Tuesday, July 7, 2015

ಬ್ಲಾಸ್ಟ್ - 7



ಗೃಹಮಂತ್ರಿಗಳ ಕಛೇರಿಯಿಂದ ಆಚೆ ಬಂದು ಅಲ್ಲಿಂದ ಎಲ್ಲರೂ IG ಕಛೇರಿಗೆ ಬಂದು ಮುಂದೆ ನಡೆಯುವ ಕಾರ್ಯಾಚರಣೆ ಬಗ್ಗೆ ಸಿದ್ಧತೆಗೆ ಮುಂದಾದರು. ಅಭಿ, ನೀವು ಮಂತ್ರಿಗಳ ಬಳಿ ಹಾಗೆ ಮಾತಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದಿರಿ... ಇಲ್ಲವಾದರೆ ಪ್ರತಿಬಾರಿ ನಾವು ಕಷ್ಟಪಟ್ಟು ಹಿಡಿಯುವುದು... ಇವರು ಇಷ್ಟ ಬಂದ ಹಾಗೆ ವಿಚಾರಣೆ ಮಾಡಿ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲದ ಹಾಗೆ ಮಾಡುತ್ತಿದ್ದರು. ಅಂದ ಹಾಗೆ ಈಗ ನೀವು ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆಂದು ನಿರ್ಧಾರ ಮಾಡಿದ್ದೀರಿ?
ನನ್ನ ಅಂದಾಜಿನ ಪ್ರಕಾರ ಒಳಗೆ ಅವನೊಬ್ಬನೇ ಅಂತೂ ಇಲ್ಲ, ಜೊತೆಯಲ್ಲಿ ಕನಿಷ್ಠ ಪಕ್ಷ ಐದಾರು ಜನ ಆದರೂ ಇರುತ್ತಾರೆ. ನನಗೆ ನನ್ನ ವಿಶೇಷ ಟೀಂ ಒಂದಂತೂ ಇದ್ದೇ ಇದೆ. ಅದರ ಜೊತೆಗೆ ಎರಡು ಮೀಸಲು ಪಡೆ ಪೋಲೀಸರನ್ನು ಸ್ಕೂಲಿನ ಸುತ್ತುವರಿಯಲು ಬೇಕು... ಆದರೆ ಇವರು ನನ್ನ ಆದೇಶ ಬರುವವರೆಗೂ ಸ್ಕೂಲಿನ ಬಳಿ ಬರಬಾರದು. ನಂತರ ನಾನು ಮತ್ತು ವಿಜಯ್ ಸ್ಕೂಲಿನ ಒಳಗಡೆ ಹೋಗುತ್ತೇವೆ... ನನ್ನ ಟೀಮಿನ ಉಳಿದ ಮೂವರು ಸ್ಕೂಲಿನ ಅಕ್ಕಪಕ್ಕದಲ್ಲಿರುವ ಕಟ್ಟಡದ ಮೇಲೆ ಸಿದ್ಧರಾಗಿರುತ್ತಾರೆ.. ಅವರೆಲ್ಲ sharp shooters. ನನ್ನ ಆದೇಶ ಬಂದ ಕೊಡಲೇ ಅವರು ಅವರ ಕೆಲಸ ಮಾಡುತ್ತಾರೆ.

ಅಭಿ ಅಂದ ಹಾಗೆ ಸ್ಕೂಲಿನ ಒಳಗೆ ಹೇಗೆ ಹೋಗುತ್ತೀರಾ?

ಸರ್, ಇದಕ್ಕೆ ಅವರದೇ ಆದ ತಂತ್ರ ಬಳಸುತ್ತೇನೆ... ಅವರು ಹೇಗೆ ಬ್ಯಾಂಕಿಗೆ ಸುರಂಗ ಕೊರೆದರೋ ಹಾಗೆಯೇ ನಾವು ಸ್ಕೂಲಿಗೆ ಸುರಂಗ ಕೊರೆಸಿ ಒಳಗೆ ಹೋಗುತ್ತೇವೆ. ಈಗಾಗಲೇ ಅಲ್ಲಿ ಸುರಂಗ ಕೊರೆಯುವ ಕೆಲಸ ಶುರುವಾಗಿದೆ, ನಾಳೆ ಮಧ್ಯಾಹ್ನದ ವೇಳೆಗೆ ಸುರಂಗ ಮುಗಿಯುತ್ತದೆ... ನಾವು ನಾಳೆ ಸಂಜೆ ಸ್ಕೂಲಿನ ಒಳಗೆ ಹೋಗುತ್ತೇವೆ.

ಅಭಿ ಆದರೆ ನೀವಿಬ್ಬರೇ ಒಳಗೆ ಹೋಗುವುದು ಎಷ್ಟು safe?

ಸರ್ ಅದರ ಬಗ್ಗೆ ನೀವು ಚಿಂತಿಸಬೇಡಿ... ಈಗ ಅವನು ಮತ್ತೆ ಕಾಲ್ ಮಾಡಿದರೆ ಅವನು ಕೇಳಿದ ಹಣವನ್ನು ಸಿದ್ಧಪಡಿಸಲು ನಾಳೆ ಸಂಜೆಯ ವೇಳೆಯವರೆಗೆ ಕಾಲಾವಕಾಶಕ್ಕೆ ಒಪ್ಪಿಸುವುದು ದೊಡ್ಡ ಸಾಹಸ... ಒಂದಂತೂ ನಿಜ... ಅವನಿಗೆ ಪ್ರಾಣಕ್ಕಿಂತ ದುಡ್ಡೇ ಮುಖ್ಯ ಆದ್ದರಿಂದ ಅವನೇನೂ ಉಗ್ರರ ಹಾಗೆ ಆತ್ಮಾಹುತಿ ದಾಳಿ ಅಂತೂ ಮಾಡುವುದಿಲ್ಲ... ಹಾಗಾಗಿ ನಾವು ಎಷ್ಟು ಸಮಯ ಕೇಳಿದರೂ ಅವನು ಒಪ್ಪಿಕೊಳ್ಳಲೇ ಬೇಕು ಎನ್ನುವಷ್ಟರಲ್ಲಿ ಅವನು ಮತ್ತೆ ಕರೆ ಮಾಡಿದ್ದ...

ಅವನಿಗೆ ಹಣದ ವ್ಯವಸ್ಥೆ ನಡೆಯುತ್ತಿದೆ... ನಾಳೆ ಸಂಜೆಯ ವೇಳೆಗೆ ಹಣ ಸಿದ್ಧವಾಗುತ್ತದೆ ಎಂದು ಹೇಳಿದ್ದಕ್ಕೆ ಮೊದಲು ಎಗರಾಡಿದರೂ ನಂತರ ಸುಮ್ಮನೆ ಒಪ್ಪಿಕೊಂಡ.

ಕೂಡಲೇ ಅಭಿ ಮತ್ತು ಅವನ ವಿಶೇಷ ಟೀಂ ಸ್ಥಳಕ್ಕೆ ಆಗಮಿಸಿ sharp shooters ಗಳು ಎಲ್ಲೆಲ್ಲಿ ಇರಬೇಕು ಎಂದು ನಿರ್ಧಾರ ಮಾಡಿ ಅಲ್ಲೇ ಇದ್ದ ಒಂದು ಮನೆಯಲ್ಲಿ ತಂಗಿದರು.

ಮರುದಿನ ಮಧ್ಯಾಹ್ನದ ವೇಳೆಗೆ ಮೀಸಲು ಪೋಲೀಸ್ ಪಡೆ ಸ್ಕೂಲಿಗೆ ಒಂದು ೧೦೦ ಮೀಟರ್ ದೂರದಲ್ಲಿ ಸಿದ್ಧವಾಗಿ ನಿಂತಿತ್ತು. sharp shooters ಗಳು ತಮ್ಮ ತಮ್ಮ ಜಾಗದಲ್ಲಿ ಸಿದ್ಧರಾಗಿ ನಿಂತಿದ್ದರು. ಅಭಿ ಮತ್ತು ವಿಜಯ್ ಸುರಂಗದ ಮೂಲಕ ಸ್ಕೂಲಿನ ಪಾರ್ಕಿಂಗ್ ಲಾಟಿಗೆ ಬಂದಿದ್ದರು. ಕಟ್ಟಡ ನಾಲ್ಕು ಅಂತಸ್ತಿನ ಕಟ್ಟಡವಾಗಿದ್ದು ದುಷ್ಕರ್ಮಿಗಳು ಯಾವ ಮಹಡಿಯಲ್ಲಿದ್ದಾರೆ ಎಂಬುದು ತಿಳಿದಿರಲಿಲ್ಲ.. ವಿಜಯ್ ಗೆ ಕಟ್ಟಡ ಹಿಂಬದಿಯಲ್ಲಿರುವ ಮರದ ಸಹಾಯದಿಂದ ಮೊದಲ ಮಹಡಿಗೆ ಬರಲು ಹೇಳಿದ ಅಭಿಮನ್ಯು ಮೆಟ್ಟಿಲ ಮೂಲಕ ಮೊದಲ ಮಹಡಿಗೆ ಬಂದಾಗ ಮಹಡಿಯಲ್ಲಿ ಯಾರೂ ಕಾಣಲಿಲ್ಲ.. ಎರಡನೇ ಮಹಡಿಯ ಮೆಟ್ಟಿಲ ಬಳಿ ಒಬ್ಬ ಗನ್ ಹಿಡಿದು ನಿಂತಿದ್ದು ಕಂಡು ಬಂದು ಕೂಡಲೇ ತನ್ನ ಗನ್ನಿಗೆ ಸೈಲೆನ್ಸರ್ ಅಳವಡಿಸಿ ಗುರಿಯಿಟ್ಟು ಅವನ ಹಣೆಗೆ ಟ್ರಿಗರ್ ಒತ್ತಿದ ತಕ್ಷಣ ಅವನು ಯಾವುದೇ ಸದ್ದಿಲ್ಲದೇ ನೆಲಕ್ಕೊರಗಿದ್ದ.

ಅಲ್ಲಿಂದ ಮೇಲಕ್ಕೆ ಹತ್ತಿದ ಅಭಿ ಮತ್ತು ವಿಜಯ್ ಗೆ ಅಚ್ಚರಿ ಕಾದಿತ್ತು .... ಅಲ್ಲಿದ್ದ ಎಲ್ಲ ಮಹಡಿಗಳೂ ಖಾಲಿಯಾಗಿದ್ದವು...

ಅಷ್ಟರಲ್ಲಿ ಅಭಿ ಮೊಬೈಲ್ ರಿಂಗಾಯಿತು... ನೋಡಿದರೆ ಅವನೇ ಕರೆ ಮಾಡಿದ್ದ...

Mr. ಅಭಿಮನ್ಯು ನನ್ನನ್ನೇನು ಬಚ್ಚಾ ಎಂದು ತಿಳಿದುಕೊಂಡಿದ್ದೀಯ.... ನಿನ್ನ ಬುದ್ಧಿವಂತಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದುಕೊಂಡಿದ್ದೀಯ... ನೀನು ಹೇಗಾದರೂ ಮಾಡಿ ಸ್ಕೂಲಿಗೆ ಬಂದೇ ಬರುತ್ತೀಯ ಎಂದು ನಾನು ಮೊದಲೇ ಊಹಿಸಿದ್ದೆ... ಇನ್ನು ನಿನ್ನ ಯಾವುದೇ  ಸಾಗುವುದಿಲ್ಲ... ನೀನು ಮಾಡಿದ ತಪ್ಪಿಗೆ ನಿನಗೊಂದು ಬಹುಮಾನ ಕೊಡುತ್ತಿದ್ದೇನೆ... ಕೂಡಲೇ ಸ್ಕೂಲಿನ ಆಚೆ ಬಂದು ನಿನ್ನ  ತೆಗೆದುಕೋ ಎಂದು ಹೇಳಿ ಕರೆ ಕಟ್ ಮಾಡಿದ್ದ.

ಅಭಿಮನ್ಯುಗೆ ಕೂಡಲೇ ಏನೋ ಅನಾಹುತ ನಡೆದಿದೆ ಎಂದೆನಿಸಿ ಕೂಡಲೇ ಸ್ಕೂಲಿನ ಆಚೆ ಬಂದು ನೋಡಿದಾಗ ಅಲ್ಲೊಂದು ಮರದ ಬಾಕ್ಸ್ ಇದ್ದು ಅದರ ಬಳಿ ಬಂದು ನೋಡಿದಾಗ ಅದು ಲಾಕ್ ಆಗಿದ್ದು ಕಂಡು ಬಂದಿತು. ಕೂಡಲೇ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಅದರ ಬೇಗ ತೆಗೆದು ಒಳಗೆ ನೋಡಿದರೆ ಭಾರಿ ಗಾತ್ರದ ಬಾಂಬೊಂದು ಇರುವುದು ಕಂಡು ಬಂದು ಅದಾಗಲಿ ಚಾಲೂ ಆಗಿ ಇನ್ನು ಕೇವಲ ೬೦ ಸೆಕೆಂಡುಗಳು ಮಾತ್ರ ಬಾಕಿ ಇದ್ದದ್ದು ಗೊತ್ತಾಗಿ ಕೂಡಲೇ ಎಲ್ಲರನ್ನೂ ಕರೆದುಕೊಂಡು ಅಲ್ಲಿಂದ ಓದಲು ಶುರುಮಾಡಿ ಎಷ್ಟು ಸಾಧ್ಯವೋ ಅಷ್ಟು ದೂರ ಹೋಗುವಷ್ಟರಲ್ಲಿ ಇಡೀ ಭೂಮಿ ಬಿರಿಯುವಂತೆ ಶಭ್ದದಿಂದ ಬಾಂಬ್ ಸ್ಫೋಟಗೊಂಡಿತ್ತು. ಸುತ್ತಲಿನ ಪ್ರದೇಶವೆಲ್ಲ ಧೂಳಿನಲ್ಲಿ ಮುಳುಗಿ ಹೋಗಿತ್ತು.

ಮತ್ತೆ ಅಭಿಮನ್ಯುವಿನ ಮೊಬೈಲ್ ರಿಂಗಾಗಿ, ಅಭಿಮನ್ಯು ಹೇಗಿದೆ ನನ್ನ ಬಹುಮಾನ...?

ಯೂ ಬಾಸ್ಟರ್ಡ್...

ಕೂಲ್...ಕೂಲ್... ಅಭಿಮನ್ಯು  sample ಅಷ್ಟೇ. ಮತ್ತೆ ನೀನು ನಿನ್ನ ಚಾಣಾಕ್ಷತನವನ್ನು ತೋರಿಸಲು ಪ್ರಯತ್ನ ಪಟ್ಟರೆ... ಈಗಾಗಲೇ ನಗರದಾದ್ಯಂತ ಹತ್ತು ಕಡೆ ಬಾಂಬ್ ಗಳು ಸಿದ್ಧವಾಗಿದೆ. ಒಂದೊಂದು ಬಾಂಬ್ ಈಗ ಸ್ಫೋಟಗೊಂಡ ಬಾಂಬ್ಗಿಂತ ಹತ್ತು ಪಟ್ಟು ಶಕ್ತಿಶಾಲಿ ಬಾಂಬ್ಗಳು.. ಒಂದು ಬಾಂಬ್ ಸ್ಫೋಟಗೊಂಡರೆ ಕನಿಷ್ಠ ಪಕ್ಷ ಮೂರು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ನರಜೀವ ಕೂಡ ಉಳಿಯುವುದಿಲ್ಲ... ಸುಮ್ಮನೆ ನಾನು ಕೇಳಿದ ಹಣ ವ್ಯವಸ್ಥೆ ಮಾಡಿದರೆ ನನ್ನ ಪಾಡಿಗೆ ನಾನು ಹಣ ತೆಗೆದುಕೊಂಡು ಹೊರಟು ಹೋಗುತ್ತೇನೆ... ಇಲ್ಲವಾದರೆ....

ಅಭಿಮನ್ಯು ಸಿಟ್ಟಿನಿಂದ... ನೋಡು ನೀನು ಬಹಳ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದೀಯ...ಅದರ ಪರಿಣಾಮ ನಿನಗೆ ಗೊತ್ತಿಲ್ಲ... ಸರಿ... ನಿನಗೆ ಹಣ ಎಲ್ಲಿ ಮತ್ತೆ ಹೇಗೆ ತಲುಪಿಸಬೇಕು, ಮತ್ತೆ ವಿಮಾನ ಎಲ್ಲಿಗೆ ಬರಬೇಕು...

ಹ್ಹ...ಹ್ಹ... ಹ್ಹ.. ಅಭಿಮನ್ಯು ಯಾಕೆ ಮತ್ತೊಮ್ಮೆ ನಿನ್ನ ಚಾಣಾಕ್ಷತನ ಪ್ರದರ್ಶನ ಮಾಡಕ್ಕೆ ಯೋಚಿಸುತ್ತಿದ್ದೀಯ? ನೋಡು ನಿನ್ನ ತಪ್ಪಿಗೆ ನಿನಗೆ ಇನ್ನೊಂದು ಶಿಕ್ಷೆ... ಈಗ ನಿನ್ನ ಸರ್ಕಾರ ನನಗೆ ಕೊಡಬೇಕಾದ ಹಣ ೫೦೦ ಮಿಲಿಯನ್ ಅಲ್ಲ... ೮೦೦ ಮಿಲಿಯನ್ ಡಾಲರ್. ಮತ್ತು ಅದನ್ನು ಒಂದು ಸರಕು ಸಾಗಣೆ ಮಾಡುವ container ನಲ್ಲಿ ಇಟ್ಟು ಸಮುದ್ರದ ಮೂಲಕ ಶ್ರೀಲಂಕಾಗೆ ತಲುಪಿಸಬೇಕು. ಅಲ್ಲಿಂದ ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ. ಇದರಲ್ಲಿ ಏನಾದರೂ ನಿನ್ನ ಬುದ್ಧಿ ತೋರಿಸಲು ಪ್ರಯತ್ನ ಪಟ್ಟರೆ, ಅದರಿಂದಾಗುವ ಎಲ್ಲಾ ಪರಿಣಾಮಗಳಿಗೂ ನೀನೆ ಕಾರಣವಾಗುತ್ತೀಯ ಹುಷಾರ್ ಎಂದು ಕರೆ ಕಟ್ ಮಾಡಿದ.

ಅಭಿಮನ್ಯುಗೆ ಏನು ಮಾಡಬೇಕೋ ತೋಚಲಿಲ್ಲ... ವಿಜಯ್ ಗೆ ನಡೆದ ವಿಷಯವನ್ನು ತಿಳಿಸಿ ಮತ್ತೊಮ್ಮೆ ಗೃಹ ಮಂತ್ರಿಯನ್ನು ಭೇಟಿ ಮಾಡಲು ಸಂಪೂರ್ಣ ತಂಡದೊಂದಿಗೆ ಗೃಹ ಮಂತ್ರಿಗಳ ಕಚೇರಿಗೆ ತೆರಳಿದರು. ಅದಾಗಲೇ ಸ್ಫೋಟದ ವಿಷಯ ತಿಳಿದು ಮಂತ್ರಿಗಳು ಗಂಭೀರವಾಗಿದ್ದರು. ಇವರನ್ನು ಕಂಡ ಕೂಡಲೇ ನಾನು ನಿಮಗೆ  ಹೇಳಿರಲಿಲ್ಲವೇ... ಸುಮ್ಮನೆ ಸಾಹಸಕ್ಕೆ ಕೈ ಹಾಕಬೇಡಿ ಎಂದು... ಈಗ ನೋಡಿ ಸ್ಫೋಟದ ನಷ್ಟವನ್ನು ಯಾರು ಭರಿಸುತ್ತಾರೆ? ನಿಮ್ಮ ಅದೃಷ್ಟ ಯಾವುದೇ ಪ್ರಾಣ ಹಾನಿಯಾಗಿಲ್ಲ... ಹಾಗೊಂದು ವೇಳೆ ಆಗಿದ್ದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನೀವೇ ಹೊರಬೇಕಿತ್ತು Mr. ಅಭಿಮನ್ಯು.
ಸರ್... I am sorry... ನಾವು ದಾಳಿ ಮಾಡುತ್ತಿರುವ ವಿಷಯ ಇಲ್ಲಿ ನಮ್ಮಿಷ್ಟು ಜನಕ್ಕೆ ಮೂರನೇ ವ್ಯಕ್ತಿಗೆ ತಿಳಿದಿರಲಿಲ್ಲ... ಆದರೆ ಅದು ಹೇಗೆ ಅವನಿಗೆ ವಿಷಯ ಗೊತ್ತಾಯಿತೋ ತಿಳಿಯುತ್ತಿಲ್ಲ...

ಹಾಗೆಂದರೆ ಏನು ಅರ್ಥ... ನಾವೇ ಯಾರಾದರೂ ಅವರಿಗೆ ಮಾಹಿತಿ ಕೊಟ್ಟಿದ್ದೇವೆ ಎಂದಾ  ನಿಮ್ಮ ಮಾತಿನ ಅರ್ಥ?
ಸರ್ ಹಾಗಲ್ಲ... ಆದರೆ ವಿಷಯ ಹೇಗೋ ಸೋರಿಕೆಯಾಗಿದೆ... ಮೊದಲು ಅದನ್ನು ಪತ್ತೆ ಹಚ್ಚಬೇಕು, ಇಲ್ಲವಾದಲ್ಲಿ ನಾವು ಏನೇ ಮಾಡಿದರೂ ಅವನಿಗೆ ತಿಳಿಯುತ್ತದೆ..

ಹಾಗಿದ್ದರೆ ಈಗ ನೀವೇ ಹೇಳಿ ಏನು ಮಾಡಬೇಕೆಂದು?

ಸರ್, ಮೊದಲು ನಗರದೆಲ್ಲೆಡೆ ಯಾವ ಯಾವ ಸೂಕ್ಷ್ಮ ಪ್ರದೇಶಗಳು ಇದೆಯೋ ಅಲ್ಲೆಲ್ಲಾ ಬಾಂಬ್ ನಿಷ್ಕ್ರಿಯ ದಳದವರನ್ನು ಮತ್ತು ಶ್ವಾನ ದಳದವರನ್ನು ಕಳುಹಿಸಿ ಬಾಂಬ್ ಪತ್ತೆ ಹಚ್ಚುವ ಕಾರ್ಯ ನಡೆಯಬೇಕು..ಅದರ ಜೊತೆ ಜೊತೆಯಲ್ಲೇ ಮೊದಲು ಅವನು ಕೇಳಿದ ಹಣವನ್ನು ಸಿದ್ಧ ಪಡಿಸಿಕೊಳ್ಳಬೇಕು...

ಅಭಿಮನ್ಯು... ನಿಮ್ಮ ಮಾತಿನ ಅರ್ಥ ೮೦೦ ಮಿಲಿಯನ್ ಡಾಲರ್ ಸಿದ್ಧಪಡಿಸಿಕೊಳ್ಳಬೇಕ? ನಾವು ಮೊದಲೇ ಅವನ ಮಾತನ್ನು ಕೇಳಿದ್ದರೆ ಕೇವಲ ೫೦೦ ಮಿಲಿಯನ್ ಡಾಲರ್ ಹಣವನ್ನು ಕೊಡಬೇಕಿತ್ತು... ಈಗ ನೋಡಿ ನಿಮ್ಮ ಮಾತನ್ನು ಕೇಳಿ ೮೦೦ ಮಿಲಿಯನ್ ಡಾಲರ್ ಕೊಡುವಂತೆ ಆಯಿತು. ದಯವಿಟ್ಟು ನೀವು ಇನ್ಯಾವುದೇ ಕಾರ್ಯಾಚರಣೆ ಮಾಡುವುದು ಬೇಕಿಲ್ಲ, ಸುಮ್ಮನೆ ಅವನು ಹೇಗೆ ಹೇಳುತ್ತಾನೋ ಹಾಗೆ ಮಾಡಿ... ಇಲ್ಲವಾದರೆ ಅವನು ಮಕ್ಕಳಿಗೆ ಏನಾದರೂ ಮಾಡಿದರೆ ಯಾರು ಅವರ ತಂದೆ ತಾಯಿಗೆ ಜವಾಬು ಕೊಡುತ್ತಾರೆ...

ಸರಿ ಸರ್... ಹಾಗೆ ಆಗಲಿ ನೀವು ಹಣವನ್ನು ಸಿದ್ಧಪಡಿಸಿಕೊಳ್ಳಿ.... ನಾನು ಮುಂದಿನ ವ್ಯವಸ್ಥೆ ಮಾಡುತ್ತೇನೆ.

No comments:

Post a Comment