Wednesday, June 17, 2015

ಬ್ಲಾಸ್ಟ್ - 1

ಹಲೋ...ಹಲೋ... ಕಂಟ್ರೋಲ್ ರೂಂ... ಈಗಷ್ಟೇ ಬೆಂಗಳೂರು ಕೋಲಾರ ಹೈವೇ ಮಧ್ಯದಲ್ಲಿ ಬಸ್ಸೊಂದು ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆ ಎಷ್ಟಿತ್ತೆಂದರೆ ಎರಡು ಕಿಮೀ ವ್ಯಾಪ್ತಿಯವರೆಗೂ ಸ್ಫೋಟದ ಶಬ್ದ ಕೇಳಿದೆ. ಹೈವೇಯಲ್ಲಿ ಟ್ರಾಫಿಕ್ ಸಂಪೂರ್ಣ ಸ್ಥಗಿತಗೊಂಡಿದೆ. ಕೂಡಲೇ ಆಂಬುಲೆನ್ಸ್, ಫೈರ್ ಬ್ರಿಗೇಡ್ ಮತ್ತು ಒಂದಷ್ಟು ಪೋಲಿಸ್ ತುಕಡಿಗಳನ್ನು ಸ್ಥಳಕ್ಕೆ ಕಳುಹಿಸಿ...  

ಓವರ್...

ಮೆಸೇಜ್ ರಿಪೀಟ್...

ಈಗಷ್ಟೇ ಬೆಂಗಳೂರು ಕೋಲಾರ ಹೈವೇ ಮಧ್ಯದಲ್ಲಿ ಬಸ್ಸೊಂದು ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆ ಎಷ್ಟಿತ್ತೆಂದರೆ ಎರಡು ಕಿಮೀ ವ್ಯಾಪ್ತಿಯವರೆಗೂ ಸ್ಫೋಟದ ಶಬ್ದ ಕೇಳಿದೆ. ಹೈವೇಯಲ್ಲಿ ಟ್ರಾಫಿಕ್ ಸಂಪೂರ್ಣ ಸ್ಥಗಿತಗೊಂಡಿದೆ. ಕೂಡಲೇ ಆಂಬುಲೆನ್ಸ್, ಫೈರ್ ಬ್ರಿಗೇಡ್ ಮತ್ತು ಒಂದಷ್ಟು ಪೋಲಿಸ್ ತುಕಡಿಗಳನ್ನು ಸ್ಥಳಕ್ಕೆ ಕಳುಹಿಸಿ... ಓವರ್...

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರಿಗೆ ಮತ್ತು ಆಂಬುಲೆನ್ಸ್ ನವರಿಗೆ ಸ್ಫೋಟದ ತೀವ್ರತೆ ಭಯ ಹುಟ್ಟಿಸಿತ್ತು... ಬಸ್ಸಿನ ಹೊರಾಂಗಣದ ಒಂಚೂರು ಅವಶೇಷ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ... ಫೈರ್ ಬ್ರಿಗೇಡ್ ನವರಿಗೆ ಹೆಚ್ಚು ಕೆಲಸವಿರಲಿಲ್ಲ... ಸುತ್ತಲೂ ಬಯಲು ಪ್ರದೇಶವಾದ್ದರಿಂದ ಹೆಚ್ಚು ಆಸ್ತಿ ನಷ್ಟವಾಗಿರಲಿಲ್ಲ... ಆದರೆ... ಆದರೆ ಪ್ರಾಣ ಹಾನಿ?? ಎಷ್ಟು ಜನ ಪ್ರಯಾಣಿಕರಿದ್ದರು? ಎಷ್ಟು ಜನ ಸತ್ತಿದ್ದಾರೆ? ಸ್ಫೋಟದ ತೀವ್ರತೆಗೆ ಖಂಡಿತವಾಗಿ ಯಾರೂ ಉಳಿದಿರುವ ಸಾಧ್ಯತೆಯಂತೂ ಇಲ್ಲ... ಆದರೆ ಬಸ್ಸಿದ್ದ ಜಾಗದಲ್ಲಿ ಯಾವುದೇ ದೇಹ ಕಂಡು ಬರಲಿಲ್ಲ. ಸ್ಫೋಟದಲ್ಲಿ ಎಲ್ಲಾ ಚೂರು ಚೂರು ಆಗಿರಬಹುದೆಂದು ಸುತ್ತಲಿನ ಪ್ರದೇಶವನ್ನೆಲ್ಲ ಹುಡುಕಲು ಶುರುಮಾಡಿದರು.  ಕ್ರೇನ್ ಸಹಾಯದಿಂದ ಬಸ್ಸಿನ ಅವಶೇಷವನ್ನು ಪಕ್ಕಕ್ಕೆ ಎಳೆದುಹಾಕಿ ಸಂಚಾರಕ್ಕೆ ಮುಕ್ತಮಾಡಿಕೊಟ್ಟರು.

ಸುಮಾರು ನಾಲ್ಕು ಗಂಟೆ ಹುಡುಕಾಡಿದರೂ ಯಾವುದೇ ದೇಹದ ಸುಳಿವು ಪತ್ತೆಯಾಗಲಿಲ್ಲ. ಹಾಗಿದ್ದರೆ ಖಾಲಿ ಬಸ್ ಸ್ಫೋಟಗೊಂಡಿತೆ? ಯಾವುದೇ ಪ್ರತ್ಯಕ್ಷ ದರ್ಶಿಗಳಿಲ್ಲವೇ? ಸ್ಫೋಟಕ್ಕೆ ಕಾರಣವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿದ್ದರೂ ಯಾವುದೇ ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಗಲಿಲ್ಲ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವಿಶೇಷ ಅಧಿಕಾರಿ ಅಭಿಮನ್ಯು ಸುತ್ತಲಿನ ಸ್ಥಳವನ್ನು ಪರಿಶೀಲಿಸಿ ಮೊದಲು ಇದು ಯಾವ ಬಸ್ ಎಂದು ಪತ್ತೆ ಹಚ್ಚಿ... ಇದು ಸರ್ಕಾರಿ ಬಸ್ಸೋ ಅಥವಾ ಖಾಸಗಿ ಬಸ್ಸೋ..ಹಾಗೆಯೇ ಅಕ್ಕಪಕ್ಕದಲ್ಲಿ ಯಾವುದಾದರೂ ಬಸ್ ಡಿಪೋ ಇದೆಯಾ ಎಂದು ಪರಿಶೀಲಿಸಿ, ಹಾಗೆಯೇ ಕೋಲಾರದ ಈಚೆಗೆ ಯಾವುದಾದರೂ ಟೋಲ್ ಇದೆಯಾ ಎಂದು ಚೆಕ್ ಮಾಡಿ, ಒಂದು ವೇಳೆ ಇದ್ದರೆ ದಿವಸ ಬೆಳಿಗ್ಗೆಯಿಂದ ಯಾವ ಯಾವ ಬಸ್ ಬಂದಿದೆ ಎಂದು ಲಿಸ್ಟ್ ತೆಗೆದುಕೊಳ್ಳಿ ಹಾಗೆಯೇ ಕಡೆ ಇರುವ ಟೋಲ್ ನಲ್ಲಿ ಯಾವ ಯಾವ ಬಸ್ ಹೋಗಿದೆ ಎಂದು ಲಿಸ್ಟ್ ತೆಗೆದುಕೊಳ್ಳಿ....ಯಾವ ಬಸ್ ಮಿಸ್ ಆಗಿದೆಯೋ ಬಸ್ ಇದಾಗಿರುತ್ತದೆ. ಇವಿಷ್ಟು ದಾಖಲೆಗಳನ್ನು ಸಂಗ್ರಹಿಸಿದರೆ ಮುಂದಿನ ಕೆಲಸ ಸುಲಭ ಆಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಟರು.

ಅಭಿಮನ್ಯು ಇಲಾಖೆಯಲ್ಲಿ ಬಹಳ ಪವರ್ಫುಲ್ ಆಫೀಸರ್ ಎಂದು ಹೆಸರು ಮಾಡಿದ್ದ ವ್ಯಕ್ತಿ. ಬಹಳ ಸಣ್ಣ ವಯಸಿನಲ್ಲೇ ಉನ್ನತ ಹುದ್ದೆ ಅಲಂಕರಿಸಿದ್ದ. ತನ್ನ ಚಾಣಾಕ್ಷತನದಿಂದ ಬಹಳಷ್ಟು ಜಟಿಲವಾದ ಕೇಸ್ಗಳನ್ನೂ ಲೀಲಾಜಾಲವಾಗಿ ಭೇದಿಸಿ ಕ್ರಿಮಿನಲ್ ಗಳಿಗೆ ಟೆರರ್ ಎನಿಸಿದ್ದ ವ್ಯಕ್ತಿ. ಇಂಥಹ ಅದೆಷ್ಟೋ ಕೇಸ್ ಗಳನ್ನು ಹ್ಯಾಂಡಲ್ ಮಾಡಿದ್ದ ಅಭಿಮನ್ಯುಗೆ ಇದೊಂದು ಸಾಧಾರಣ ಕೇಸ್ ಎನಿಸಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಯಾವುದೋ ಕೇಸ್ ಕಡಗತಳನ್ನು ಪರಿಶೀಲಿಸತೊಡಗಿದ. ಸ್ಫೋಟ ನಡೆದು ಎರಡು ದಿನಗಳ ನಂತರ ಅಭಿಮನ್ಯು ಕೇಳಿದ್ದ ಅಷ್ಟೂ ಮಾಹಿತಿ ಅಭಿಮನ್ಯು ಬಳಿ ಬಂದು ತಲುಪಿತು. ಮಾಹಿತಿಗಳನ್ನು ತಲುಪಿಸಿದ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಅಭಿಮನ್ಯುವನ್ನು ಕುರಿತು, ಸರ್ ನಾವಂದುಕೊಂಡಷ್ಟು ಸಾಧಾರಣ ಕೇಸ್ ಅಲ್ಲ ಅನಿಸುತ್ತಿದೆ ಇದು....ಇದು ಆಕಸ್ಮಿಕವಾಗಿ ಸಂಭವಿಸಿರೋ ಸ್ಫೋಟದಂತೆ ಕಾಣುತ್ತಿಲ್ಲ... ಬದಲಿಗೆ ಯಾರೋ ಬೇಕೆಂದೇ ಸ್ಫೋಟಿಸಿದ್ದಾರೆ ಎನಿಸುತ್ತಿದೆ. ಅಂದ ಹಾಗೆ ಬಸ್ ಬಂದು ಸರ್ಕಾರಿ ಬಸ್ಸೆಂದು ತಿಳಿದು ಬಂದಿದೆ. ಆದರೆ ಟೋಲ್ ನಲ್ಲಿ ಎಂಟ್ರಿಗೂ ಸ್ಫೋಟದ ದಿನಾಂಕಕ್ಕೂ ತಾಳೆ ಆಗುತ್ತಿಲ್ಲ...

ಅಭಿಮನ್ಯು ಓದುತ್ತಿದ್ದ ಕಡತವನ್ನು ಪಕ್ಕದಲ್ಲಿಟ್ಟು ವಿಜಯ್ ಹೇಳುತ್ತಿದ್ದ ವಿಷಯ ಕೇಳುವಂತೆ ಮಾಡಿತ್ತು ವಿಜಯ ಹೇಳಿದ ಕೊನೆಯ ಸಾಲು.... ಏನಂದ್ರಿ ವಿಜಯ್.... ಟೋಲ್ ಎಂಟ್ರಿಗೂ ಸ್ಫೋಟದ ದಿನಾಂಕಕ್ಕೂ ತಾಳೆ ಆಗುತ್ತಿಲ್ವ?

ಹೌದು ಸರ್, ಬಸ್ ಬೆಂಗಳೂರಿಂದ ಹೊರಟು ಹೊಸಕೋಟೆ ಬಳಿ ಟೋಲ್ ದಾಟಿರುವುದು ೨೧ನೆ ತಾರೀಖು ಮಧ್ಯಾಹ್ನ ಗಂಟೆಗೆ. ಮತ್ತೆ ಬಸ್ ಆ ಕಡೆ ಟೋಲ್ ದಾಟೇ ಇಲ್ಲ!! ಸ್ಫೋಟ ಸಂಭವಿಸಿರುವುದು ನೆನ್ನೆ ಅಂದರೆ ೨೪ನೆ ತಾರೀಖು ಸಂಜೆ ಏಳು ಗಂಟೆ ಸಮಯದಲ್ಲಿ. ಅಂದರೆ ಮೂರು ದಿವಸ ಆ ಬಸ್ ಆ ಮಧ್ಯದಲ್ಲೇ ಎಲ್ಲೋ ಉಳಿದಿದೆ. ಇವತ್ತು ನಮ್ಮ ತಂಡ ಆ ಸುತ್ತಮುತ್ತಲೂ ಯಾವುದಾದರೂ ದೇಹ ಸಿಗುತ್ತದೇನೋ ಎಂದು ಹುಡುಕಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ.
ವಿಜಯ್ ಕುಮಾರ್ ೨೧ನೆ ತಾರೀಖು ಬಸ್ ಈ ಕಡೆ ಟೋಲ್ ದಾಟಿದೆ ಅಂದ್ರಲ್ಲ, ಅದು ಯಾವ ರೂಟ್ ಬಸ್ಸು ಮತ್ತು ಅದರಲ್ಲಿ ಪ್ರಯಾಣಿಕರು ಏನಾದರೂ ಇದ್ರಾ? ಡ್ರೈವರ್ ಎನಾದ? ಮತ್ತು ಈ ಮೂರು ದಿವಸ ಬಸ್ ಎಲ್ಲಿತ್ತು? ಇದೆಲ್ಲ ನೋಡ್ತಿದ್ರೆ.... ಈ ಸ್ಫೋಟದ ಹಿಂದೆ ಯಾವುದೋ ದೊಡ್ಡ ರಹಸ್ಯ ಇದ್ದ ಹಾಗಿದೆ... ಮೊದಲು ೨೧ನೇ ತಾರೀಖು ಬಸ್ ಡ್ರೈವ್ ಮಾಡಿಕೊಂಡು ಹೋಗಿದ್ದು ಯಾರು ಎಂದು ಕಂಡು ಹಿಡಿಯಬೇಕು... ಆಗ ನಮಗೆ ಮುಂದಿನ ಕೆಲಸ ಸುಲಭವಾಗುತ್ತದೆ. ಟೋಲ್ ನಲ್ಲಿ ದಾಖಲಾಗಿರುವ ಬಸ್ ನಂಬರನ್ನು ಇಲ್ಲಿ ಡಿಪೋನಲ್ಲಿ ಚೆಕ್ ಮಾಡಿ ಡ್ರೈವರ್ ಯಾರೆಂದು ತಿಳಿದುಕೊಳ್ಳಿ, ಮತ್ತು ಅವನನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಕರೆದು ತನ್ನಿ.

ಒಂದು ದಿನದ ನಂತರ ಮತ್ತೆ ಬಂದ ವಿಜಯ್ ಕುಮಾರ್, ಸರ್... ಟೋಲ್ ನಲ್ಲಿ ರಿಜಿಸ್ಟರ್ ಆಗಿರುವ ನಂಬರ್ ಫೇಕ್ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ನಂಬರಿನ ಯಾವುದೇ ಬಸ್ ಇಲ್ಲ. ನಂತರ ಟೋಲ್  ನಲ್ಲಿನ CC ಕ್ಯಾಮೆರಾದಲ್ಲಿ ಚೆಕ್ ಮಾಡಿದಾಗ ಬಸ್ಸಲ್ಲಿ ಡ್ರೈವರ್ ಮತ್ತು ಇನ್ನೊಬ್ಬ ಬಿಟ್ಟರೆ ಬೇರ್ಯಾರೂ ಕಾಣುತ್ತಿಲ್ಲ. ಡ್ರೈವರ್ ಸಹ ಸರ್ಕಾರಿ ಬಸ್ ಡ್ರೈವರ್ ಅಲ್ಲ ಎಂದು ತಿಳಿದು ಬಂದಿದೆ. ಇದೆಲ್ಲಾ ನೋಡಿದರೆ ಬಹಳ ಗೊಂದಲಮಯವಾಗಿದೆ. ಒಂದೂ ತಿಳಿಯುತ್ತಿಲ್ಲ...
ಅಭಿಮನ್ಯು ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಸ್ವಲ್ಪ ಹೊತ್ತು ಯೋಚಿಸಿ...ವಿಜಯ್ ಇದೇನೋ ಮಾಸ್ಟರ್ ಪ್ಲಾನ್ ಎನಿಸುತ್ತಿದೆ.... ಕೂಡಲೇ ಎರಡು ತಂಡ ತಯಾರು ಮಾಡುತ್ತೇನೆ, ಒಂದು ತಂಡವನ್ನು ನೀವು ಲೀಡ್ ಮಾಡಿ, ಇನ್ನೊಂದು ತಂಡವನ್ನು ನಾನು ಲೀಡ್ ಮಾಡುತ್ತೇನೆ. ನೀವು ಸಿಟಿಯಲ್ಲಿ ಯಾವುದಾದರೂ ಸ್ಟೇಷನ್ ನಲ್ಲಿ ಬಸ್ ಕಳುವಾಗಿದೆ ಎಂದು ಕಂಪ್ಲೇಂಟ್ ಬಂದಿದೆಯ ಎಂದು ಚೆಕ್ ಮಾಡಿ.... ನಾನು ಹೊಸಕೋಟೆ ಕೋಲಾರ್ ಮಧ್ಯದಲ್ಲಿ ಎಲ್ಲಾದರೂ ಕ್ಯಾಂಪ್ ಮಾಡಿ ಬಸ್ಸಿನ ಬಗ್ಗೆ ತನಿಖೆ ನಡೆಸುತ್ತೇನೆ. ಹಾಗೆ ಡ್ರೈವರ್ ಫೋಟೋ ಎಲ್ಲಾ ಸ್ಟೇಷನ್ ಗೆ ಫ್ಯಾಕ್ಸ್ ಮಾಡಿ ಪತ್ತೆ ಆದರೆ ಕೂಡಲೇ ಮೆಸೇಜ್ ಮಾಡಿ.. Ok...

ವಿಜಯ್ ಅಂದ ಹಾಗೇ, ಒಮ್ಮೆ ಇಂಟೆಲಿಜೆನ್ಸ್ ಅವರನ್ನೂ ಸಂಪರ್ಕಿಸಿ ನೋಡಿ, ಯಾವುದಾದರೂ ಟೆರರಿಸ್ಟ್ ಸಂಘಟನೆ ಇಂದ ಯಾವುದಾದರೂ ಬೆದರಿಕೆ ಬಂದಿದೆಯ ಎಂದು... ಏಕೆಂದರೆ ಇತ್ತೀಚಿಗೆ ಅದೊಂದು ತಲೆನೋವು ಬೇರೆ ಶುರುವಾಗಿದೆಯಲ್ಲ...ಆದರೆ ಅವರು ಬಸ್ ಸ್ಫೋಟಗೊಂಡಿರುವ ಸ್ಥಳ ನೋಡಿದರೆ ಹಾಗೆ ಆಗಿರುವುದು ಅನುಮಾನ. ಯಾವುದಕ್ಕೂ ಒಂದು ಸಲ ಖಚಿತಪಡಿಸಿಕೊಳ್ಳೋಣ... ಸರಿ ನೀವಿನ್ನು ಹೊರಡಿ... ಆದಷ್ಟು ಬೇಗ ಇದನ್ನು ಬಗೆಹರಿಸಬೇಕು. ಆಗಲೇ ನೆನ್ನೆ ಹೋಂ ಮಿನಿಸ್ಟರ್ ಕರೆ ಮಾಡಿ ಒಂದು ವಾರದ ಒಳಗೆ ರಿಪೋರ್ಟ್ ಬೇಕು ಎಂದು ಹೇಳಿದ್ದಾರೆ.

ಅಯ್ಯೋ ಬಿಡಿ ಸರ್... ಅವರಿಗೇನು ಹೇಳಿ ಬಿಡುತ್ತಾರೆ... ನಮ್ಮ ಕಷ್ಟ ಅವರಿಗೇನು ಗೊತ್ತು...

ಅದು ಸರಿ ವಿಜಯ್... ಏನು ಮಾಡುವುದು... ನಮ್ಮ ಕೆಲಸ ನಾವು ಮಾಡಲೇಬೇಕಲ್ಲವೇ...

No comments:

Post a Comment