Wednesday, June 24, 2015

ಬ್ಲಾಸ್ಟ್ - 4



ಸುರಂಗ ಕೊರೆದಿದ್ದ ಮನೆಯ ಮಾಲೀಕನ ಸುಳಿವು ಸಿಕ್ಕ ಕೂಡಲೇ ಅವನನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಆರು ತಿಂಗಳ ಹಿಂದೆ ಇಬ್ಬರು ವಿದೇಶೀಯರು ಬಂದು ಬಾಡಿಗೆಗೆ ನೆಲೆಸಿದ್ದರು, ದರೋಡೆ ನಡೆಯುವ ಒಂದು ವಾರದ ಮುಂಚೆಯಷ್ಟೇ ಅವರು ಖಾಲಿ ಮಾಡಿಕೊಂಡು ಹೋಗಿದ್ದಾಗಿ, ಅಂದಿನಿಂದ ಮನೆ ಖಾಲಿ ಇತ್ತು ಎಂದು ತಿಳಿಸಿದ.

ವಿದೇಶೀಯರು ಎಂಬುದನ್ನು ಕೇಳಿ ಅಭಿಮನ್ಯು ಮತ್ತು ವಿಜಯ್ ಇಬ್ಬರೂ ಆಶ್ಚರ್ಯಚಕಿತರಾಗಿ ಯಾವ ದೇಶದವರು ಮತ್ತು ಯಾವ ಆಧಾರದ ಮೇಲೆ ಅವರಿಗೆ ನೀವು ಬಾಡಿಗೆ ಕೊಟ್ಟಿರಿ ಎಂದು ಕೇಳಿದಾಗ ಮನೆ ಮಾಲೀಕ ತಲೆ ತಗ್ಗಿಸಿ ಮಾಮೂಲಿಗಿಂತ ಹೆಚ್ಚಿನ ಬಾಡಿಗೆಯ ಆಸೆಗೆ ಅವರಿಗೆ ಬಾಡಿಗೆ ಕೊಟ್ಟೆ, ಅವರು ನೀಗ್ರೋಗಳು.... ನೈಜೀರಿಯಾದಿಂದ ಬಂದಿದ್ದಾಗಿ ಹೇಳಿಕೊಂಡಿದ್ದರು.

ವಿಜಯ್ ಇದ್ಯಾವುದೋ ಅಂತರಾಷ್ಟ್ರೀಯ ದರೋಡೆಕೋರರ ತಂಡ ಇದ್ದ ಹಾಗಿದೆ. ನೋಡಿ ಯಾವುದೇ ಅನುಮಾನ ಬರದ ಹಾಗೆ ಒಂದು ವಾರದ ಮುಂಚೆಯೇ ಮನೆಯನ್ನು ಖಾಲಿ ಮಾಡಿದ್ದಾರೆ.

ಅಲ್ರೀ ಅವರು ಮನೆ ಖಾಲಿ ಮಾಡಿದ ಮೇಲೆ ನೀವು ಮನೆಯ ಒಳಗೆ ಎಲ್ಲಾ ನೋಡಿದ್ದೀರಾ ಎಂದು ಮಾಲೀಕನನ್ನು ಕೇಳಿದಾಗ, ಹಾ ಸರ್ ಅವರು ಮನೆ ಖಾಲಿ ಮಾಡಿದ ಕೂಡಲೇ ಒಳಗೆ ಹೋಗಿ ಮಾಮೂಲಿನಂತೆ ಎಲ್ಲಾ ಪರೀಕ್ಷಿಸಿದ್ದೆ... ಆಗ ಸುರಂಗ ಇರಲಿಲ್ಲ. ಅದಾದ ಮೇಲೆ ನಾನು ಒಂದು ವಾರ ನಮ್ಮ ಸ್ವಂತ ಊರಿಗೆ ಒಂದು ಮದುವೆ ಸಲುವಾಗಿ ಹೊರಟು ಹೋಗಿದ್ದೆ...ಮೊನ್ನೆಯಷ್ಟೇ ನಾನು ಬಂದಿದ್ದು...

ಏನು ಊರಿಗೆ ಹೋಗಿದ್ರಾ? ಅಂದ ಹಾಗೆ ನೀವು ಊರಿಗೆ ಹೋಗುವ ವಿಷಯ ನೀಗ್ರೋಗಳಿಗೆ ಹೇಳಿದ್ರಾ?

ಹಾ ಹೌದು ಸರ್, ಅವರು ಹೊರಡುವ ಮುನ್ನ ನನಗೆ ಹೇಳಿದ್ರು... ಅವರಿಗೆ ಮತ್ತೆ ಮನೆ ಬೇಕಾಗುವ ಸಾಧ್ಯತೆ ಇದೆ... ಒಂದು ವಾರದ ಮಟ್ಟಿಗೆ ಯಾರಿಗೂ ಮನೆ ಕೊಡಬೇಡಿ, ವಾರದ ನಂತರ ನಮಗೆ ಮನೆ ಬೇಡದಿದ್ದರೆ ತಿಳಿಸುವುದಾಗಿ ಹೇಳಿದ್ದರು. ಆಗ ನಾನೇ ಅವರಿಗೆ ಹೀಗೆ ಒಂದು ವಾರದ ಮಟ್ಟಿಗೆ ನಾನೂ ಸಹ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿದ್ದೆ ....

ವಿಜಯ್, ಬಹುಶಃ ಅವರು ಮನೆ ಖಾಲಿ ಮಾಡುವ ಮುನ್ನವೇ ನಕಲಿ ಕೀ ಮಾಡಿಸಿಕೊಂಡಿದ್ದಾರೆ... ಅದರಂತೆಯೇ ಮರುದಿನ ಮತ್ತೆ ಮನೆಗೆ ಬಂದು ಸುರಂಗ ಕೊರೆಯಲು ಶುರುಮಾಡಿದ್ದಾರೆ, ವಾರದೊಳಗೆ ಸುರಂಗ ಕೊರೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ... ಆದರೆ ಅವರು ಅಷ್ಟು ಬೇಗ ದೇಶ ಬಿಟ್ಟು ಪರಾರಿಯಾಗಲಂತೂ ಸಾಧ್ಯವಿಲ್ಲ. ಏಕೆಂದರೆ ದರೋಡೆ ಮಾಡಿರುವ ಹಣ ನಗದು ರೂಪದಲ್ಲಿರುವುದರಿಂದ ಅವರು ಆಚೆ ಹೋಗಿರಲು ಸಾಧ್ಯವಿಲ್ಲ. ಇನ್ನು ನಗದನ್ನು ಅವರು ಪರಿವರ್ತಿಸಬೇಕೆಂದರೆ.... ವಿಜಯ್... ಕೂಡಲೇ ಎಲ್ಲಾ ಬ್ಯಾಂಕುಗಳಿಗೂ ಸಂದೇಶ ರವಾನೆ ಆಗುವಂತೆ ನೋಡಿ... ಏನೆಂದರೆ ಯಾವುದೇ ದೊಡ್ಡ ಮೊತ್ತ ಅಂದರೆ ಕೋಟಿಯ ಮೇಲೆ ಯಾವುದೇ ಮೊತ್ತಕ್ಕೆ ಡಿಡಿ ಯನ್ನು ಕೊಡಬಾರದೆಂದು ಅದರಲ್ಲೂ ವಿದೇಶೀಯರಿಗೆ ಕೊಡಬೇಡಿ ಎಂದು ಹೇಳಿ... ಹಾಗೆಯೇ ಎರಡು ಮೂರು ದಿನದಲ್ಲಿ ನಗರದಿಂದ ಯಾರಾದರೂ ನೈಜೀರಿಯಾಗೆ ಪ್ರಯಾಣ ಬೆಳೆಸಿದ್ದಾರ ಎಂದು ಪತ್ತೆ ಮಾಡಿ.... ಈಗ ಕೇಸಿಗೆ ಒಂದು ಮಹತ್ತರ ತಿರುವು ಸಿಕ್ಕ ಹಾಗಿದೆ....ನೋಡೋಣ ಇದರ ಹಿಂದೆ ಇನ್ನೆಷ್ಟು ದಿನ ಅಲೆಯಬೇಕೋ.... ನಾನು ಕೂಡಲೇ ವಿಷಯವನ್ನು IG ಗೆ ಕರೆ ಮಾಡಿ ತಿಳಿಸುತ್ತೇನೆ ಎಂದು ಫೋನ್ ತೆಗೆಯಲು ಮುಂದಾದಾಗ...

ಅಲ್ಲ ಸರ್... ಅವರೇ ಮಾಡಿದ್ದಾರೆ ಎಂದು ನಮ್ಮ ಬಳಿ ಯಾವುದೇ ಆಧಾರವಿಲ್ಲವಲ್ಲ... ಅವರು ಒಂದು ವಾರದ ಮುಂಚೆ ಮನೆ ಖಾಲಿ ಮಾಡಿದ್ದಾರೆ ಎಂಬ ಒಂದೇ ಒಂದು ಸಂಶಯದಿಂದ ಅವರೇ ದರೋಡೆ ಮಾಡಿದ್ದಾರೆ ಎಂದು ನಿರ್ಧಾರ ಮಾಡುವುದು ಹೇಗೆ ಸರಿ... ಒಂದು ವೇಳೆ ಅವರು ಮಾಡದೆ ಬೇರೆ ಯಾರಾದರೂ ಮಾಡಿದ್ದರೆ... ಎಂದು ವಿಜಯ್ ಪ್ರಶ್ನಿಸಿದರು...

ವಿಜಯ್ ನಿಮ್ಮ ಮಾತು ನಿಜ...ಆದರೆ ನನಗೇಕೋ ಅವರೇ ಕೆಲಸ ಮಾಡಿದ್ದಾರೆ ಎಂದು ಬಲವಾದ ನಂಬಿಕೆ ಇದೆ... ಇರಲಿ ಒಂದು ಮಾಹಿತಿಯಂತೂ ಕೊಟ್ಟಿರೋಣ... ನಾವು ಸುಮ್ಮನೆ ಕುಳಿತಿಲ್ಲ ಎಂಬುದಾದರೂ ತಿಳಿಯಲಿ ಎಂದು IGಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದಾಗ, ಆದಷ್ಟು ಬೇಗ ಅವರನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ ಎಂದು ಕರೆ ಕಟ್ ಮಾಡಿದರು.
ಮರುದಿನ ಬೆಳಿಗ್ಗೆ ಅಭಿಮನ್ಯು ಪೇಪರ್ ಓದುತ್ತಿದ್ದಾಗ ಸುದ್ದಿಯೊಂದು ಕಣ್ಣಿಗೆ ಬಿದ್ದಿತು. ಕೋಲಾರದ ಅಕ್ಕಪಕ್ಕದಲ್ಲಿರುವ ಹಳ್ಳಿಗಳಲ್ಲಿ ವಿಚಿತ್ರವಾದ ಸೋಂಕು ತಗಲಿ ಅನೇಕ ಮಂದಿ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಮಾರಣಾಂತಿಕ ಖಾಯಿಲೆಗೆ ಆರು ಮಂದಿ ಮರಣ ಹೊಂದಿದ್ದಾರೆ. ಇಪ್ಪತ್ತು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದಿನೇ ದಿನೇ ರೋಗಗ್ರಸ್ಥರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಇದಕ್ಕೆ ನಿಖರವಾದ ಕಾರಣ ಏನೆಂದು ಪತ್ತೆ ಹಚ್ಚುವಲ್ಲಿ ವೈದ್ಯರು ವಿಫಲರಾಗಿದ್ದಾರೆ. ಸೋಂಕು ತಗುಲಿದ ಎರಡನೇ ದಿನದಿಂದ ರೋಗಿಯ ಅಂಗಗಳು ಒಂದೊಂದೇ ನಿಷ್ಕ್ರಿಯವಾಗುತ್ತ ಹೋಗುತ್ತದೆ. ರೋಗಿಯ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ ಹೆಚ್ಚು ದಿನ ಬದುಕುತ್ತಿದ್ದಾನೆ, ಇಲ್ಲವಾದಲ್ಲಿ ವಾರದೊಳಗೆ ಸಾವನ್ನಪ್ಪುತ್ತಿದ್ದಾನೆ. ಇದುವರೆಗೂ ಖಾಯಿಲೆಗೆ ಯಾವುದೇ ಔಷಧಿ ಇಲ್ಲ... ವೈದ್ಯಲೋಕಕ್ಕೆ ಇದೊಂದು ಸವಾಲಾಗಿ ಪರಿಣಮಿಸಿದೆ.

ಸುದ್ದಿಯನ್ನು ಓದಿದ ಅಭಿಮನ್ಯುಗೆ ಛೇ ಇದೆಂಥ ಖಾಯಿಲೆ ಇದು... ಅದೆಲ್ಲಿಂದ ಹುಟ್ಟಿಕೊಳ್ಳುತ್ತವೋ ಹೊಸ ಹೊಸ ಖಾಯಿಲೆಗಳು ಎಂದುಕೊಂಡು ಪೇಪರ್ ಮಡಚಿಟ್ಟು ಸ್ನಾನ ಮಾಡಲು ಮುಂದಾದಾಗ ಮನೆಯ ಬಾಗಿಲಿನ ಬೆಲ್ ಸದ್ದಾಗಿದ್ದು ನೋಡಿ ಬಾಗಿಲು ತೆರೆದರೆ ಎದುರಿಗೆ ಪತ್ನಿ ರಶ್ಮಿ ಮತ್ತು ಮಗಳು ಸೌಂದರ್ಯ ನಿಂತಿದ್ದರು...ಓಹೋ ಬನ್ನಿ ಬನ್ನಿ ಏನು ಇಷ್ಟು ಬೇಗ ತವರು ಮನೆ ಪ್ರಯಾಣ ಮುಗಿದು ಹೋಯಿತ ಎಂದು ಲಗೇಜ್ ತೆಗೆದುಕೊಂಡು ಒಳಗೆ ಬರಮಾಡಿಕೊಂಡು ತಾನೇ ಹೋಗಿ ಕಾಫಿ ಮಾಡಿ ತಂದು ಪತ್ನಿಯ ಕೈಗೆ ಕೊಟ್ಟು ಮಗಳನ್ನು ಕರೆದುಕೊಂಡು ಮುದ್ದಾಡುತ್ತಿದ್ದ.

ಏನು ಸಾಹೇಬರು... ನಾವು ಊರಿಗೆ ಹೋಗೋದೇ ಕಾಯುತ್ತಿದ್ದ ಹಾಗಿತ್ತು ಅನಿಸುತ್ತಿದೆ, ಊರಿಗೆ ಹೋದಾಗಿನಿಂದ ಒಂದೇ ಒಂದು ಸಲ ಫೋನ್ ಮಾಡಿದ್ದು, ಆಮೇಲೆ ಫೋನ್ ಇಲ್ಲ ಕಥೆ ಇಲ್ಲ...

ಅಯ್ಯೋ ರಶ್ಮಿ ನನ್ನ ಕೆಲಸದ ಬಗ್ಗೆ ಗೊತ್ತೇ ಇದೆಯಲ್ಲ ನಿನಗೆ, ನೀನು ಊರಿಗೆ ಹೊರಟ ಮರುದಿನವೇ ಇಲ್ಲೊಂದು ದರೋಡೆ ಕೇಸ್ ಬಂತು, ನೀನು ಹೊರಡುವಾಗ ಇದ್ದ ಬಸ್ ಸ್ಫೋಟದ ಕೇಸನ್ನು ಬಿಟ್ಟು ಕೂಡಲೇ ದರೋಡೆ ಕೇಸ್ ತೆಗೆದುಕೊಳ್ಳಬೇಕು ಎಂದು ಹೇಳಿದರು... ತಕ್ಷಣ ಅದರಲ್ಲಿ ಬ್ಯುಸಿ ಆಗಿಬಿಟ್ಟೆ... ಇನ್ನೂ ಅದರಲ್ಲಿ ಒಂದೇ ಒಂದು ಸುಳಿವು ಸಹ ಸಿಕ್ಕಿಲ್ಲ... ಅದೇ ತಲೆ ಬಿಸಿಯಲ್ಲಿ ಫೋನ್ ಮಾಡಲು ಆಗಿಲ್ಲ ಅಷ್ಟೇ...

ಹಾ ಹೌದು ರೀ, ಅದ್ಯಾವುದೋ ಹೊಸಕೋಟೆ ಬ್ಯಾಂಕ್ ಆಲ್ವಾ ದರೋಡೆ ಆಗಿದ್ದು...ಹೌದು, ಅಂದ ಹಾಗೆ ಬಸ್ ಸ್ಫೋಟ ಕೂಡ ಅದೇ ರಸ್ತೆಯಲ್ಲಿ ಆಲ್ವಾ ಆಗಿದ್ದು... ಕೇಸ್ ಏನಾಯ್ತು? ಅದರಿಂದ ಏನೂ ಮಾಹಿತಿ ಸಿಗಲಿಲ್ವಾ...

ಇಲ್ಲ ರಶ್ಮಿ ಕೇಸ್ ನಲ್ಲೂ ಏನೂ ಮಾಹಿತಿ ಸಿಕ್ಕಿಲ್ಲ... ಕೇಸಿನಲ್ಲೂ ಯಾವುದೇ ನಿಖರವಾದ ಮಾಹಿತಿ ಸಿಕ್ಕಿಲ್ಲ....

ಅಲ್ರೀ, ಅದಲ್ದೇ ಇವಾಗ ಅದ್ಯಾವುದೋ ಹೊಸ ಖಾಯಿಲೆ ಬೇರೆ ಶುರುವಾಗಿದೆಯಂತೆ ಕೋಲಾರದ ಬಳಿ... ಇವತ್ತು ಬೆಳಿಗ್ಗೆ ಆಟೋದವನು ಹೇಳ್ತಿದ್ದ, ಏನೋ ಬೆಂಗಳೂರಿಗೂ ಖಾಯಿಲೆ ಹಬ್ಬುವ ಸಾಧ್ಯತೆ ಇದೆ ಎಂದು... ಹೌದೇನ್ರಿ? ಅರೇ ... ನೋಡ್ರೀ ಖಾಯಿಲೆ ಕೂಡ ಅದೇ ರಸ್ತೆಯಲ್ಲಿ ಶುರುವಾಗಿದೆ... ಏನು ವಿಚಿತ್ರನೋ ಏನೋ ಎಲ್ಲಾ ಕಾಕತಾಳೀಯ ಅನ್ಸತ್ತೆ ಎಂದು ಮಗಳನ್ನು ಕರೆದುಕೊಂಡು ಒಳಗೆ ಹೋದಳು...

ರಶ್ಮಿ ಹೇಳಿದ ಮಾತು ಅಭಿಮನ್ಯುವಿನ ತಲೆ ಹೊಕ್ಕಿತ್ತು... ಬಸ್ ಸ್ಫೋಟ, ಬ್ಯಾಂಕ್ ದರೋಡೆ, ನೈಜೀರಿಯಾ, ಖಾಯಿಲೆ... ಖಾಯಿಲೆ, ನೈಜೀರಿಯಾ, ಸ್ಫೋಟ, ದರೋಡೆ... ಏನಾದರೂ ಸಂಬಂಧ ಇದೆಯಾ.... ಎಲ್ಲೋ ಎಲ್ಲವೂ ಒಂದಕ್ಕೊಂದು ಸಂಬಂಧ ಬೆಸೆದುಕೊಳ್ಳುತ್ತಿರುವಂತೆ ಭಾಸವಾಗಿ ಕೂಡಲೇ ವಿಜಯ್ ಗೆ ಕರೆ ಮಾಡಿ, ವಿಜಯ್ ಬಸ್ ಸ್ಫೋಟದ ಕೇಸ್ ಯಾರು ತನಿಖೆ ನಡೆಸುತ್ತಿರುವುದು ತಿಳಿದುಕೊಂಡು ಕೂಡಲೇ ಅವರಿಗೆ ನನ್ನನ್ನು ಸಂಪರ್ಕಿಸುವಂತೆ ಹೇಳಿ ಮತ್ತು ನೀವು ಆದಷ್ಟು ಬೇಗ ಬ್ಯಾಂಕ್ ಬಳಿ ಬನ್ನಿ...

ಸರ್... ಏನ್ಸಾರ್ ಇದ್ದಕ್ಕಿದ್ದಂತೆ ಮತ್ತೆ ಬಸ್ ಸ್ಫೋಟದ ಬಗ್ಗೆ ವಿಚಾರಿಸುತ್ತಿದ್ದೀರ ? ಏನಾದರೂ ಸುಳಿವು ಸಿಕ್ಕತ?
ಹಾ ವಿಜಯ್ ನೀವು ಮೊದಲು ಮಾಹಿತಿ ತಿಳಿದುಕೊಳ್ಳಿ, ನಾನು ನಿಮಗೆ ಬ್ಯಾಂಕ್ ಬಳಿ ಎಲ್ಲಾ ಹೇಳುತ್ತೇನೆ.

No comments:

Post a Comment