Thursday, August 14, 2014

ಬರೆದೆ ನೀನು ನಿನ್ನ ಹೆಸರ - ಕೊನೆಯ ಭಾಗ



ಪವನ್ ಗೀತಾಳನ್ನು ನೋಡಿದಾಗಿನಿಂದ ಅವನ ಜೀವನದಲ್ಲಿ ನಡೆದ ಘಟನೆಗಳನ್ನು ಒಂದೊಂದಾಗೇ ಬರೆಯುತ್ತಾ ಬಂದೆ. ಒಂದೊಂದು ಹಂತ ಮುಗಿಯುತ್ತಿದ್ದಂತೆ, ಮುಂದೆ ಪವನ್ ವತ್ಸಲ ಕಥೆ ಏನಾಯ್ತು ಎಂದು ಎದೆ ಢವ ಢವ ಹೊಡೆದುಕೊಳ್ಳುತ್ತಿತ್ತು. ಎಲ್ಲಿ ಮತ್ತೆ ಪವನ್ ವತ್ಸಲಗೆ ತನ್ನ ಪ್ರೀತಿಯ ವಿಷಯ ಹೇಳಿ ಅವಳೂ ಇವನನ್ನು ನಿರಾಕರಿಸುತ್ತಾಳೋ ಎಂದು ಭಯ ಕಾಡುತ್ತಿತ್ತು. ದೇವರೇ ವತ್ಸಲ ಪ್ರೀತಿ ಆದರೂ ಪವನ್ ಗೆ ಸಿಗುವ ಹಾಗಾಗಲಿ ಎಂದು ಮನಸಲ್ಲೇ ಬೇಡಿಕೊಳ್ಳುತ್ತಿದ್ದೆ.

ಪವನ್ ವತ್ಸಲಳನ್ನು ಭೇಟಿ ಮಾಡುವವರೆಗೂ ಬರೆದು ಮುಗಿಸಿ ಮತ್ತೆ ಪವನ್ ಪುಸ್ತಕವನ್ನು ಕೈಗೆತ್ತುಕೊಂಡೆ.
ಅಂದು ಒಂದು ದಿನ ನಿರ್ಧರಿಸಿದೆ. ಆಗಿದ್ದಾಗಲಿ ವತ್ಸಲ ಬಳಿ ನನ್ನ ಪ್ರೀತಿಯನ್ನು ಹೇಳಿಬಿಡಬೇಕು ಎಂದುಕೊಂಡು ವತ್ಸಲಗೆ ದೇವಸ್ಥಾನದ ಬಳಿ ಬರಲು ಹೇಳಿ  ದೇವಸ್ಥಾನದ ಬಳಿ  ಹೊರಟೆ. ದೇವಸ್ಥಾನದ ಬಳಿ ಹೋಗಿ ವತ್ಸಲಗಾಗಿ ಕಾಯುತ್ತಾ ಕುಳಿತೆ. ಹತ್ತು ನಿಮಿಷದಲ್ಲಿ ವತ್ಸಲ ಯಾವುದೋ ಕಾರಿನಲ್ಲಿ ಬಂದಿಳಿದಳು. ಇದೇನಪ್ಪ ಆಶ್ಚರ್ಯ ವತ್ಸಲ ಎಂದೂ ಕಾರಿನಲ್ಲಿ ಬಂದವಳಲ್ಲ ಅಂಥದ್ದರಲ್ಲಿ ಇವತ್ತು ಕಾರಿನಲ್ಲಿ... ಅದೂ ಅಲ್ಲದೆ ಕಾರು ಎಲ್ಲೋ ನೋಡಿದ ನೆನಪಾಗುತ್ತಿದೆಯಲ್ಲ... ಇರಲಿ ನೋಡೋಣ..
ಹಾಯ್ ಪವನ್, ಏನೋ ಇವತ್ತು ಅಪರೂಪ ದೇವಸ್ಥಾನಕ್ಕೆ ಬರಲು ಹೇಳಿದ್ದೀಯ... ಏನು ವಿಶೇಷ...? ದೇವರ ಬಳಿ ಬೇಗನೆ ಯಾವದಾದರೂ ಒಳ್ಳೆ ಹುಡುಗಿ ಸಿಗಲಿ ಎಂದು ಬೇಡಿಕೊಳ್ಳೋಣ ಎಂದು ಬಂದೆಯ ಎಂದು ನಕ್ಕಳು. ವತ್ಸಲ... ಅದೆಲ್ಲಾ ಏನಿಲ್ಲ.... ನಿನ್ನ ಬಳಿಯೇ ಮಾತಾಡಬೇಕಿತ್ತು ಅದಕ್ಕೆ ಬರಲು ಹೇಳಿದೆ ಅಷ್ಟೇ..

ಏನಪ್ಪಾ ನನ್ನ ಬಳಿ ಮಾತಾಡೋದು, ಅದೂ ದೇವಸ್ಥಾನದಲ್ಲಿ....

ವತ್ಸಲ, ನಿನ್ನ ಬಳಿ ನಾನು ಇದುವರೆಗೂ ಯಾವ ವಿಷಯವನ್ನೂ ಮುಚ್ಚಿಟ್ಟಿಲ್ಲ... ನನ್ನ ಪ್ರತಿಯೊಂದು ವಿಷಯವೂ ನಿನಗೆ ಗೊತ್ತು... ಮತ್ತು ಅದೇ ಸಲುಗೆಯಿಂದ ನಿನ್ನ ಬಳಿ ಒಂದು ವಿಷಯ ಕೇಳುತ್ತೇನೆ... ನಿನಗಿಷ್ಟ ಆದರೆ ಅಲ್ಲಿರೋ ಹೂವನ್ನು ನನ್ನ ಇಡು, ಇಲ್ಲವಾದರೆ ಏನೂ ಮಾತಾಡದೆ ಹೊರಟುಬಿಡು...

ಲೋ ಏನೇನೋ ಮಾತಾಡುತ್ತಿದ್ದೀಯಲ್ಲೋ... ಅದೇನು ಹೇಳಬೇಕೋ ನೇರವಾಗಿ ಹೇಳು, ನನಗೆ ರೀತಿ ವಿಚಿತ್ರವಾಗಿ ಮಾತಾಡಿದರೆ ಹಿಡಿಸುವುದಿಲ್ಲ...

ವತ್ಸಲ.... ವತ್ಸಲ ಎಂದು ಅವಳ ಮುಖ ನೋಡಿದೆ, ಕಣ್ಣುಗಳನ್ನು ನೋಡಿ ಹೇಳುವ ಧೈರ್ಯ ಸಾಲದೇ ಅವಳಿಗೆ ಬೆನ್ನು ತಿರುಗಿಸಿಕೊಂಡು ನಿಂತು, ವತ್ಸಲ ನಾನು ಇದುವರೆಗೂ ಇಬ್ಬರು ಹುಡುಗಿಯರಿಗೆ ಮನಸು ಕೊಟ್ಟು ಸೋತು ಹೋಗಿದ್ದೇನೆ, ಇನ್ನು ಜೀವನದಲ್ಲಿ ಮತ್ತೆ ಯಾವ ಹುಡುಗಿಯನ್ನೂ ಪ್ರೀತಿಸಬಾರದೆಂದು ತೀರ್ಮಾನ ಮಾಡಿದ್ದೆ. ಆದರೆ ಅದೇನು ಮಾಯೆಯೋ ಮೋಡಿಯೋ ಗೊತ್ತಿಲ್ಲ, ನಿನ್ನ ಮಾತು, ನಿನ್ನ ನಗು, ನಿನ್ನ ಸನಿಹ, ನಿನ್ನ ಮುಗ್ಧತೆ ಎಲ್ಲವೂ ಸೇರಿ ಮತ್ತೆ ನನ್ನನ್ನು ಪ್ರೀತಿಯ ತೆಕ್ಕೆಗೆ ಬೀಳುವಂತೆ ಮಾಡಿತು. ವತ್ಸಲ ನನ್ನನ್ನು ಮದುವೆ ಆಗುತ್ತೀಯ? ನೀನು ಅಂದುಕೊಳ್ಳುತ್ತಿರಬಹುದು ಇವನೇನಪ್ಪ, ಬಟ್ಟೆ ಬದಲಾಯಿಸಿದ ಹಾಗೆ ಹುಡುಗಿಯರನ್ನು ಬದಲಾಯಿಸುತ್ತಾನೆ ಎಂದು... ಆದರೆ ವತ್ಸಲ ನೀನೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊ.. ಗೀತಾ ಮತ್ತು ರಾಧಾ ಇಬ್ಬರಿಗೂ ನಾನು ಪ್ರಾಮಾಣಿಕವಾಗಿದ್ದೆ.. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ... ಇದರಲ್ಲಿ ನನ್ನ ತಪ್ಪೇನು?

ವತ್ಸಲ.... ನಾನು ನಿನ್ನನ್ನು ಎಂದು ಹಿಂತಿರುಗಿದರೆ... ಒಂದು ಕ್ಷಣ ಶಾಕ್ ಹೊಡೆದಂತಾಯಿತು... !! ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ... ಎದುರಿಗೆ ಗೀತಾ ನಿಂತಿದ್ದಾಳೆ.. ಅವಳ ಪಕ್ಕದಲ್ಲಿ ವತ್ಸಲ... ಓಹ್....ಹೌದು ವತ್ಸಲ ಬಂದ ಕಾರ್ ಗೀತಾಳದ್ದು... ಹಳೆಯ ಕಂಪನಿಯಲ್ಲಿದ್ದಾಗ ಗೀತಾ ಪ್ರತಿದಿನ ಬರುತ್ತಿದ್ದ ಕಾರ್ ಅದು.... ಆದರೆ ಇಲ್ಲಿ....!!! ಅದೂ ವತ್ಸಲ ಜೊತೆ.... ಎಲ್ಲವೂ ಗೊಂದಲಮಯವಾಗಿತ್ತು....

ಗೀತಾ ಕೈ ಮುಂದೆ ಚಾಚಿ ಹಾಯ್ ಪವನ್ ಎಂದಾಗಲೇ ವಾಸ್ತವಕ್ಕೆ ಬಂದಿದ್ದು. ಗೀತಾಗೆ ಕೈ ನೀಡಿ ಹಾ...ಹಾ... ಯ್... ಎಂದು ಹೇಳಿ ವತ್ಸಲ ಕಡೆ ನೋಡಿದೆ. ಏನೋ ಪವನ್ ಆಶ್ಚರ್ಯ ಆಗುತ್ತಿದೆಯ ಗೀತಾಳನ್ನು ನೋಡಿ... ಎಂದು ಕಣ್ಣು ಮಿಟುಕಿಸಿದಳು. ನಾನು ಏನು ಮಾತಾಡಬೇಕೆಂದು ಗೊತ್ತಾಗದೆ ಇಬ್ಬರನ್ನೂ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ. ಪವನ್, ನಡಿ ಎಲ್ಲಾದರೂ ಕೂತು ಮಾತಾಡೋಣ ಎಂದು ವತ್ಸಲ ನನ್ನ ಕೈ ಹಿಡಿದು ಗೀತಾಳನ್ನು ಕರೆದುಕೊಂಡು ಕಾರಲ್ಲಿ ಕುಳಿತು ಹೊರಡಲು ಹೇಳಿದಳು. ಸೀದಾ ಒಂದು ಕಾಫಿ ಡೇ ಬಳಿ ಕಾರು ನಿಲ್ಲಿಸಿ ಮೂವರೂ ಒಳಗೆ ಕುಳಿತೆವು. ವತ್ಸಲ.... ಏನು ನಡೀತಿದೆ ನನಗೊಂದೂ ಅರ್ಥವಾಗುತ್ತಿಲ್ಲ.... ಇದ್ದಕ್ಕಿದ್ದಂತೆ ಗೀತಾ ಎಲ್ಲಿಂದ ಬಂದಳು, ಅದೂ ನಿನ್ನ ಜೊತೆ... 

ಹ್ಮ್ ... ಪವನ್, ನೀನು ಹೇಗೆ ಗೀತಾಳನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗಲೇ ಪ್ರೀತಿ ಮಾಡಿದೆಯೋ ಹಾಗೆಯೇ ಗೀತಾ ಕೂಡ ನಿನ್ನನ್ನು ಕಂಡ ಕೂಡಲೇ ಇಷ್ಟ ಪಟ್ಟುಬಿಟ್ಟಳು ಕಣೋ. ಆದರೆ ಅವಳೊಬ್ಬಳು ಟೀಂ ಲೀಡ್ ಆಗಿ ನೇರವಾಗಿ ನಿನ್ನ ಬಳಿ ಹೇಗೆ ಹೇಳುತ್ತಾಳೆ, ಅದಕ್ಕಾಗಿ ಸ್ವಲ್ಪ ದಿನ ಹೋಗಲೆಂದು ಕಾಯುತ್ತಿದ್ದಳು. ಆದರೆ ಅಷ್ಟರಲ್ಲೇ ನೀನು ರಾಧಾಗೆ ಹತ್ತಿರ ಆಗಿದ್ದನ್ನು ನೋಡಿ, ನೀನು ರಾಧಾಳನ್ನು ಇಷ್ಟ ಪಡುತ್ತಿದ್ದೀಯ ಎಂದುಕೊಂಡಳು. ಅದೇ ಸಮಯಕ್ಕೆ ನೀನು ಗೀತಾ ಬಗ್ಗೆ ಇಲ್ಲಸಲ್ಲದ್ದನ್ನು ಕೇಳಿ ಮತ್ತು ನೀನೆ ಕಣ್ಣಾರೆ ಕಂಡೆ ಎಂದು ಹೇಳಿದೆಯಲ್ಲ, ಅದಕ್ಕೆಲ್ಲ ಕಾರಣ ರಾಧಾನೆ ಕಣೋ... ಗೀತಾ ಬಗ್ಗೆ ನಿನಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದೆ ರಾಧಾ ಕಣೋ. ಬೇರೆಯವರು ನಿನ್ನ ಬಳಿ ಬಂದು ಗೀತಾ ಬಗ್ಗೆ ಕೆಟ್ಟದಾಗಿ ಹೇಳುವಂತೆ ಮಾಡಿದ್ದು ರಾಧಾನೇ, ಗೀತಾ ಅವಳ cousin ಜೊತೆ ಸಿನೆಮಾಗೆ ಹೋಗಿದ್ದನ್ನು ನೀನು ನೋಡುವಂತೆ ಮಾಡಿದ್ದು ರಾಧಾನೇ, ಗೀತಾ ಅವಳ ಸ್ನೇಹಿತನ ಜೊತೆ ಆಚೆ ಹೋಗಿದ್ದಾಗ ನೀನು ಅಲ್ಲಿಗೆ ಬರುವಂತೆ ಮಾಡಿದ್ದು ರಾಧಾನೇ ಕಣೋ... ಒಟ್ಟಿನಲ್ಲಿ ಹೇಳಬೇಕೆಂದರೆ ಗೀತಾ ಬಗ್ಗೆ ನಿನ್ನಲ್ಲಿ ಕೆಟ್ಟ ಅಭಿಪ್ರಾಯ ಮೂಡಿ ನೀನು ರಾಧಾಳನ್ನು ಪ್ರೀತಿಸುವಂತೆ ಮಾಡಿಕೊಂಡಳು  
ರಾಧಾ...

ಪವನ್ ಗೆ ಒಂದೊಂದೇ ವಿಷಯಗಳು ಅರ್ಥ ಆಗುತ್ತಿತ್ತು.. ಹೌದು ತಾನು ರಾಧಾಗೆ ಹತ್ತಿರವಾಗುವ ಮುನ್ನ ಗೀತಾ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಿದ್ದು ನೋಡಿರಲಿಲ್ಲ... ಆದರೆ ರಾಧಾಗೆ ಹತ್ತಿರವಾಗುತ್ತಿದ್ದಂತೆ ಗೀತಾ ಬಗ್ಗೆ ಕೆಟ್ಟದಾಗಿ ಕೇಳಲು ಶುರು ಮಾಡಿದೆ.

ವತ್ಸಲ... ಅದು ಸರಿ, ಆದರೆ ಇದೆಲ್ಲ ನಿನಗೆ ಹೇಗೆ ಗೊತ್ತು? ಮತ್ತು ಗೀತಾ ನಿನಗೆ ಹೇಗೆ ಪರಿಚಯ?

ಪವನ್, ಗೀತಾ ನನ್ನ ಸ್ವಂತ ಅಕ್ಕ ಕಣೋ...ಅವಳು ನನ್ನ ಬಳಿ ಎಲ್ಲಾ ವಿಷಯವನ್ನು ಹೇಳಿದ್ದಳು ಕಣೋ, ಅದಕ್ಕೆ ಹೇಗಾದರೂ ಮಾಡಿ ಗೀತಾ ಬಗ್ಗೆ ನಿನ್ನ ಮನಸಿನಲ್ಲಿರುವ ಕೆಟ್ಟ ಅಭಿಪ್ರಾಯವನ್ನು ತೆಗೆಸಿ ನಿಮ್ಮಿಬ್ಬರನ್ನು ಒಂದು ಮಾಡಬೇಕೆಂದು, ನಿನಗೆ ನಾನಿದ್ದ ಮನೆಯ ಮೇಲೆಯೇ ರೂಂ ಸಿಗುವಂತೆ ಮಾಡಿ ನಿನಗೆ ಹತ್ತಿರವಾದೆ ಕಣೋ. ಪವನ್ ಗೀತಾ ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ ಕಣೋ ಎಂದು ನಮ್ಮಿಬ್ಬರ ಕೈ ಸೇರಿಸಿದಳು.. 

No comments:

Post a Comment