ನು ಭೇಟಿ ಮಾಡುವವರೆಗೂ ಬರೆದು ಮುಗಿಸಿ ಮತ್ತೆ ಪವನ್ ಪುಸ್ತಕವನ್ನು ಕೈಗೆತ್ತುಕೊಂಡೆ.
ಅಂದು ಒಂದು ದಿನ ನಿರ್ಧರಿಸಿದೆ. ಆಗಿದ್ದಾಗಲಿ ವತ್ಸಲ ಬಳಿ ನನ್ನ ಪ್ರೀತಿಯನ್ನು ಹೇಳಿಬಿಡಬೇಕು ಎಂದುಕೊಂಡು ವತ್ಸಲಗೆ ದೇವಸ್ಥಾನದ ಬಳಿ ಬರಲು ಹೇಳಿ  ದೇವಸ್ಥಾನದ ಬಳಿ  ಹೊರಟೆ. ದೇವಸ್ಥಾನದ ಬಳಿ ಹೋಗಿ ವತ್ಸಲಗಾಗಿ ಕಾಯುತ್ತಾ ಕುಳಿತೆ. ಹತ್ತು ನಿಮಿಷದಲ್ಲಿ ವತ್ಸಲ ಯಾವುದೋ ಕಾರಿನಲ್ಲಿ ಬಂದಿಳಿದಳು. ಇದೇನಪ್ಪ ಆಶ್ಚರ್ಯ ವತ್ಸಲ ಎಂದೂ ಕಾರಿನಲ್ಲಿ ಬಂದವಳಲ್ಲ ಅಂಥದ್ದರಲ್ಲಿ ಇವತ್ತು ಕಾರಿನಲ್ಲಿ... ಅದೂ ಅಲ್ಲದೆ ಕಾರು ಎಲ್ಲೋ ನೋಡಿದ ನೆನಪಾಗುತ್ತಿದೆಯಲ್ಲ... ಇರಲಿ ನೋಡೋಣ..
ಹಾಯ್ ಪವನ್, ಏನೋ ಇವತ್ತು ಅಪರೂಪ ದೇವಸ್ಥಾನಕ್ಕೆ ಬರಲು ಹೇಳಿದ್ದೀಯ... ಏನು ವಿಶೇಷ...? ದೇವರ ಬಳಿ ಬೇಗನೆ ಯಾವದಾದರೂ ಒಳ್ಳೆ ಹುಡುಗಿ ಸಿಗಲಿ ಎಂದು ಬೇಡಿಕೊಳ್ಳೋಣ ಎಂದು ಬಂದೆಯ ಎಂದು ನಕ್ಕಳು. ವತ್ಸಲ... ಅದೆಲ್ಲಾ ಏನಿಲ್ಲ.... ನಿನ್ನ ಬಳಿಯೇ ಮಾತಾಡಬೇಕಿತ್ತು ಅದಕ್ಕೆ ಬರಲು ಹೇಳಿದೆ ಅಷ್ಟೇ..

ಏನಪ್ಪಾ ನನ್ನ ಬಳಿ ಮಾತಾಡೋದು, ಅದೂ ದೇವಸ್ಥಾನದಲ್ಲಿ....

ವತ್ಸಲ, ನಿನ್ನ ಬಳಿ ನಾನು ಇದುವರೆಗೂ ಯಾವ ವಿಷಯವನ್ನೂ ಮುಚ್ಚಿಟ್ಟಿಲ್ಲ... ನನ್ನ ಪ್ರತಿಯೊಂದು ವಿಷಯವೂ ನಿನಗೆ ಗೊತ್ತು... ಮತ್ತು ಅದೇ ಸಲುಗೆಯಿಂದ ನಿನ್ನ ಬಳಿ ಒಂದು ವಿಷಯ ಕೇಳುತ್ತೇನೆ... ನಿನಗಿಷ್ಟ ಆದರೆ ಅಲ್ಲಿರೋ ಹೂವನ್ನು ನನ್ನ ಇಡು, ಇಲ್ಲವಾದರೆ ಏನೂ ಮಾತಾಡದೆ ಹೊರಟುಬಿಡು...

ಲೋ ಏನೇನೋ ಮಾತಾಡುತ್ತಿದ್ದೀಯಲ್ಲೋ... ಅದೇನು ಹೇಳಬೇಕೋ ನೇರವಾಗಿ ಹೇಳು, ನನಗೆ ರೀತಿ ವಿಚಿತ್ರವಾಗಿ ಮಾತಾಡಿದರೆ ಹಿಡಿಸುವುದಿಲ್ಲ...

ವತ್ಸಲ.... ವತ್ಸಲ ಎಂದು ಅವಳ ಮುಖ ನೋಡಿದೆ, ಕಣ್ಣುಗಳನ್ನು ನೋಡಿ ಹೇಳುವ ಧೈರ್ಯ ಸಾಲದೇ ಅವಳಿಗೆ ಬೆನ್ನು ತಿರುಗಿಸಿಕೊಂಡು ನಿಂತು, ವತ್ಸಲ ನಾನು ಇದುವರೆಗೂ ಇಬ್ಬರು ಹುಡುಗಿಯರಿಗೆ ಮನಸು ಕೊಟ್ಟು ಸೋತು ಹೋಗಿದ್ದೇನೆ, ಇನ್ನು ಜೀವನದಲ್ಲಿ ಮತ್ತೆ ಯಾವ ಹುಡುಗಿಯನ್ನೂ ಪ್ರೀತಿಸಬಾರದೆಂದು ತೀರ್ಮಾನ ಮಾಡಿದ್ದೆ. ಆದರೆ ಅದೇನು ಮಾಯೆಯೋ ಮೋಡಿಯೋ ಗೊತ್ತಿಲ್ಲ, ನಿನ್ನ ಮಾತು, ನಿನ್ನ ನಗು, ನಿನ್ನ ಸನಿಹ, ನಿನ್ನ ಮುಗ್ಧತೆ ಎಲ್ಲವೂ ಸೇರಿ ಮತ್ತೆ ನನ್ನನ್ನು ಪ್ರೀತಿಯ ತೆಕ್ಕೆಗೆ ಬೀಳುವಂತೆ ಮಾಡಿತು. ವತ್ಸಲ ನನ್ನನ್ನು ಮದುವೆ ಆಗುತ್ತೀಯ? ನೀನು ಅಂದುಕೊಳ್ಳುತ್ತಿರಬಹುದು ಇವನೇನಪ್ಪ, ಬಟ್ಟೆ ಬದಲಾಯಿಸಿದ ಹಾಗೆ ಹುಡುಗಿಯರನ್ನು ಬದಲಾಯಿಸುತ್ತಾನೆ ಎಂದು... ಆದರೆ ವತ್ಸಲ ನೀನೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊ.. ಗೀತಾ ಮತ್ತು ರಾಧಾ ಇಬ್ಬರಿಗೂ ನಾನು ಪ್ರಾಮಾಣಿಕವಾಗಿದ್ದೆ.. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ... ಇದರಲ್ಲಿ ನನ್ನ ತಪ್ಪೇನು?

ವತ್ಸಲ.... ನಾನು ನಿನ್ನನ್ನು ಎಂದು ಹಿಂತಿರುಗಿದರೆ... ಒಂದು ಕ್ಷಣ ಶಾಕ್ ಹೊಡೆದಂತಾಯಿತು... !! ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ... ಎದುರಿಗೆ ಗೀತಾ ನಿಂತಿದ್ದಾಳೆ.. ಅವಳ ಪಕ್ಕದಲ್ಲಿ ವತ್ಸಲ... ಓಹ್....ಹೌದು ವತ್ಸಲ ಬಂದ ಕಾರ್ ಗೀತಾಳದ್ದು... ಹಳೆಯ ಕಂಪನಿಯಲ್ಲಿದ್ದಾಗ ಗೀತಾ ಪ್ರತಿದಿನ ಬರುತ್ತಿದ್ದ ಕಾರ್ ಅದು.... ಆದರೆ ಇಲ್ಲಿ....!!! ಅದೂ ವತ್ಸಲ ಜೊತೆ.... ಎಲ್ಲವೂ ಗೊಂದಲಮಯವಾಗಿತ್ತು....

ಗೀತಾ ಕೈ ಮುಂದೆ ಚಾಚಿ ಹಾಯ್ ಪವನ್ ಎಂದಾಗಲೇ ವಾಸ್ತವಕ್ಕೆ ಬಂದಿದ್ದು. ಗೀತಾಗೆ ಕೈ ನೀಡಿ ಹಾ...ಹಾ... ಯ್... ಎಂದು ಹೇಳಿ ವತ್ಸಲ ಕಡೆ ನೋಡಿದೆ. ಏನೋ ಪವನ್ ಆಶ್ಚರ್ಯ ಆಗುತ್ತಿದೆಯ ಗೀತಾಳನ್ನು ನೋಡಿ... ಎಂದು ಕಣ್ಣು ಮಿಟುಕಿಸಿದಳು. ನಾನು ಏನು ಮಾತಾಡಬೇಕೆಂದು ಗೊತ್ತಾಗದೆ ಇಬ್ಬರನ್ನೂ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ. ಪವನ್, ನಡಿ ಎಲ್ಲಾದರೂ ಕೂತು ಮಾತಾಡೋಣ ಎಂದು ವತ್ಸಲ ನನ್ನ ಕೈ ಹಿಡಿದು ಗೀತಾಳನ್ನು ಕರೆದುಕೊಂಡು ಕಾರಲ್ಲಿ ಕುಳಿತು ಹೊರಡಲು ಹೇಳಿದಳು. ಸೀದಾ ಒಂದು ಕಾಫಿ ಡೇ ಬಳಿ ಕಾರು ನಿಲ್ಲಿಸಿ ಮೂವರೂ ಒಳಗೆ ಕುಳಿತೆವು. ವತ್ಸಲ.... ಏನು ನಡೀತಿದೆ ನನಗೊಂದೂ ಅರ್ಥವಾಗುತ್ತಿಲ್ಲ.... ಇದ್ದಕ್ಕಿದ್ದಂತೆ ಗೀತಾ ಎಲ್ಲಿಂದ ಬಂದಳು, ಅದೂ ನಿನ್ನ ಜೊತೆ... 

ಹ್ಮ್ ... ಪವನ್, ನೀನು ಹೇಗೆ ಗೀತಾಳನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗಲೇ ಪ್ರೀತಿ ಮಾಡಿದೆಯೋ ಹಾಗೆಯೇ ಗೀತಾ ಕೂಡ ನಿನ್ನನ್ನು ಕಂಡ ಕೂಡಲೇ ಇಷ್ಟ ಪಟ್ಟುಬಿಟ್ಟಳು ಕಣೋ. ಆದರೆ ಅವಳೊಬ್ಬಳು ಟೀಂ ಲೀಡ್ ಆಗಿ ನೇರವಾಗಿ ನಿನ್ನ ಬಳಿ ಹೇಗೆ ಹೇಳುತ್ತಾಳೆ, ಅದಕ್ಕಾಗಿ ಸ್ವಲ್ಪ ದಿನ ಹೋಗಲೆಂದು ಕಾಯುತ್ತಿದ್ದಳು. ಆದರೆ ಅಷ್ಟರಲ್ಲೇ ನೀನು ರಾಧಾಗೆ ಹತ್ತಿರ ಆಗಿದ್ದನ್ನು ನೋಡಿ, ನೀನು ರಾಧಾಳನ್ನು ಇಷ್ಟ ಪಡುತ್ತಿದ್ದೀಯ ಎಂದುಕೊಂಡಳು. ಅದೇ ಸಮಯಕ್ಕೆ ನೀನು ಗೀತಾ ಬಗ್ಗೆ ಇಲ್ಲಸಲ್ಲದ್ದನ್ನು ಕೇಳಿ ಮತ್ತು ನೀನೆ ಕಣ್ಣಾರೆ ಕಂಡೆ ಎಂದು ಹೇಳಿದೆಯಲ್ಲ, ಅದಕ್ಕೆಲ್ಲ ಕಾರಣ ರಾಧಾನೆ ಕಣೋ... ಗೀತಾ ಬಗ್ಗೆ ನಿನಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದೆ ರಾಧಾ ಕಣೋ. ಬೇರೆಯವರು ನಿನ್ನ ಬಳಿ ಬಂದು ಗೀತಾ ಬಗ್ಗೆ ಕೆಟ್ಟದಾಗಿ ಹೇಳುವಂತೆ ಮಾಡಿದ್ದು ರಾಧಾನೇ, ಗೀತಾ ಅವಳ cousin ಜೊತೆ ಸಿನೆಮಾಗೆ ಹೋಗಿದ್ದನ್ನು ನೀನು ನೋಡುವಂತೆ ಮಾಡಿದ್ದು ರಾಧಾನೇ, ಗೀತಾ ಅವಳ ಸ್ನೇಹಿತನ ಜೊತೆ ಆಚೆ ಹೋಗಿದ್ದಾಗ ನೀನು ಅಲ್ಲಿಗೆ ಬರುವಂತೆ ಮಾಡಿದ್ದು ರಾಧಾನೇ ಕಣೋ... ಒಟ್ಟಿನಲ್ಲಿ ಹೇಳಬೇಕೆಂದರೆ ಗೀತಾ ಬಗ್ಗೆ ನಿನ್ನಲ್ಲಿ ಕೆಟ್ಟ ಅಭಿಪ್ರಾಯ ಮೂಡಿ ನೀನು ರಾಧಾಳನ್ನು ಪ್ರೀತಿಸುವಂತೆ ಮಾಡಿಕೊಂಡಳು  
ರಾಧಾ...

ಪವನ್ ಗೆ ಒಂದೊಂದೇ ವಿಷಯಗಳು ಅರ್ಥ ಆಗುತ್ತಿತ್ತು.. ಹೌದು ತಾನು ರಾಧಾಗೆ ಹತ್ತಿರವಾಗುವ ಮುನ್ನ ಗೀತಾ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಿದ್ದು ನೋಡಿರಲಿಲ್ಲ... ಆದರೆ ರಾಧಾಗೆ ಹತ್ತಿರವಾಗುತ್ತಿದ್ದಂತೆ ಗೀತಾ ಬಗ್ಗೆ ಕೆಟ್ಟದಾಗಿ ಕೇಳಲು ಶುರು ಮಾಡಿದೆ.

ವತ್ಸಲ... ಅದು ಸರಿ, ಆದರೆ ಇದೆಲ್ಲ ನಿನಗೆ ಹೇಗೆ ಗೊತ್ತು? ಮತ್ತು ಗೀತಾ ನಿನಗೆ ಹೇಗೆ ಪರಿಚಯ?

ಪವನ್, ಗೀತಾ ನನ್ನ ಸ್ವಂತ ಅಕ್ಕ ಕಣೋ...ಅವಳು ನನ್ನ ಬಳಿ ಎಲ್ಲಾ ವಿಷಯವನ್ನು ಹೇಳಿದ್ದಳು ಕಣೋ, ಅದಕ್ಕೆ ಹೇಗಾದರೂ ಮಾಡಿ ಗೀತಾ ಬಗ್ಗೆ ನಿನ್ನ ಮನಸಿನಲ್ಲಿರುವ ಕೆಟ್ಟ ಅಭಿಪ್ರಾಯವನ್ನು ತೆಗೆಸಿ ನಿಮ್ಮಿಬ್ಬರನ್ನು ಒಂದು ಮಾಡಬೇಕೆಂದು, ನಿನಗೆ ನಾನಿದ್ದ ಮನೆಯ ಮೇಲೆಯೇ ರೂಂ ಸಿಗುವಂತೆ ಮಾಡಿ ನಿನಗೆ ಹತ್ತಿರವಾದೆ ಕಣೋ. ಪವನ್ ಗೀತಾ ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ ಕಣೋ ಎಂದು ನಮ್ಮಿಬ್ಬರ ಕೈ ಸೇರಿಸಿದಳು.. 

Monday, August 11, 2014

ಬರೆದೆ ನೀನು ನಿನ್ನ ಹೆಸರ - ಭಾಗ ೪



ರಾಧಾ ಏಕೆ ಪವನ್ ಗೆ ಹೀಗೆ ಮಾಡಿದಳು... ಅದೂ ಹೆಚ್ಚು ಕಡಿಮೆ ಒಂದು ವರ್ಷ ಪ್ರೀತಿಸಿ ಹೀಗೆ ಮಾಡಿದ್ದಾಳೆ ಎಂದರೆ ಏನೋ ಬಲವಾದ ಕಾರಣವೇ ಇರಬೇಕು. ಆದರೂ ಅವಳು ಬೇರೆ ಯಾರನ್ನಾದರೂ ಆಗಿದ್ದರೆ ಅದೊಂದು ರೀತಿ... ಆದರೆ ಜೊತೆಯಲ್ಲೇ ಇದ್ದ ಕುಮಾರ್ ನನ್ನು.... ಇದೆ ಅರ್ಥವಾಗುತ್ತಿಲ್ಲ... ಹ್ಮ್ ... ಇರಲಿ ಎಂದು ಮತ್ತೆ ಪುಸ್ತಕ ಕೈಗೆತ್ತುಕೊಂಡು ಶುರುಮಾಡಿದೆ.
ರಾಧಾ ಕೊಟ್ಟ ಶಾಕ್ನಿಂದ ಸುಧಾರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹಾಗೆಂದು ಸುಮ್ಮನೆ ಕೂಡುವ ಹಾಗಿಲ್ಲ... ಒಂದು ಕಡೆ ಟೀಂ ಲೀಡ್ ಎಂಬ ಜವಾಬ್ದಾರಿ ತಲೆಯ ಮೇಲೆ ಕುಳಿತಿದೆ.. ಸಂದರ್ಭದಲ್ಲಿ ಇಂಥಹ ಶಾಕ್.. ನೇರ ಗೀತಾ ಕೋಣೆಗೆ ಹೋಗಿ... ಗೀತಾ ಅರ್ಜೆಂಟಾಗಿ ಊರಿಗೆ ಹೋಗಬೇಕಿದೆ ಒಂದು ವಾರ ರಜೆ ಬೇಕೆಂದೆ. ಏನು ಆಶ್ಚರ್ಯವೋ ಗೊತ್ತಿಲ್ಲ ಗೀತಾ ಮರು ಮಾತಾಡದೆ ಒಪ್ಪಿಗೆ ಕೊಟ್ಟು ಬಿಟ್ಟಳು.

ಪವನ್ ಈಗ ಓಕೆ... ಆದರೆ ವಾಪಸ್ ಬಂದ ಮೇಲೆ ಮತ್ತೆ ಯಾವುದೇ ರಜೆ ಹಾಕುವ ಹಾಗಿಲ್ಲ ಎಂದು ಎಚ್ಚರ ಕೊಟ್ಟು ಕಳಿಸಿದಳು. ಸರಿ ಎಂದು ಹೇಳಿ ಸೀದಾ ಊರಿನ ಬಸ್ಸು ಹತ್ತಿಬಿಟ್ಟೆ. ಊರಿಗೆ ಬಂದು ಮನೆಯವರ ಜೊತೆ, ಸ್ನೇಹಿತರ ಜೊತೆ, ಪ್ರಕೃತಿಯ ಜೊತೆ ಬೆರೆತು ರಾಧಾಳನ್ನು ಮರೆಯಲು ಪ್ರಯತ್ನಿಸಿದರೂ ಆಗಲಿಲ್ಲ. ಅವಳು ನನಗೆ ಸಿಗದಿದ್ದರೂ ಪರವಾಗಿಲ್ಲ. ಆದರೆ ಒಂದೇ ಒಂದು ಸಾರಿ ಏತಕ್ಕೆ ಅವಳು ನನ್ನನ್ನು ತಿರಸ್ಕರಿಸಿದಳು ಎಂದು ಕಾರಣ ತಿಳಿಯಬೇಕು.... ಊರಿಗೆ ಹೋದ ಮೇಲೆ ಹೇಗಾದರೂ ಅವಳನ್ನು ಭೇಟಿ ಮಾಡಬೇಕು. ಒಂದು ವರ್ಷ ನನ್ನ ನಿಷ್ಕಲ್ಮಶ ಪ್ರೀತಿಯ ಜೊತೆ ಆಟ ಆಡಿದ್ದಾಳೆ... ನನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ನಿರ್ಧರಿಸಿ ವಾರದ ನಂತರ ಊರಿಗೆ ಬಂದೆ. ಬಂದಾಗ ನನ್ನ ಡೆಸ್ಕ್ ಮೇಲೆ ರಾಧಾ ಮತ್ತು ಕುಮಾರ್ ಮದುವೆ ಆಹ್ವಾನ ಪತ್ರಿಕೆ ಇತ್ತು. ಅದನ್ನು ನೋಡಿದ ಕೂಡಲೇ ನನಗೆ ಹರಿದು ಬಿಸಾಕಿ ಬಿಡುವಷ್ಟು ಕೋಪ ಬಂದಿತು... ಆದರೂ ಕಂಟ್ರೋಲ್ ಮಾಡಿಕೊಂಡು ಕವರನ್ನು ತೆಗೆದರೆ ಒಳಗಡೆ ಪತ್ರಿಕೆಯೊಂದಿಗೆ ಒಂದು  
ಪತ್ರ ಇತ್ತು!!

ಪತ್ರ ತೆರೆದರೆ...

ಪವನ್....

ನನಗೆ ಗೊತ್ತು ನಿನಗೆ ನನ್ನನ್ನು ಕೊಲ್ಲುವಷ್ಟು ಕೋಪ ಇದೆ ಎಂದು... ಪ್ರೀತಿಸಿ ಮೋಸ ಮಾಡಿದವಳೆಂದು ನೀನು ನನ್ನನ್ನು ಅದೆಷ್ಟೋ ಬೈದುಕೊಂಡಿರಬಹುದು... ಆದರೆ ನಿನ್ನಂಥವರಿಗೆ ಹೀಗೆ ಆಗಬೇಕು. ಪವನ್... ಮೊದಲು ನಾನು ನಿನ್ನನ್ನು ನಿಜವಾಗಿ ಪ್ರೀತಿಸಿದೆ ಕಣೋ... ಆದರೆ ಯಾವಾಗ ನೀನು ಗೀತಾಗೋಸ್ಕರ ನನ್ನ ಗೆಳೆತನ ಮಾಡಿದೆ ಎಂದು ಹೇಳಿದೆಯೋ ಆಗಲೇ ನನಗೆ ಮನಸು ಮುರಿಯಿತು.

ಅಲ್ಲಾ ಪವನ್ ಒಂದು ವಿಷಯ ಕೇಳುತ್ತೇನೆ... ಹುಡುಗಿಯರು, ಹುಡುಗಿಯರ ಪ್ರೀತಿ ಎಂದರೆ ಬಟ್ಟೆ ಬದಲಿಸಿದಷ್ಟು ಸುಲಭ ಎಂದುಕೊಂಡೆಯ... ಮೊದಲು ಅವಳನ್ನು ಇಷ್ಟ ಪಟ್ಟೆ, ಅವಳ ಬಗ್ಗೆ ಯಾರೋ ಏನೋ ಹೇಳಿದರೆಂದು, ನನ್ನನ್ನು ಇಷ್ಟಪಟ್ಟೆ.... ನಾಳೆ ನನ್ನ ಬಗ್ಗೆ ಇನ್ಯಾರೋ ಏನೋ ಹೇಳುತ್ತಾರೆ ಎಂದು,ನನಗೂ ಕೂಡ ಮೋಸ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ...
ಅಂದೇ ನಿರ್ಧರಿಸಿಕೊಂಡೆ... ನಿನಗೆ ಪ್ರೀತಿಯ ಅನುಭೂತಿ ಕೊಟ್ಟು ಅದನ್ನು ಕಿತ್ತುಕೊಂಡರೆ, ನಿನಗೆ ಪ್ರೀತಿಯ ಮಹತ್ವ ಏನೆಂದು ಅರಿವಾಗುವುದು... ಅದಕ್ಕೆ ಹೀಗೆ ಮಾಡಿದ್ದು. ನಾನು ಕುಮಾರ್ ಸಂಬಂಧಿಗಳೇ ಆಗಿದ್ದರೂ ನಮ್ಮಿಬ್ಬರ ಮಧ್ಯೆ ಯಾವತ್ತೂ ಪ್ರೀತಿ ಇಲ್ಲ... ಈಗಲೂ ಇಲ್ಲ...ಮುಂದೂ ಇರುವುದಿಲ್ಲ... ಆದರೆ ನಿನ್ನ ಮೇಲಿನ ದ್ವೇಶಕ್ಕಷ್ಟೇ  ಅವನನ್ನು ಮದುವೆ ಆಗುತ್ತಿದ್ದೇನೆ...

ಇನ್ಯಾವತ್ತೂ ಪ್ರೀತಿಯ ಜೊತೆ ಆಟ ಆಡಬೇಡ ಪವನ್... ಕಾರ್ಡ್ ಕೊಟ್ಟೆ ಎಂದು ಮದುವೆಗೆ ಬಂದು ಬಿಡಬೇಡ... ನಿನಗೆ ಕಾಗದ ತಲುಪಿಸಬೇಕಿತ್ತು ಅದಕ್ಕೆ ಪತ್ರಿಕೆ ಜೊತೆ ಕೊಟ್ಟಿದ್ದೇನೆ ಹೊರತು ಮದುವೆಗೆ ಕರೆದಿದ್ದೇನೆ ಎಂದು ಮಾತ್ರ ತಿಳಿಯಬೇಡ.

ಗುಡ್ ಬೈ...

ರಾಧಾ ಕಾಗದ ಓದಿದ ಮೇಲೆ ಅವಳ ಮೇಲೆ ಇದ್ದ ಕೋಪ ಹೋಗಿ ಕನಿಕರ ಬಂತು. ಅಯ್ಯೋ ಹುಚ್ಚಿ, ನನ್ನ ಪ್ರೀತಿಯನ್ನು ಅನುಮಾನ ಪಟ್ಟು ಅವನನ್ನು ಮದುವೆ ಆಗುತ್ತಿದ್ದೀಯ... ಅವನು ನಿನಗಿಂತ ಮೊದಲೇ ಗೀತಾಗೆ ಪ್ರಯತ್ನ ಪಟ್ಟವನು.... ನಿನ್ನ ಕಾಗದ ನೋಡಿದರೆ ನೀನೆಷ್ಟು immature ಎಂದು ತಿಳಿಯುತ್ತದೆ... ರಾಧಾ, ನಾನು ಪ್ರೀತಿಯ ಜೊತೆ ಆಟ ಆಡಿದೆನ? ನಾನಲ್ಲ ಆಟ ಆಡಿದ್ದು.... ನೀನು.... ನಿನ್ನಂಥವಳಿಗೆ ನಾನೇಕೆ ನನ್ನತನವನ್ನು ಕಳೆದುಕೊಂಡು ಹೀಗೆ ಒದ್ದಾಡಬೇಕು... ಇನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ... ನೀನಿಲ್ಲದಿದ್ದರೆ ಏನಂತೆ... ಜೀವನ ಸಿಕ್ಕಾಪಟ್ಟೆ ಇದೆ... ಇಷ್ಟಕ್ಕೆ ನಿಲ್ಲುವುದಿಲ್ಲ... ಒಂದು ರೀತಿ ಹೇಳಬೇಕೆಂದರೆ ನೀನು ನನಗೆ ಮೋಸ ಮಾಡಿದ ದಿನವೇ ನನಗೆ ಪ್ರಮೋಷನ್ ಬಂತು... ನಿಜಕ್ಕೂ ನನಗಿದ್ದ ಶನಿ ಬಿಟ್ಟು ಹೋಯಿತು ಎಂದು ನೆಮ್ಮದಿಯಾಗಿರುತ್ತೇನೆ ಎಂದುಕೊಂಡೆ.

ನಂತರ ಸುಮಾರು ಆರು ತಿಂಗಳು ಅದೇ ಕಂಪನಿಯಲ್ಲಿದ್ದು ನಂತರ ಬೇರೊಂದು ಕಂಪನಿಗೆ ಬಂದೆ. ಕಂಪನಿಯಲ್ಲಿ ಪ್ರಾಜೆಕ್ಟ್ ಲೀಡ್ ಸ್ಥಾನ ಕೊಟ್ಟಿದ್ದರು, ಮುಂಚಿನ ಕಂಪೆನಿಗಿಂತ ೩೦% ಹೆಚ್ಚು ಸಂಬಳ ಕೊಟ್ಟಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಆಗ ಪರಿಚಯ ಆದವಳೇ ನನ್ನ ಬಾಳ ಪುಟದಲ್ಲಿ ಹೆಸರು ಬರೆದ ಮೂರನೇ ಹುಡುಗಿ ವತ್ಸಲ. ವತ್ಸಲ ನೋಡಲು ಮಗುವಿನಂತೆ ಮುದ್ದಾಗಿದ್ದಳು. ಗುಂಡು ಮುಖ ಕಾಂತಿಯುತವಾದ ಕಣ್ಣುಗಳು, ಅರಳು ಹುರಿದಂತೆ ಮಾತಾಡುವ ಅವಳ ಸ್ವಭಾವ ನನಗೆ ಬಹಳ ಅಚ್ಚು ಮೆಚ್ಚಾಗಿತ್ತು. ವತ್ಸಲ ಪರಿಚಯವಾಗಿದ್ದು ನಾನು ಹೊಸದಾಗಿ ರೂಂ ಬದಲಿಸಿದಾಗ ಕೆಳಗಡೆ ಮನೆಯಲ್ಲಿದ್ದ ಹುಡುಗಿ. ಡಿಗ್ರಿ ಮುಗಿಸಿ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿದಿನ ನಾನು ಹೊರಡುವ ಸಮಯಕ್ಕೆ ಅವಳು ಹೊರಡುತ್ತಿದ್ದರಿಂದ ಇಬ್ಬರೂ ಒಬ್ಬರೊನ್ನಬರು ನೋಡುವುದರಿಂದ, ನಗುವಿನಿಂದ ಶುರುವಾಗಿ ಪರಿಚಯವಾಗಿತ್ತು. ವತ್ಸಲ ಸ್ವಭಾವ ಯಾರೇ ಆದರೂ ಕೂಡಲೇ ಅವರ ಜೊತೆ ಹೊಂದಿಕೊಂಡು ಬಿಡುತ್ತಿದ್ದಳು. ಅವಳ ಮಾತಲ್ಲಿ ಅದೊಂದು ರೀತಿ ಮೋಡಿ  ಇತ್ತು. ಎಂಥವರು ಆದರೂ ಮಾತಿಗೆ ಮರುಳಾಗುತ್ತಿದ್ದರು.

ಅವಳ ಬಳಿ ರಾಧಾ ವಿಷಯ ಸಹ ಹೇಳಿದ್ದೆ. ಅವಳು ಅದಕ್ಕೆ ನೋಡು ಪವನ್... ನಿನ್ನಂಥ ಹುಡುಗನನ್ನು ಅವಳು ಬಿಟ್ಟಿದ್ದಾಳೆ ಎಂದರೆ ಅವಳು ನಿಜಕ್ಕೂ ದುರದೃಷ್ಟವಂತೆ ಕಣೋ... ಪವನ್ ನಿನಗೆ ಗೊತ್ತು ನನಗೆಷ್ಟು ಜನ ಸ್ನೇಹಿತರು ಇದಾರೆ ಎಂದು...ನೀನು ನಂಬುತ್ತೀಯೋ ಇಲ್ಲವೋ ಗೊತ್ತಿಲ್ಲ... ನಿನ್ನಷ್ಟು ಕ್ಲೋಸ್ ಫ್ರೆಂಡ್ ಯಾರೂ ಇಲ್ಲ ಕಣೋ. ಬಿಡೋ... ಅವಳ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀಯ...

ವತ್ಸಲ.... ವತ್ಸಲ.... ಮತ್ತೆ ನನ್ನಲ್ಲಿ ಪ್ರೀತಿಯ ಮೊಳಕೆ ಒಡೆಸಿದ್ದಳು... 

ಆದರೆ ಮತ್ತೊಮ್ಮೆ ಭಗ್ನಪ್ರೇಮಿ ಆಗುವ ಆಸೆ ನನಗಿರಲಿಲ್ಲ. ಇನ್ನೊಂದು ಆಘಾತ ತಡೆದುಕೊಳ್ಳಲು ನನ್ನ ಕೈಲಿ ಸಾಧ್ಯವಿರಲಿಲ್ಲ. ವತ್ಸಲ ಬಳಿ ಹೇಗೆ ನನ್ನ ಪ್ರೀತಿಯನ್ನು ಹೇಳುವುದೆಂದು ಪರದಾಡುತ್ತಿದ್ದೆ. ಅದೂ ಅಲ್ಲದೆ ರಾಧಾ ವಿಷಯ ಬಳಿ ಅವಳ ಬಳಿ ಹೇಳಿದ್ದೆ... ಅಂಥದ್ದರಲ್ಲಿ ಅವಳು ನನ್ನನ್ನು ಒಪ್ಪುತ್ತಾಳ? ಒಂದು ವೇಳೆ ಆಗುವುದಿಲ್ಲ ಎಂದುಬಿಟ್ಟರೆ... ಛೇ ಏನಿದು ಹುಚ್ಚು ಮನಸು... ದೇವರೇ ನನಗೆ ಏಕೆ ಹೀಗೆ? ಯಾರಿಗೂ ಕೆಟ್ಟದ್ದು ಬಯಸದ ನನಗೇ  ಏಕೆ ಹೀಗೆ?

ದೇವರೇ... ಯಾಕೋ ಮುಂದಕ್ಕೆ ಓದಲು ನನಗೂ ಭಯ ಆಗುತ್ತಿದೆ, ಒಂದು ವೇಳೆ ಪವನ್ ವತ್ಸಲ ಬಳಿ ಹೇಳಿ ಅವಳೂ ಆಗಲ್ಲ ಎಂದುಬಿಟ್ಟರೆ, ಇವನಿಗೆ ಅದನ್ನು ತಡೆಯುವ ಧೈರ್ಯ ಇರುತ್ತದ? ಹೇಗಾದರೂ ಮಾಡಿ ಅವರಿಬ್ಬರನ್ನು ಒಂದು ಮಾಡಪ್ಪಾ.... ಎಂದು ಮನದಲ್ಲೇ ಪ್ರಾರ್ಥನೆ ಮಾಡಿ ಮೊಬೈಲ್ ಎತ್ತುಕೊಂಡು ಪವನ್ ಗೆ ಕರೆ ಮಾಡಿದೆ. ಹಲೋ... ಪವನ್... ನಾನು ಜಯಂತ್ ಮಾತಾಡುತ್ತಿರುವುದು...

ಸರ್... ನಮಸ್ಕಾರ... ನಿಮ್ಮಿಂದ ಫೋನ್ ಬರುತ್ತದೆ ಎಂದು ನಾನು ಖಂಡಿತ ನಿರೀಕ್ಷಿಸಿರಲಿಲ್ಲ... ಅದೂ ಇಷ್ಟು ಬೇಗ... ಸರ್ ಇದರ ಅರ್ಥ ನೀವು ನನ್ನ ಕಥೆಯನ್ನು ಬರೆಯುತ್ತಿದ್ದೀರ?

ಪವನ್ ನಮಸ್ಕಾರ... ನಿನ್ನ ಕಥೆಯನ್ನು ಬರೆಯಲು ತೀರ್ಮಾನ ಮಾಡಿದ್ದೇನೆ... ಆದರೆ ನಾನಿನ್ನೂ ನಿನ್ನ ಕಥೆಯನ್ನು ಪೂರ್ತಿ ಓದಿಲ್ಲ... ನೀನು ವತ್ಸಲ ಬಳಿ ನಿನ್ನ ಪ್ರೀತಿಯನ್ನು ಹೇಳಲು ಆಗದೆ ಒದ್ದಾಡುತ್ತಿದ್ದೆಯಲ್ಲ ಅಲ್ಲಿಯವರೆಗೂ ಓದಿದ್ದೇನೆ ಅಷ್ಟೇ... ಮೊದಲು ಕಥೆ ಶುರುಮಾಡಿಬಿಡುತ್ತೇನೆ... ಇಲ್ಲಿಯವರೆಗೂ ಬಂದ ಮೇಲೆ ಮಿಕ್ಕಿದ್ದನ್ನು ಓದುತ್ತೇನೆ. ಏಕೆಂದರೆ ನನಗೆ ಮುಂದೆ ಏನಾಗುತ್ತದೋ ಎಂದು ಭಯ ಆಗುತ್ತಿದೆ... ಅದಕ್ಕೆ ಸ್ವಲ್ಪ ಬ್ರೇಕ್ ಬೇಕು...

ಸರ್.. ಬೇಡ ಸರ್... ಈಗಲೇ ಬರೆಯಲು ಶುರು ಮಾಡಬೇಡಿ... ಪೂರ್ತಿ ಓದಿದ ನಂತರವೇ ಶುರುಮಾಡಿ... ಏಕೆಂದರೆ ಇಲ್ಲಿಯವರೆಗೂ ನಿಮಗೆ ಚೆನ್ನಾಗಿದ್ದು ಮುಂದಿನ ಭಾಗ ನಿಮಗೆ ಇಷ್ಟವಾಗದಿದ್ದರೆ ಆಮೇಲೆ ನಿಮಗೆ ನೋವಾಗಬಹುದು...
ಪವನ್ ನನಗೆ ೧೦೦% ನಂಬಿಕೆ ಇದೆ, ಇದು ಖಂಡಿತ ಒಂದೊಳ್ಳೆ ಕಥೆ ಆಗುತ್ತದೆ... ಸಿನೆಮಾ ಕಥೆ ಮಾಡಬಹುದು ಎನಿಸುತ್ತಿದೆ... ನೋಡೋಣ ಮೊದಲು ಬರೆಯಲು ಶುರು ಮಾಡುತ್ತೇನೆ... ಆಮೇಲೆ ನೋಡೋಣ ಎಂದು ಕರೆ ಕಟ್ ಮಾಡಿ ಪವನನ ಕಥೆ ಬರೆಯಲು ಶುರುಮಾಡಿದೆ... ಅವನದೇ ಶೀರ್ಷಿಕೆ "ಬರೆದೆ ನೀನು ನಿನ್ನ ಹೆಸರ"