Friday, June 19, 2015

ಬ್ಲಾಸ್ಟ್ - 2



ಹಲೋ....

ಹೇಳಿ ವಿಜಯ್, ಏನಾದರೂ ಮಾಹಿತಿ ಸಿಕ್ತ?

ಸರ್, ಇಂಟೆಲಿಜೆನ್ಸ್ ಪ್ರಕಾರ ಯಾವುದೇ ಬೆದರಿಕೆಯಾಗಲಿ ಸಂದೇಶವಾಗಲಿ ಬಂದಿಲ್ಲ ಎಂದು ತಿಳಿದು ಬಂತು. ಇನ್ನು ಬಸ್ ಕಳುವಾಗಿರುವ ಬಗ್ಗೆಯೂ ಯಾವುದೇ ಕಂಪ್ಲೇಂಟ್ ರಿಜಿಸ್ಟರ್ ಆಗಿಲ್ಲ ಸರ್... ಯಾರೋ, ಪಕ್ಕಾ ಪ್ಲಾನ್ ಮಾಡಿ ಯಾವುದೇ ಕ್ಲೂ ಬಿಡದೆ ಕೆಲಸ ಮಾಡಿದ್ದಾರೆ ಸರ್... ಈಗ ಇನ್ನು ನಮಗೆ ಉಳಿದಿರುವ ಒಂದೇ ದಾರಿ ಎಂದರೆ ಡ್ರೈವರ್... ಅವನನ್ನು ಕಂಡು ಹಿಡಿದರೆ ಮಾತ್ರ ನಮಗೆ ಏನಾದರೂ ಮಾಹಿತಿ ಸಿಗಬಹುದು... ಇಲ್ಲದಿದ್ದರೆ ಬಹಳ ಕಷ್ಟ...

ಹೌದು ವಿಜಯ್... ನಿಮ್ಮ ಮಾತು ನಿಜ, ಡ್ರೈವರ್ ಒಬ್ಬನೇ ಈಗ ನಮಗೆ ಉಳಿದಿರುವ ಆಧಾರ. ಆದಷ್ಟು ಬೇಗ ಅವನನ್ನು ಹುಡುಕಲು ಪ್ರಯತ್ನಿಸಿ.

ಸರ್...ಅಲ್ಲಿ ಏನಾದರೂ ಮಾಹಿತಿ ಸಿಕ್ತ?

ಇನ್ನೂ ಇಲ್ಲ ವಿಜಯ್, ಬ್ಲಾಸ್ಟ್ ನಡೆದ ಆಚೆ ಕಿಮೀ ಈಚೆ ಕಿಮೀ ಯಾವುದೇ ಹಳ್ಳಿಯಾಗಲಿ ಊರಾಗಲಿ ಇಲ್ಲ... ಹಾಗಾಗಿ ಬಸ್ ಮೂರು ದಿನ ಎಲ್ಲಿತ್ತು ಎಂಬುದನ್ನು ಪತ್ತೆ ಮಾಡಬೇಕಿದೆ. ಬಸ್ಸನ್ನು ಯಾರೂ ಇಲ್ಲದ ಜಾಗದಲ್ಲಿ ಬ್ಲಾಸ್ಟ್ ನೋಡಿದರೆ ಅವರಿಗೆ ಯಾರನ್ನೂ ಸಾಯಿಸುವ ಉದ್ದೇಶ ಇದ್ದ ಹಾಗಿಲ್ಲ, ಬದಲಿಗೆ ಇದರ ಹಿಂದೆ ಬೇರೇನೋ ಉದ್ದೇಶ ಇದ್ದ ಹಾಗಿದೆ.... ನನಗೆ ಇನ್ನೂ ಒಂದು ಅನುಮಾನ ಕಾಡುತ್ತಿದೆ ಬೇರೆ ಯಾವುದೋ ಸಂಚು ಮಾಡಲು, ಇದನ್ನು ಸೃಷ್ಟಿಸಿ ನಮ್ಮ ದಾರಿ ತಪ್ಪಿಸುತ್ತಿದ್ದಾರ ಎಂದು... ಎಲ್ಲದಕ್ಕೂ ಡ್ರೈವರ್ ಒಬ್ಬನಿಂದಲೇ ನಮಗೆ ಉತ್ತರ ಸಿಗುವುದು... ಹ್ಮ್ .. ನೋಡೋಣ ನಾವು ಇವತ್ತು ಹಳ್ಳಿಗಳಲ್ಲಿ ವಿಚಾರಣೆ ಮಾಡಲು ಹೋಗುತ್ತಿದ್ದೇವೆ. ಅದರಿಂದ ಏನಾದರೂ ಪ್ರಯೋಜನ ಇದೆಯೋ ಎಂದು... ಯಾವುದಕ್ಕೂ ನೀವು ಕಾಂಟಾಕ್ಟ್ ನಲ್ಲಿರಿ ಎಂದು ಕರೆಯನ್ನು ಕಟ್ ಮಾಡಿ ವಿಚಾರಣೆಗೆ ಹೊರಟರು.

ಅಕ್ಕ ಪಕ್ಕದ ಹಳ್ಳಿಗಳಲ್ಲಿ ಮಾಡಿದ ವಿಚಾರಣೆಗಳಿಂದಲೂ ಯಾವುದೇ ಸುಳಿವು ಸಿಗದಿದ್ದಾಗ ಅಭಿಮನ್ಯು ಹತಾಶನಾಗಿ ವಾಪಸ್ ಹೊರಡುವ ಹೊತ್ತಿನಲ್ಲಿ ಊರಾಚೆ ಇದ್ದ ಸೈಕಲ್ ಪಂಕ್ಚರ್ ಹಾಕುವ ಹುಡುಗ ಬಂದು, ಸರ್ ಮೂರು ದಿನದಿಂದ ಬಸ್ ಅಲ್ಲಿ ರಸ್ತೆ ಮಧ್ಯೆ ಇರುವ ಕೆರೆ ಬಳಿ ಇತ್ತು ಎಂದು ಹೇಳಿದ. ಇನ್ನೇನಾದರೂ ವಿಷಯ ಗೊತ್ತಾ ಎಂದು ಕೇಳಿದ್ದಕ್ಕೆ ಇಲ್ಲ ಸರ್ ಎಂದು ಹೇಳಿ ಹೊರಟು ಹೋದ. ಹುಡುಗ ಕೊಟ್ಟ ಮಾಹಿತಿಯನ್ನು ಆಧರಿಸಿ ಅಭಿಮನ್ಯುವಿನ ತಂಡ ಕೆರೆ ಬಳಿ ಬಂದು ಏನಾದರೂ ಸುಳಿವು ಸಿಗಬಹುದೇನೋ ಎಂದು ಹುಡುಕಲು ಶುರು ಮಾಡಿದರು. ಸತತ ಎರಡು ಗಂಟೆ ಹುಡುಕಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ.

ಅಲ್ಲಿಂದ ಹತಾಶರಾಗಿ ಬರುತ್ತಿದ್ದಾಗ ವಿಜಯ್ ಕುಮಾರ್ ಕರೆ ಮಾಡಿದರು. ಸರ್ ನಿಮ್ಮ ಊಹೆ ನಿಜ ಆಗುತ್ತಿದೆ ಎಂಬ ಸಂದೇಹ ಬರುತ್ತಿದೆ ಸರ್. ಈಗಷ್ಟೇ ಒಂದು ಕರೆ ಬಂದಿತ್ತು. ಹೊಸಕೋಟೆಯಲ್ಲಿರುವ SBI ಬ್ಯಾಂಕ್ ನಲ್ಲಿ ದರೋಡೆ ಆಗಿದೆ ಎಂದು. ಸುಮಾರು ಕೋಟಿಗಳಷ್ಟು ಹಣ ಮತ್ತು ಒಡವೆಗಳು ಕಳುವಾಗಿದೆ ಎಂಬ ಮಾಹಿತಿ ಬಂದಿದೆ. ಇದನ್ನು ಮಾಡಿರುವವರು ಯಾರೋ ಬಸ್ಸನ್ನು ಸ್ಫೋಟಿಸಿ ನಮ್ಮ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಅನಿಸುತ್ತಿದೆ.

ದರೋಡೆ.... ಯಾವಾಗ?

ಸರ್...ಇಂದು ಬೆಳಿಗ್ಗೆ ಬ್ಯಾಂಕ್ ತೆರೆದಾಗ ಸಂಗತಿ ಬೆಳಕಿಗೆ ಬಂದಿದೆ.

ವಿಜಯ್... ಹಾಗಿದ್ದರೆ ಬಸ್ ಸ್ಫೋಟ ಇವತ್ತು ಆಗಬೇಕಿತ್ತು....ಸ್ಫೋಟ ಆಗಿರುವುದು ಮೊನ್ನೆ... ದರೋಡೆ ಆಗಿರುವುದು ಇಂದು... ನನಗೇನೋ ಅದಕ್ಕೆ ಇದಕ್ಕೆ ಸಂಬಂಧ ಇಲ್ಲ ಎನಿಸುತ್ತಿದೆ. ಅಂದ ಹಾಗೆ ಯಾರಿಗೆ ಒಪ್ಪಿಸಿದ್ದಾರೆ ದರೋಡೆ ಕೇಸನ್ನು?
ಸರ್...ಈಗ ಪ್ರಾಥಮಿಕ ತನಿಖೆಗೆ ಅಜಯ್ ಕುಮಾರ್ ಹೋಗಿದ್ದಾರೆ... ಮುಂದೆ ಯಾರನ್ನು ನೇಮಿಸಬೇಕೆಂದು ಚರ್ಚೆ ನಡೆಯುತ್ತಿದೆ. ನನ್ನನ್ನು ಕೇಳಿದರು... ನಾನು ಮತ್ತು ನೀವು ಸ್ಫೋಟದ ತನಿಖೆಯಲ್ಲಿ ಇದೀವಿ ಎಂದು ಹೇಳಿದ್ದಕ್ಕೆ ಸರಿ ನಾವು ಯೋಚಿಸಿ ಹೇಳುತ್ತೇವೆ... ಹೇಗಿದ್ದರೂ ಸ್ಫೋಟದ ತನಿಖೆ ಸಧ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ, ಅಲ್ಲಿಗೆ ಒಬ್ಬರಿದ್ದರೆ ಸಾಕು ಇನ್ನೊಬ್ಬರನ್ನು ದರೋಡೆ ಕೇಸ್ ಗೆ ನೇಮಿಸುತ್ತೇವೆ ಎಂದು ಹೇಳಿದ್ದಾರೆ.... ಆದರೆ ಯಾರೆಂದು ಚರ್ಚಿಸಿ ತಿಳಿಸುತ್ತಾರಂತೆ.

ಓಹೋ... ಸರಿ ಸರಿ... ಈಗ ಇದನ್ನು ಏನು ಮಾಡುವುದು ವಿಜಯ್?

ಅದೇ ತಿಳಿಯುತ್ತಿಲ್ಲ ಸರ್, ಇದ್ಯಾವುದೋ ದೊಡ್ಡ ಜಾಲ ಇದ್ದ ಹಾಗಿದೆ... ದರೋಡೆ ಆಗಿರುವ ಮೊತ್ತ ಸುಮಾರು ಐದು ಕೋಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗುತ್ತಿದೆ.. ಸರ್, ಒಂದು ನಿಮಿಷ.... IG ಕರೆ ಮಾಡುತ್ತಿದ್ದಾರೆ... ನಾನು ಮತ್ತೆ ನಿಮಗೆ ಕರೆ ಮಾಡುತ್ತೇನೆ.

ಹತ್ತು ನಿಮಿಷದ ನಂತರ.

ಹಲೋ, ಸರ್ IG ಹೇಳಿದ್ರು... ಈ ಕೂಡಲೇ ನಾವಿಬ್ಬರೂ ಸ್ಫೋಟದ ಕೇಸ್ ಬಿಟ್ಟು ದರೋಡೆ ಕೇಸನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸಂಜೆಯ ಒಳಗೆ IG ಆಫೀಸ್ ಗೆ ಬರಲು ಹೇಳಿದ್ದಾರೆ.

ಓಕೆ ವಿಜಯ್, ನಾನು ಈ ಕೂಡಲೇ ಹೊರಟು ಬರುತ್ತೇನೆ. ಅಲ್ಲಿ ಬಂದು ಫೋನ್ ಮಾಡುತ್ತೇನೆ. ಒಟ್ಟಿಗೆ IG ಆಫೀಸ್ ಗೆ ಹೋಗೋಣ.

ಸಂಜೆ

IG ಆಫೀಸ್ ಹೊರಗಡೆ, ವಿಜಯ್, ಅಭಿಮನ್ಯು ಮತ್ತು ಕಮಿಷನರ್ ನಡುವೆ ಮಾತುಕತೆ ನಡೆಯುತ್ತಿತ್ತು. ವಿಜಯ್ ಮತ್ತು ಅಭಿಮನ್ಯು ಈ ದರೋಡೆ ಕೇಸನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು...ಆ ಬಸ್ ಸ್ಫೋಟದ ತನಿಖೆ ಬೇರೊಂದು ತಂಡಕ್ಕೆ ವಹಿಸಿದ್ದೇನೆ. ಅದೂ ಅಲ್ಲದೆ ಅದರಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ, ಸುಮ್ಮನೆ ಅದರ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದರೆ... ಆಗುವ ಕೆಲಸವೂ ಆಗುವುದಿಲ್ಲ. IG ಬೆಳಿಗ್ಗೆ ಸುಮಾರು ಅರ್ಧ ಗಂಟೆ ಮಾತಾಡಿ ನಿಮ್ಮಿಬ್ಬರನ್ನೇ ಈ ಕೇಸಿಗೆ ನೇಮಿಸಬೇಕು ಎಂದು ಖುದ್ದಾಗಿ ಹೇಳಿ ಕರೆಸಿದ್ದಾರೆ.

ಅಷ್ಟರಲ್ಲಿ IG ಬಂದು ಮೂವರೂ ಒಳಗೆ ಹೋಗಿ ಸುಮಾರು ಒಂದು ಗಂಟೆಯ ಚರ್ಚೆಯ ನಂತರ ಆಚೆ ಬಂದು, ಅಭಿಮನ್ಯು ಮತ್ತು ವಿಜಯ್ IG ಹೇಳಿದ್ದು ಕೇಳಿದ್ರಿ ಅಲ್ಲವೇ... ಮೂರು ದಿನದ ಒಳಗೆ ಅವರಿಗೆ ದರೋಡೆಯ ರಹಸ್ಯ ಭೇಧಿಸಿ ಫಲಿತಾಂಶ ನೀಡಬೇಕು. ನಾಳೆಯ ಒಳಗೆ ಪ್ರಾಥಮಿಕ ವರದಿ ಬೇಕು... ನೀವು ನಾಳೆ ಬೆಳಿಗ್ಗೆಯೇ ಹೊಸಕೋಟೆಗೆ ಹೊರಟು ತನಿಖೆ ಶುರು ಮಾಡಿ.

ಓಕೆ ಸರ್, ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಹೊರಟು ಮಾರ್ಗ ಮಧ್ಯದಲ್ಲಿ ತಾವು ಆಗಾಗ ಮದ್ಯ ಸೇವಿಸುವ ರೂಂ ಗೆ ಬಂದು ಇಬ್ಬರೂ ಒಂದೊಂದು ಪೆಗ್ ಸುರಿದುಕೊಂಡು ಕುಡಿಯುತ್ತಾ....ಸರ್, ಬಹುಶಃ ಇತ್ತೀಚಿನ ದಿನಗಳಲ್ಲಿ ಆಗಿರುವ ಅತಿ ದೊಡ್ಡ ಮೊತ್ತದ ದರೋಡೆ ಇದು ಅನಿಸುತ್ತದೆ ಅಲ್ಲವೇ.... ಐದು ಕೋಟಿ ಎಂದರೆ ಯಾರೋ ಬಹಳ ಸಮಯದಿಂದ ಪ್ಲಾನ್ ಮಾಡಿ ಈ ಮಾಡಿದ್ದಾರೆ. ಆದರೆ ಈ ದರೋಡೆಗೂ ಬಸ್ ಸ್ಫೋಟಕ್ಕೂ ಏನಾದರೂ ಸಂಬಂಧ ಇದೆ ಎಂದು ಅನಿಸುತ್ತಿದೆಯ ನಿಮಗೆ?

ಅದೇ ವಿಜಯ್ ನನಗೂ ಅರ್ಥ ಆಗುತ್ತಿಲ್ಲ ಬಸ್ ಸ್ಫೋಟ ಆಗಿ ನಾಲ್ಕೈದು ದಿನದ  ಆದ ಮೇಲೆ ದರೋಡೆ ಆಗಿದೆ.... ಹಾಗೊಂದು ವೇಳೆ ನಮ್ಮ ದಿಕ್ಕು  ಉದ್ದೇಶವೇ ಇದ್ದಿದ್ದರೆ ಎರಡೂ ಒಂದೇ ದಿನ ಆಗಬೇಕಿತ್ತು... ಎಲ್ಲಾ ಗೊಂದಲಮಯವಾಗಿದೆ... ಇರಲಿ ನಾಳೆ ಸ್ಪಾಟ್ ಗೆ ಹೋಗಿ ನೋಡೋಣ ಎಂದು ನಿರ್ಧರಿಸಿ ಮತ್ತೊಂದು ಪೆಗ್ ಸುರಿದುಕೊಂಡರು. 

2 comments: