Monday, June 22, 2015

ಬ್ಲಾಸ್ಟ್ - 3



ಮಾರನೆ ದಿನ ಬೆಳಿಗ್ಗೆ ಹೊಸಕೋಟೆಯ ಬ್ಯಾಂಕ್ ಬಳಿ ಬಂದ ಅಭಿಮನ್ಯು ಮತ್ತು ವಿಜಯ್ ತಂಡ ಬ್ಯಾಂಕ್ ಒಳಗೆ ಹೋಗಿ ಬ್ಯಾಂಕಿನ ಮ್ಯಾನೇಜರ್ ಬಳಿ ಮಾತಾಡಿ ದರೋಡೆಯ ಜಾಗವನ್ನು ನೋಡಲು ಒಳಗೆ ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿ ಇಬ್ಬರೂ ಗಾಭರಿಯಾದರು. ಇದೇನು ವಿಜಯ್.... ಯಾರೂ ಇದರ ಬಗ್ಗೆ ಮಾಹಿತಿಯೇ ಕೊಡಲಿಲ್ಲ ಎಂದು ಮ್ಯಾನೇಜರ್ ಕಡೆ ತಿರುಗಿ ಏನ್ರೀ ಇದು ಇಷ್ಟು ದೊಡ್ಡ ಸುರಂಗ ಕೊರೆದಿದ್ದಾರೆ...!!! ಅಲ್ಲಿಂದ ಸಿಬ್ಬಂದಿಯನ್ನು ಕರೆಸಿ ಸುರಂಗದಲ್ಲಿ ಇಳಿದು ಎಲ್ಲಿಯವರೆಗೂ ಕೊರೆದಿದ್ದಾರೆ ಎಂದು ಪರಿಶೀಲಿಸಿದಾಗ ಅಲ್ಲಿಂದ ೫೦೦ ಮೀಟರ್ ಉದ್ದದ ಸುರಂಗ ಕೊರೆದಿದ್ದದ್ದು ಬೆಳಕಿಗೆ ಬಂತು. ಅಲ್ಲೇ ಇದ್ದ ಮನೆಯೊಂದರಿಂದ ಸುರಂಗ ಕೊರೆದಿದ್ದರು.

ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಎಲ್ಲ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿ ಮ್ಯಾನೇಜರ್ ಜೊತೆ ಮತ್ತೊಂದು ಕೊಠಡಿಗೆ ಬಂದ ವಿಜಯ್ ಮತ್ತು ಅಭಿಮನ್ಯು ಮ್ಯಾನೇಜರ್ ನನ್ನು ವಿಚಾರಿಸಲು ಶುರು ಮಾಡಿದರು. ಬ್ಯಾಂಕಿನ ಲಾಕರ್ ವರೆಗೂ ಯಾರ್ಯಾರಿಗೆ ಅನುಮತಿ ಇದೆ? ಮತ್ತು ಅಷ್ಟು ದೊಡ್ಡ ಮೊತ್ತ ಯಾಕೆ ಬ್ಯಾಂಕಿನಲ್ಲಿ ಇತ್ತು ?ಮತ್ತು ನಿಮ್ಮ ಸಿಬ್ಬಂದಿಯಲ್ಲಿ ನಿಮಗೆ ಯಾರ ಮೇಲಾದರೂ ಅನುಮಾನ ಉಂಟೆ?

ಸರ್... ಬ್ಯಾಂಕಿನಲ್ಲಿ ಅಷ್ಟು ದೊಡ್ಡ ಮೊತ್ತ ಇಡಲು ಕಾರಣ ಮಂಗಳವಾರ ಮಧ್ಯಾಹ್ನ ನಮ್ಮ ಗ್ರಾಹಕರೊಬ್ಬರು ಸುಮಾರು ನಾಲ್ಕು ಕೋಟಿಯಷ್ಟು ಹಣವನ್ನು ಡೆಪಾಸಿಟ್ ಮಾಡಿ ಹೋಗಿದ್ದರು. ಬುಧವಾರದಿಂದ ಶನಿವಾರದವರೆಗೂ ಬ್ಯಾಂಕ್ ಸ್ಟ್ರೈಕ್ ಇದ್ದಿದ್ದರಿಂದ ಅವತ್ತು ಜನಸಂದಣಿ ಜಾಸ್ತಿ ಇತ್ತು... ಅದಾಗಲೇ ಲೇಟ್ ಆಗಿದ್ದರಿಂದ ಸೋಮವಾರ ಹಣವನ್ನು ಪ್ರಧಾನ ಶಾಖೆಗೆ ಕಳುಹಿಸೋಣ ಎಂದುಕೊಂಡಿದ್ದೆವು. ಆದರೆ ಅಷ್ಟರಲ್ಲೇ ಹೀಗಾಗಿದೆ... ಇನ್ನು ಲಾಕರ್ ವರೆಗೂ ಅನುಮತಿ ಇರುವುದು ನನಗೆ ಮತ್ತು AGM ಗೆ ಮಾತ್ರ. ಸರ್... ನಮ್ಮ ಸಿಬ್ಬಂದಿ ಯಾರ ಮೇಲೂ ನಮಗೆ ಅನುಮಾನ ಇಲ್ಲ.... ಏಕೆಂದರೆ ಅವರೆಲ್ಲ ಬಹಳ ವರ್ಷಗಳಿಂದ ಸೇವೆಯಲ್ಲಿದ್ದಾರೆ ಮತ್ತು ಅವರೆಲ್ಲ ಪ್ರಾಮಾಣಿಕರು. ಇದು ಯಾರೋ ಆಚೆಯವರ ಕೆಲಸವೇ ಇರಬೇಕು...
ಹ್ಮ್....ಸರಿ ನಾವಿನ್ನು ಹೊರಡುತ್ತೇವೆ, ಆಮೇಲೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಕರೆಸಿ ಮುಂದಿನ ತನಿಖೆ ಆರಂಭಿಸುತ್ತೇವೆ... ಅಂದ ಹಾಗೆ ದರೋಡೆಯ ವಿಷಯ ತಿಳಿದು ಅಷ್ಟು ದೊಡ್ಡ ಮೊತ್ತವನ್ನು ಇಟ್ಟ ನಿಮ್ಮ ಗ್ರಾಹಕ ಇನ್ನೂ ಬಂದಿಲ್ಲವೇ? ದರೋಡೆಯ ವಿಷಯ ಖಂಡಿತ ಅವನಿಗೆ ತಿಳಿದೇ ಇರುತ್ತದೆ.... ಯಾಕಂದರೆ ಈಗಾಗಲೇ ವಿಷಯ ಎಲ್ಲ ಪೇಪರ್ ಗಳಲ್ಲಿ, ನ್ಯೂಸ್ ಚಾನಲ್ಗಳಲ್ಲಿ ಬ್ರೆಕಿಂಗ್ ನ್ಯೂಸ್ ಎಂದು ಬಿತ್ತರಗೊಳ್ಳುತ್ತಿದೆ.

ಇಲ್ಲ ಸರ್, ವ್ಯಕ್ತಿ ಹೇಳಿದ್ದ... ಅವನು ವಿದೇಶಕ್ಕೆ ಹೋಗುತ್ತಿರುವುದಾಗಿ ಅಲ್ಲಿಂದ ಬಂದ ಮೇಲೆ ಬರುತ್ತೇನೆ ಅಂದರೆ ನೆನ್ನೆ ಬರುತ್ತೇನೆ ಎಂದು ಹೇಳಿದ್ದ. ಆದರೆ ಇಲ್ಲಿಯವರೆಗೂ ಬಂದಿಲ್ಲ.. ನಮಗೆ ಅದೊಂದು ಭಯ ಶುರುವಾಗಿದೆ... ಅವನು ಬಂದು ಅವನ ಮೊತ್ತವನ್ನು ಕೇಳಿದರೆ ಏನು ಮಾಡುವುದು?

ನೀವೇನೂ ಯೋಚಿಸಬೇಡಿ...  ಜವಾಬ್ದಾರಿ ನಮಗೆ ಬಿಡಿ... ನನ್ನ ಊಹೆ ನಿಜವಾಗಿದ್ದರೆ ಅವನಿಗೆ ಪರಿಚಯ ಇರುವ ಯಾರೋ ದರೋಡೆ ಮಾಡಿರಬಹುದೆಂದು ಅನುಮಾನ ಬರುತ್ತಿದೆ... ಇರಲಿ ವ್ಯಕ್ತಿ ಬಂದ ಕೂಡಲೇ ನಮಗೆ ಮಾಹಿತಿ ನೀಡಿ ಎಂದು ಅಲ್ಲಿಂದ ಹೊರಟರು.

ವಿಜಯ್ ಬ್ಯಾಂಕ್ ಮ್ಯಾನೇಜರ್ ಹೇಳಿಕೆ ನೋಡಿದರೆ ಇದರಲ್ಲಿ ಅವರ ಪಾತ್ರ ಏನೂ ಇಲ್ಲ ಎನಿಸುತ್ತಿದೆ.  ಅವರು ಹೇಳಿದ ಹಾಗೆ ಇದು ಆಚೆಯವರ ಕೆಲಸವೇ... ಮೊದಲು ಸೌರಂಗ ಕೊರೆದಿರುವ ಮನೆ ಯಾರದು ಮತ್ತು ಮನೆಯಲ್ಲಿ ಯಾರು ಇದ್ದಿದ್ದು ಎಂದು ಪತ್ತೆ ಹಚ್ಚಬೇಕು. ಕೂಡಲೇ ಅದರ ತನಿಖೆ ನಡೆಸಬೇಕು... ಮತ್ತು ಅಷ್ಟು ಹಣ ಬ್ಯಾಂಕಿನಲ್ಲಿ ಇಟ್ಟವನು ಯಾರು ಅವನ ಹಿನ್ನಲೆ ಏನು ಎಂದು ಪತ್ತೆ ಹಚ್ಚಬೇಕು. ಹಾಗೆಯೇ ಬಸ್ ಸ್ಫೋಟದ ಬಗ್ಗೆಯೂ ಏನಾದರೂ ಮಾಹಿತಿ ದೊರೆಯುತ್ತದ ಎಂದು ನೋಡುತ್ತಿರಬೇಕು.... ಏನಾದರೂ ಸಣ್ಣ ಸುಳಿವು ಸಿಕ್ಕರೂ ಸಾಕು. ಅಷ್ಟರಲ್ಲಿ ಅಭಿಮನ್ಯುವಿನ ಮೊಬೈಲ್ ರಿಂಗಾಯಿತು...
ಸರ್, ನಾನು ಬ್ಯಾಂಕ್ ಮ್ಯಾನೇಜರ್ ಮಾತಾಡುತ್ತಿರುವುದು, ಹಣ ಇಟ್ಟ ವ್ಯಕ್ತಿ ಬಂದಿದ್ದಾನೆ. ಅವನಿಗೆ ದರೋಡೆ ವಿಷಯ ಗೊತ್ತಿರಲಿಲ್ಲವಂತೆ, ಇಂದು ಬೆಳಿಗ್ಗೆ ತಾನೇ ವಿದೇಶದಿಂದ ಬಂದವನು ಸೀದಾ ಇಲ್ಲಿಗೆ ಬಂದಿದ್ದಾನೆ, ದರೋಡೆ ವಿಷಯ ತಿಳಿದು ಗಲಾಟೆ ಮಾಡುತ್ತಿದ್ದಾನೆ... ಈಗ ಏನು ಮಾಡುವುದು?

ನೀವು ಒಂದು ಕೆಲಸ ಮಾಡಿ.. ವ್ಯಕ್ತಿಯನ್ನು ಅಲ್ಲೇ ಕೂಡಿಸಿಕೊಂಡಿರಿ, ನಾವು ಕೂಡಲೇ ಹೊರಟು ಬರುತ್ತೇವೆ.
ಹಣ ಇಟ್ಟಿರುವ ವ್ಯಕ್ತಿಯನ್ನು ಭೇಟಿ ಮಾಡಲು ಅಭಿಮನ್ಯು ಮತ್ತು ವಿಜಯ್ ಬ್ಯಾಂಕಿನ ಬಳಿ ಬಂದಾಗ, ವ್ಯಕ್ತಿ ಜೋರಾಗಿ ಗಲಾಟೆ ಮಾಡುತ್ತಿರುವುದು ಕಂಡು ಬಂದು ವ್ಯಕ್ತಿಗೆ ತಮ್ಮ ಪರಿಚಯ ಮಾಡಿಕೊಂಡು ಅಲ್ಲಿಂದ ಅವನನ್ನು ಒಳಗಡೆ ಕರೆದುಕೊಂಡು ಹೋಗಿ ಸುಮಾರು ಹೊತ್ತು ವಿಚಾರಣೆ ಮಾಡಿದ ಮೇಲೆ ವ್ಯಕ್ತಿ ಇಟ್ಟಿರುವ ಹಣದ ಬಗ್ಗೆ ಬೇರೆ ಯಾರಿಗೂ ಮಾಹಿತಿ ಇಲ್ಲದಿರುವುದಾಗಿ ತಾನು ಒಂದು ಜಾಗವನ್ನು ಕೊಂಡುಕೊಳ್ಳುವ ಸಲುವಾಗಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದಾಗಿ ತಿಳಿಸಿದ ಮತ್ತು ವ್ಯಕ್ತಿಯ ಯಾವುದೇ ಹೇಳಿಕೆ ಸಂಶಯಾಸ್ಪದವಾಗಿ ಇರಲಿಲ್ಲ.

ಹಣದ ವಿಚಾರ ಪತ್ತೆ ಆದ ಕೂಡಲೇ ತಮಗೆ ಮಾಹಿತಿ ನೀಡುವುದಾಗಿ ತಿಳಿಸಿ ವ್ಯಕ್ತಿಯನ್ನು ಕಳುಹಿಸಿಕೊಟ್ಟು ಅಲ್ಲಿಂದ ಹೊರಡುವಷ್ಟರಲ್ಲಿ IG ಕರೆ ಮಾಡಿದ್ದರು. ಅಭಿಮನ್ಯು, ದರೋಡೆಯ ಬಗ್ಗೆ ಏನಾದರೂ ಮಾಹಿತಿ ದೊರೆಯಿತ?
ಸರ್, ನಾವು ತನಿಖೆ ಮುಂದುವರೆಸಿದ್ದೇವೆ... ಆದಷ್ಟು ಬೇಗ ನಿಮಗೆ ಮಾಹಿತಿ ಕೊಡುತ್ತೇನೆ.

ಅಭಿಮನ್ಯು ಮೇಲಿನಿಂದ ಒತ್ತಡ ಹೆಚ್ಚಾಗುತ್ತಿದೆ, ಆದಷ್ಟು ಬೇಗ ಕೇಸ್ ಮುಗಿಸಬೇಕೆಂದು, ಇಲ್ಲವಾದಲ್ಲಿ ಸೆಂಟ್ರಲ್ ಇಂದ ವಿಶೇಷ ತಂಡವನ್ನು ಕರೆಸುವುದಾಗಿ ಹೇಳುತ್ತಿದ್ದಾರೆ.

IG ಮಾತನ್ನು ಕೇಳಿದ ಅಭಿಮನ್ಯುಗೆ ಕೋಪ ತಾಳಲಾಗದೆ, ಸರ್ ಕರೆಸಲು ಹೇಳಿ... ಅವರಿಗೆ ಏನು ಗೊತ್ತಾಗತ್ತೆ ನಮ್ಮ ಕಷ್ಟ, ಹಗಲು ರಾತ್ರಿ ಎನ್ನದೆ ತನಿಖೆಯಲ್ಲಿ ಒದ್ದಾಡುತ್ತಿದ್ದೇವೆ, ನಾವೇನು ಇಲ್ಲಿ ಆರಾಮಾಗಿ ಓಡಾಡಿಕೊಂಡಿಲ್ಲ ಸರ್, ದರೋಡೆ ಮಾಡುವವರು ಏನು ನಮಗೆ ಹೇಳಿ ಮಾಡುತ್ತಾರ... ಕೂಡಲೇ ಕಂಡು ಹಿಡಿಯುವುದಕ್ಕೆ...
ಅಭಿಮನ್ಯು ನಿಮ್ಮ ಕಷ್ಟ ನನಗೆ ಅರ್ಥ ಆಗತ್ತೆ, ಆದರೆ ಏನು ಮಾಡುವುದು ನಿಮಗೆ ಗೊತ್ತಲ್ಲ ಮೇಲಿನವರು ಹೇಗೆ ಮಾತಾಡುತ್ತಾರೆ ಎಂದು... ಸರಿ ಬಿಡಿ, ನಾನು ಹೇಗೋ ಅವರಿಗೆ ಸಮಜಾಯಿಷಿ ಕೊಡುತ್ತೇನೆ... ನೀವು ಆದಷ್ಟು ಬೇಗ ಇದನ್ನು ಪತ್ತೆ ಹಚ್ಚಲು ನೋಡಿ.
 
ಖಂಡಿತ ಸರ್, ದರೋಡೆ ಮಾಡಿರುವವರು ಯಾವುದೇ ಸಣ್ಣ ಸುಳಿವು ಸಹ ಬಿಟ್ಟಿಲ್ಲ... ಅಲ್ಲಿಗೂ ನಾವು ಸಿಟಿ ಸುತ್ತ ನಾಕಾಬಂದಿ ಹಾಕಿಸಿದ್ದೇವೆ, ಯಾವುದೇ ಅನುಮಾನಕರ ಗಾಡಿ ಅಥವಾ ವ್ಯಕ್ತಿಗಳು ಕಂಡು ಬಂದರೆ ತಪಾಸಣೆ ಮಾಡಿಸುತ್ತಿದ್ದೇವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಏರ್ ಪೋರ್ಟ್ ಎಲ್ಲಾ ಕಡೆ ತಪಾಸಣೆ ನಡೆಸುತ್ತಿದ್ದೇವೆ... ಅವರು ಸಿಟಿ ಬಿಟ್ಟು ಎಲ್ಲೂ ಹೋಗಿರುವ ಸಾಧ್ಯತೆ ಇಲ್ಲ.. ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಿ ನಿಮ್ಮ ಮುಂದೆ ಒಪ್ಪಿಸುತ್ತೇನೆ ಎಂದು ಕರೆ ಕಟ್ ಮಾಡಿ ವಿಜಯ್ ಕಡೆ ನೋಡಿ, ವಿಜಯ್ ಇದು ನಮ್ಮ ಕೆರಿಯರ್ ಗೆ ದೊಡ್ಡ ಸವಾಲು... ತನಿಖೆಯನ್ನು ಚುರುಕುಗೊಳಿಸಿ, ಇನ್ನೊಂದು ಸುತ್ತು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ... ಹಾಗೆ ಮನೆಯ ಓನರ್ ಯಾರೆಂದು ಶೀಘ್ರ ಪತ್ತೆ ಮಾಡಿ ಅವನನ್ನು ಕರೆತರಲು ಹೇಳಿ.

No comments:

Post a Comment